ಬುದ್ಧನಾಗಬೇಕೆಂಬ ಹಂಬಲದಿಂದಲೇ,
ಮಧ್ಯ ರಾತ್ರಿ ಎದ್ದು ಕುಳಿತೆ, ಕಣ್ಣಿಗೇನೂ ಕಾಣುತ್ತಿಲ್ಲ
ಅರೆ, ಕರೆಂಟು ಹೋಗಿದೆ,
ಕರೆಂಟ್ ಬಂದ ಮೇಲೆ
ಹೋದರಾಯಿತೆಂದೆ, ಕಣ್ಣು ಮುಚ್ಚಿದೆ, ನಿದ್ದೆಗೆ ಜಾರಿದೆ!
ಬೆಳಕು ಹರಿದರೂ ನನ್ನ ನಿದ್ದೆಗಿನ್ನೂ ಕತ್ತಲೆಯೇ ಇತ್ತು,
ಮತ್ತೆ ಮರುದಿನವೂ ಇದೇ ರಾಗ, ಇದೇ ಹಾಡು,
ಮಧ್ಯ ರಾತ್ರಿ ಎದ್ದು,
ಹೋಗಬೇಕೆನ್ನುವಷ್ಟರಲ್ಲಿ,
ಯಾವುದೋ ಶಕ್ತಿ ನನ್ನನ್ನು
ತಡೆದು ನಿಲ್ಲಿಸುತ್ತಿದೆ, ಹೀಗಾಗಿ,
ನನಗನಿಸುತ್ತಿದೆ ನಾನಾಗಲಾರೆ, ಬುದ್ಧ,
ಯಾಕೆಂದರೆ, ಎಲ್ಲವನ್ನೂ
ತ್ಯಜಿಸಿ ಅವನಾದ ಬುದ್ಧ,
ನಾನೋ ಎಲ್ಲವೂ ಇರಲೆಂಬ
ಆಸೆಗೆ ಬದ್ಧ!
ಅವನು ಬುದ್ಧ,
ನಾನು ಬದ್ಧ, ಅಲ್ಲಲ್ಲ ಪೆದ್ದ!
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ.
