ವಿಜಯನಗರ / ಹಂಪಿ : ಹಂಪಿ ಕನ್ನಡ ವಿಶ್ವವಿದ್ಯಾಲಯದ 33ನೇ ನುಡಿಹಬ್ಬ ಸಮಾರಂಭವು ಏ. 4 ರಂದು ಸಂಜೆ ವಿವಿ ಆವರಣದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಿತು. ಈ ವೇಳೆ ಗಣನೀಯ ಸಾಧನೆ ಮಾಡಿದ ಮೂರು ಜನ ಗಣ್ಯರಿಗೆ ವಿಶ್ವವಿದ್ಯಾಲಯ ಕೊಡ ಮಾಡುವ ಪ್ರತಿಷ್ಟಿತ ನಾಡೋಜ ಗೌರವ ಪದವಿಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು. ರಾಯಚೂರು ಜಿಲ್ಲೆಯವರಾದ
ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶರಾದ ಜಸ್ಟೀಸ್ ಶಿವರಾಜ್ ವಿ.ಪಾಟೀಲ್, ಪ್ರಖ್ಯಾತ ಬರಹಗಾರರು ಮತ್ತು ಚಿಂತಕರಾದ ಕೊಟ್ಟೂರಿನವರಾದ ಕುಂ.ವೀ. ಅವರಿಗೆ ಕಳೆದ ವರ್ಷವೇ ನಾಡೋಜ ಗೌರವ ನೀಡಲು ಶಿಫಾರಸು ಮಾಡಲಾಗಿತ್ತು. ಈ ವರ್ಷ ಕುಂ.ವೀರಭದ್ರಪ್ಪ (ಕುಂ.ವೀ) ಹಾಗೂ ಸಂಡೂರು ಮೂಲದವರಾದ ಪ್ರಖ್ಯಾತ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್ ಅವರಿಗೆ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಲಾಯಿತು.
ನುಡಿಹಬ್ಬದಲ್ಲಿ 198 ಮಂದಿಗೆ ಪಿಎಚ್.ಡಿ.ಪದವಿ ಪ್ರದಾನ ಮಾಡಲಾಯಿತು. ದೇವದಾಸಿಯರ ಬದುಕಿನ ಬಗ್ಗೆ ಅಧ್ಯಯನ ನಡೆಸಿ ಸ್ವತಃ ದೇವದಾಸಿಯ ಮಗನೇ ಪಿಎಚ್.ಡಿ. ಪಡೆದಿದ್ದಾರೆ. ನಾಲ್ವರು ಅಂಗವಿಕಲರು ಸಹ ಈ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದ, ತಳಸಮುದಾಯದ ಹಲವರು ಉನ್ನತ ಶಿಕ್ಷಣ, ಸಂಶೋಧನೆಯ ಕನಸು ಕಂಡು ಇಲ್ಲಿ ಸಫಲರಾಗಿದ್ದಾರೆ.
7 ಮಂದಿಗೆ ಡಿ.ಲಿಟ್:
ಇಬ್ಬರು ಯಕ್ಷಗಾನ ಕಲಾವಿದರಾದ ತಾರಾನಾಥ ವರ್ಕಾಡಿ, ಸುರೇಂದ್ರ ಪಣಿಯೂರು, ಕೃಷಿಕರಾದ ಜಿ.ಪುರುಷೋತ್ತಮ ಗೌಡ ಅವರು ಸಲ್ಲಿಸಿದ ಮಹಾಪ್ರಬಂಧವನ್ನು ಮನ್ನಿಸಿ ಡಿ.ಲಿಟ್ ನೀಡಲಾಗಿದೆ. ಇದರ ಜತೆಗೆ ವಿವಿಧ ವಿಷಯಗಳಲ್ಲಿ ಜ್ಯೋತಿ ಎಂ., ಕೆ.ಆರ್.ವಿದ್ಯಾಧರ, ಮುಕ್ತಾ ಬಿ.ಕಾಗಲಿ, ರೂಪಾ ಅಯ್ಯರ್ ಅವರು ಸಿದ್ಧಪಡಿಸಿದ ಪ್ರಬಂಧಗಳನ್ನು ಮನ್ನಿಸಿ ಡಿ.ಲಿಟ್ ಪದವಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್, ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಜಾಸಾಬ್ ಎಂ.ಎಚ್, ಹಂಪಿ ವಿವಿ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
