ಶ್ರಮಿಕರಿದ್ದರೇನೇ ಶ್ರೀಮಂತರು
ಶ್ರಮವಹಿಸಿ ದುಡಿವವರೆ ಕಾರ್ಮಿಕರು
ಕೆಲಸದಲಿ ಮೇಲುಕೀಳೆಂಬ ಭಾವವಿಲ್ಲ
ದುಡಿಯದಿರೆ ಹಸಿದ್ಹೊಟ್ಟೆಗೆ ಅನ್ನವಿಲ್ಲ
ಮಳೆಗಾಳಿ ಎನದೇ ಉತ್ತು ಬಿತ್ತುವನು ರೈತ
ಜಗದ ಜನರಿಗವನೆ ನಿಜದಿ ಅನ್ನದಾತ
ತನಗಾಗದೆಂದು ಹಿಂದೆ ಸರಿದರೆ ಅವ
ತರುವುದೆಲ್ಲಿಂದ ಹೇಳಿ ಹಿಡಿ ಅನ್ನವ?
ಹೊತ್ತು ಸಿಮೆಂಟು ಮರಳು ಜಲ್ಲಿಕಲ್ಲು
ಇಟ್ಟಿಗೆ ಮೇಲಿಟ್ಟಿಗೆ ಪೇರಿಸಿದಾಗ ಮಹಲು
ಕ್ಷಮತೆಯಲಿ ಕಟ್ಟುವನವ ಸುಂದರ ಭವನವ
ಆದರವ ಹರುಕು ಗುಡಿಸಿಲಲ್ಲೇ ವಾಸಿಸುವ
ಹಗಲಿರುಳೆನ್ನದೆ ದುಡಿವ ಸೈನಿಕರು
ಪ್ರಾಣಪಣಕ್ಕಿಟ್ಟು ಕಾಪಿಡುವ ಪಾಲಕರು
ಸಮಾಜವ ನಿರೀಕ್ಷಿಸುವನವ ಆರಕ್ಷಕರ
ಆಪತ್ಕಾಲಕ್ಕಿವನೇ ಸಕಲರ ಜೀವರಕ್ಷಕ
ನಿಜ, ವೈದ್ಯೋ ನಾರಾಯಣೋ ಹರಿಃ.!
ಆರೋಗ್ಯವೇ ಸಕಲ ಭಾಗ್ಯಗಳ ಐಸಿರಿ.!
ದುಡಿವ ಜಗಕೆ ತಾನೂ ಅಭಿಯಂತರ.!
ನಿರಂತರ ನಿಲ್ಲದ ನಡೆಯ ಆವಿಷ್ಕಾರ.!
ಎಲ್ಲರದ್ದೊದ್ದೊಂದೊಂದು ಕಾಯಕ
ಎಲ್ಲವೂ ಒಂದಕ್ಕೊಂದು ಪೂರಕ
ಶ್ರೇಷ್ಠ ಕನಿಷ್ಟವಾವುದೂ ಇಲ್ಲ ತಿಳಿ
ಎಲ್ಲರನ್ನೂ ಗೌರವಿಸುವುದ ಕಲಿ
ಕಾರ್ಮಿಕರೇ ದೇಶದ ದೊಡ್ಡ ಆಸ್ತಿ
ನಾನುನಾನೆಂದು ಮಾಡದಿರಿ ಕುಸ್ತಿ
ಕಾಯಕವಿದು ಎಲ್ಲವೂ ಸರಿ ಸಮಾನ
ಕಾರ್ಮಿಕರೇ ನಿಮಗಿದೋ ನಮನ
- ಎಮ್. ಹೆಚ್. ಹುಡೇದ
