ಗಗನಕ್ಕೇರಿದೆ ಅಗತ್ಯ
ವಸ್ತುಗಳ ಬೆಲೆ,
ರೈತ ಬೆಳೆದ ಬೆಳೆಗೂ
ಇಲ್ಲವಾಗಿದೆ ಬೆಲೆ,
ಕಳೆದು ಕೊಂಡಿದೆ
ಜನತೆ ತಮ್ಮ ನೆಲೆ,
ದಿಕ್ಕು ಕಾಣದಂತಾಗಿ
ಕಂಗಾಲಾಗಿದ್ದಾರೆ,
ಉದ್ಯೋಗ ಅರಸಿ ಗುಳೆ,
ಹೊರಟಿದ್ದಾರೆ,
ಸಂಭ್ರಮ ಪಡಲು ಏನೂ
ಉಳಿದಿಲ್ಲ,ಇಂಥ ಹೊತ್ತಲ್ಲಿ
ಮತ್ತೆ ಬಂದಿದೆ, ಅಣ್ಣಾ ನಿನ್ನ
ಜಯಂತಿ,!
ನಿನ್ನ ತತ್ವ, ಸಿದ್ಧಾಂತಗಳು
ನಮ್ಮವರಿಗೆ ಬೇಕು,ಆದರೆ
ಕಾಯಕ ಮಾತ್ರ ಬೇಡ,
ಸುಖ ಜೀವನ ಬೇಕು,
ಎಂತಹ ವಿಚಿತ್ರ ವಿಪರ್ಯಾಸವಲ್ಲವೆ?,ಕಾಯಕವೇ ಕೈಲಾಸ ಎಂದು ಸಾರಿ ಹೇಳಿದೆ, ನೀ ಅಂದು, ಕಾಯವನು ದಂಡಿಸದೆ ,ದುಂಡಗಾಗಿಹರು
ಕೆಲವರಿಂದು,
ಅಂದಿನ ನಿನ್ನ ಮಾತಿಗೆ
ಕವಡೆ ಕಾಸಿನ ಕಿಮ್ಮತ್ತಿಲ್ಲ, ಆದರೂ…
ನಿನ್ನ ಜಯಂತಿಯ ದಿನ,
ನಿನ್ನ ಫೋಟೋಗೆ ಪೂಜಿಸುತ್ತಾರೆ , ಹಾಕಿ
ಹೂವಿನ ಹಾರ,!
“ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಬೇಡಿ,'” ಎಂದ
ನಿನಗೆ ಅದನ್ನೇ ಮಾಡುತ್ತಿರುವರು!
ಸದಾಚಾರ ಬೋಧಿಸಿ
ಸುಜನರ ಪ್ರೀತಿಸಿ, ನೀನಾದೆ
ಕ್ರಾಂತಿ ಸೂರ್ಯ, ಜಗಜ್ಯೋತಿ,
ಭಕ್ತಿ ಭಂಡಾರಿ ಬಸವೇಶ,
ನೀನೀಗ ಇದ್ದಿದ್ದರೆ….?
ಈ ಜಗದ ಜನರಾಟವ
ನೋಡಲಾಗದೆಂದು ಕಣ್
ಮುಚ್ಚುತ್ತಿದ್ದೆ,! ನಿನ್ನ ಜನ್ಮ
ಸಾರ್ಥಕವಾಯಿತು,
ಇದನೆಲ್ಲ ನೋಡುತಿರುವ
ನಾವೇ ಪಾಪಿಗಳು! ನಿನ್ನ ಹೆಸರನ್ನು ಬಳಸುತ್ತಾ,
ಏನೆಲ್ಲ ಮಾಡುತ್ತೇವೆ!..
ಆಚರಿಸುತ್ತೇವೆ,ಮತ್ತೆ
ಬಂದಿದೆ ಬಸವ ಜಯಂತಿ ಎಂದು!….. ಆಚರಿಸುತ್ತಲೇ
ಇರುತ್ತೇವೆ, ಮತ್ತೆ,ಮತ್ತೆ!

- ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು.
ಸ.ಪ್ರ.ದ.ಮಹಿಳಾ ಕಾಲೇಜು, ಕೊಪ್ಪಳ.
ಮೊಬೈಲ್ ಸಂಖ್ಯೆ. ೭೯೯೬೭೯೦೧೮೯.
