ಪರಿಚಿತನೋ ಅಪರಿಚಿತನೋ
ಕಟ್ಟುವ ಕರಿಮಣಿಗೆ ಕೊರಳಾಗಿ
ತನ್ನದಲ್ಲದ,ತನ್ನವರೂ ಇರದ ಮನೆಗೆ
ಹೆಜ್ಜೆಯನಿಟ್ಟು ಬಂದಾಕಿಗೆ…
ಹುಡುಗ ಅಡಕಿ ಚೂರು ತಿನ್ನೋದಿಲ್ಲ
ಅನ್ನೋ ಮಾತಿನ ಮೇಲೆ ಭರವಸೆ ಹೊತ್ತು
ಹೆಂಡತಿಯಾಗಿ, ಸೊಸೆಯಾಗಿ ನಡಿಯಲು ಬಂದಾಕೆಗೆ…
ತುಂಬಿದ ಚರಿಗಿ ಎತ್ತಿ ಕೊಡಲಾರದವಳು ಸಂಸಾರದ ನೊಗ ಹೊತ್ತು,ತಲೆ ಮೇಲೆ ಭಾರ ಹೊತ್ತು, ಬಿಸಿಲು ಮಳೆಗೆ ಮಾಗಿದಾಕಿಗೆ …
ತನ್ನ ಕೈಯಲ್ಲಿಲ್ಲ ಬಸಿರಿಗೆ ಕೊಂಕು ಮಾತುಗಳ ಸಹಿಸಿ
ಕಂಡದೇವರಿಗೆ ಹರಕೆ ಹೊತ್ತು, ಉಪವಾಸ ಮಾಡಿ ನಾಲ್ಕು ಮಕ್ಕಳ ಹೆತ್ತಾಕೆಗೆ…
ಉಟ್ಟ ಸೀರೆಗೆ ತೇಪೆ ಹಚ್ಚಿ
ಹಸಿದ ಹೊಟ್ಟೆಗೂ ತಣ್ಣೀರ ಕುಡಿದು
ದುಡಿದ ದುಡ್ಡಲ್ಲಿ ಚೌಕಾಸಿ ಮಾಡಿ ಅಂಗಿ ಚಡ್ಡಿ,ಲಂಗಾ ಕುಪ್ಪಸ ಕೊಂಡು ತಂದು ಮಕ್ಕಳಿಗೆ ಹಾಕಿ ಖುಷಿಯ ಕಂಡಾಕೆಗೆ …
ನನ್ನಂಗ ಮಕ್ಕಳಾಗಬಾರದೆಂದು ತಾನು ಕಲಿಯದಿದ್ದರೂ ಮಕ್ಕಳಿಗೆ ಕಲಿಸಿ
ಅವರಪಾಡಿಗೆ ಅವರು ಚಂದಿರ್ಲಿ ಅಷ್ಟ ಸಾಕು ನನಗೆ ಎಂದು ಎದೆ ಉಬ್ಬಿಸಿ ಹೇಳಿದಾಕೆಗೆ…
ಸಾಲ ಶೂಲ ಮಾಡಿ ಎದೆಯುದ್ದ ಬೆಳೆದ ಮಕ್ಕಳಿಗೆ ಹುಡುಕಿ ಹುಡುಕಿ ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ತಂದು ಊರಿಗೆ ಊಟ ಹಾಕಿ ಮದುವೆ ಮಾಡಿ ಸಾಲ ತೀರಿಸಲು ಜೀತದಾಳು ಆದಾಕಿಗೆ …
ಗಾದೆಯಂತೆ ಮಕ್ಕಳು ಮದುವೆಯಾದ ಮೇಲೆ ತಮ್ಮ ತಮ್ಮ ಡಬ್ಬಿಗಳೊಂದಿಗೆ ಮಾಡುವ ಕೆಲಸಗಳ ಊರುಗಳಲ್ಲಿ ಹಾಯಾಗಿದ್ದು, ಹುಟ್ಟಿದೂರು, ಹೆತ್ತವರ ಮರೆತವರ ಬರುವಿಕೆಗೆ ದಾರಿ ಕಾಯುವಾಕೆಗೆ…
ವರ್ಷಕ್ಕೊಮ್ಮೆ ಬರುವ ಮಕ್ಕಳು,ಮೊಮ್ಮಕ್ಕಳ ಇಳಿಸದೇ ಕೊಂಕುಳಲ್ಲಿ ಎತ್ತಿಕೊಂಡು ಊರು ಸುತ್ತಿ ಇವ ನನ್ನ ಮೊಮ್ಮಗ,ಮೊಮ್ಮಗಳು ಎಂದು ಊರಿಗೆಲ್ಲಾ ಸುದ್ದಿ ಮಾಡಿದಾಕೆಗೆ…
ವಯಸು ಮೀರಿ, ಬೆನ್ನು ಬಾಗಿ ಇಳಿ ವಯಸಿನಲಿ ಒಂಟಿಯಾಗಿ ಉಸಿರು ನಿಲ್ಲೋವರೆಗೂ ಮಕ್ಕಳ,ಮೊಮ್ಮಕ್ಕಳ ಪ್ರೀತಿಗೆ ಹಾತೊರೆಯುವಾಕೆಗೆ…
ಸಿಟಿ ಸೇರಿದ ಮಕ್ಕಳೆಲ್ಲಾ ತರಹೇವಾರಿ ಮೊಬೈಲುಗಳಲ್ಲಿ ಎಂದೋ ತೆಗೆದ ಅವ್ವನ ಫೋಟೋವನ್ನು ಸ್ಟೇಟಸ್ಸಿಗಾಕಿ ಹ್ಯಾಪಿ ಮದರ್ಸ್ ಡೇ ಡಿಯರ್ ಅವ್ವಾ, ಅಮ್ಮ ಅಂತ ಇನ್ನೊಬ್ಬರಿಗೆ ತೋರಿಸಲು ಹಾಕಿದ್ದನ್ನು ನೋಡಲಾರದಕಿಗೆ…
ಇರುತನಕ ಮಕ್ಕಳ ನೆನೆದು ಉಸಿರು ನಿಂತಾಗ ನಾಲ್ಕು ಹಿಡಿ ಮಣ್ಣು ಹಾಕಲೂ ಬಾರದ ಮಕ್ಕಳಿಗೆ ಜನ್ಮ ನೀಡಿದಾಕೆಗೆ…
ಕೇಳಿ ಹೇಳುವೆ
ಇಂದು ಅವ್ವಂಗೆ ಬಂದ ಸ್ಥಿತಿ ನಾಳೆ ನಮಗೂ ಪಕ್ಕಾ…
ಯಾಕಂದ್ರೆ ನಾವೂ ಅವ್ವ,ಅಪ್ಪ ಆಗವ್ರೆ…
ನಮ್ಮ ಮಕ್ಕಳು ನಮಗೆ ಮಾಡಿದಾಗ,ನಾವು ಮಾಡಿದ್ದ ನೆನೆದು ತಪ್ಪಾಯ್ತು ಅಂತ ಕೊರಗುವ ಮೊದಲು
ಹೆತ್ತವರ ಅಪ್ಪಿ, ಹೊಟ್ಟೆಯಲಿ ಹುಟ್ಟಿದ್ದಕ್ಕಾದರೂ ಒಪ್ಪಿ ಇದ್ದಾಗಲೇ ಋಣ ತೀರಿಸಿ ಬಿಡಿ… ಇರೋತನ ಅವ್ವ ಅನ್ನುವ ಪದವನಷ್ಟೇ ಕರೆಯುತಿರಿ
ಹೋದಮೇಲೆ ಕರೆದರೂ ಬಾರದವರ ಇದ್ದಾಗಲೇ ಅವ್ವ ಅಪ್ಪ ಅಂತ ಕರೆದು ಬಿಡಿ..ಮಕ್ಕಳಾಗೆ ಇದ್ದುಬಿಡು ಮಕ್ಕಳಂತೆ ನೋಡಿಬಿಡಿ…

- ವೀರೇಶ್ ತೇರದಾಳ, ಶಿಕ್ಷಕರು.
ಅಧ್ಯಕ್ಷರು ,ಮಕ್ಕಳ ಸಾಹಿತ್ಯ ಪರಿಷತ್ತು ಲಿಂಗಸುಗೂರು ತಾಲೂಕು.
