ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನುಪಮ ಒಲವಿನ ಶಾಹಿರಿಗಳು :ನೂರ್ ಹನ್ನೊಂದು ಶಾಯಿರಿಗಳು

ಶಾಯಿರಿ ಸಂಕಲನ
ಸಂಪಾದಕರು: ಯಲ್ಲಪ್ಪ ಹರ್ನಾಳಗಿ
ಸಹ ಸಂಪಾದಕರು: ಮರುಳುಸಿದ್ದಪ್ಪ ದೊಡ್ಡಮನಿ

ಈ ಕೃತಿಯಲ್ಲಿ ಪರಮೇಶ್ವರಪ್ಪ ಕುದರಿ, ಯಲ್ಲಪ್ಪ ಹರ್ನಾಳಗಿ, ಮರುಳಸಿದ್ದಪ್ಪ ದೊಡ್ಡಮನಿ, ಶಿವಪ್ರಸಾದ ಹಾದಿಮನಿ, ಕೊಟ್ರೇಶ್ ಜವಳಿ, ಈರಪ್ಪ ಬಿಜಲಿ, ಶಿಲ್ಪಾ ಮ್ಯಾಗೇರಿ, ಹನುಮಂತ ಸೋಮನಕಟ್ಟಿ, ರಜನಿ ಅಶೋಕ ಜೀರಗ್ಯಾಳ, ವೀರಪ್ಪ ನಿಂಗೋಜಿ, ಶ್ರೀನಿವಾಸ ಚಿತ್ರಗಾರ…ಹನ್ನೊಂದು ಸುಖನವರ್ ಗಳ ಹತ್ತತ್ತು ಶಾಯಿರಿಗಳಿವೆ. ಕನ್ನಡ ಶಾಯಿರಿ ಲೋಕದಲ್ಲಿ ಇದೊಂದು ಹೊಸ ಪ್ರಯೋಗ ಎನ್ನಬಹುದು.
ಪರ್ಷಿಯನ್ ಹಾಗೂ ಅರೆಬಿಕ್ ಭಾಷೆಯಲ್ಲಿ ಉದಯಿಸಿದ ‘ಶಾಯಿರಿ’ ರೂಪವು ಸಂವೇದನಾಶೀಲವಾಗಿದೆ. ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಶಾಯಿರಿಗಳಲ್ಲಿ ವ್ಯಕ್ತವಾಗುವ ಒಲವಿನ ಬಗೆಯಂತೂ ಅನುಪಮ.
 
ಶ್ರೀ ಪರಮೇಶ್ವರಪ್ಪವ ಕುದರಿಯವರು ಮೂಲತಃ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದವರು. ಈವರೆಗೆ ಎಂಟು ಕೃತಿಗಳನ್ನು ಹಾಗು ಹಲವು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಇವರು ಹಾಸ್ಯ ಪರಿಚಾರಕರೂ ಆಗಿದ್ದು ಹಾಸ್ಯ ಕಾರ್ಯಕ್ರಮಗಳು ಉದಯ ಟಿವಿ., ಸುವರ್ಣ, ಟಿವಿ.9., ಜೀ ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗಿವೆ. ಇವರ ಶಾಯಿರಿ…
ದೇವ್ರು, ಈ ಹೃದಯಾನ
ದೇಹದ ಒಳಗಿಟ್ಟು
ಬಾಳ ಚೊಲೋ ಕೆಲಸ ಮಾಡಿದ !!
ಇಲ್ಲಾಂದ್ರ ಒಡದ ಹೋದ
ಹೃದಯಾನ ಎಲ್ಲಾರ್ಗೂ
ತೋರಸ್ಗೊಂತ ಓಡ್ಯಾಡಬೇಕಿತ್ತು!
 
ಎಂದೆನ್ನುವ ಶ್ರೀ ಪರಮೇಶ್ವರಪ್ಪ ಕುದರಿಯವರ ಶಾಯಿರಿ ತಮಾಷೆ ಎನಿಸಿದರೂ ಸತ್ಯ ಸಂಗತಿ ಎಂದು ಓದುಗರ ಮೊಗದಲ್ಲಿ ತುಂಟ ನಗು ಮೂಡಿಸುತ್ತೆ. ಒಲವು ಪ್ರೀತಿ ಎಂದಾಗ ಹೃದಯಕ್ಕೆ ತಟ್ಟಿದ ಭಾವವಾಗಿರುತ್ತೆ ಹಾಗಾಗಿ ಅದು ದಕ್ಕದೆ ಇದ್ದ ಸನ್ನಿವೇಶ ಕುರಿತು ನಾನಾ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಶಾಯಿರಿ ಇದಾಗಿದೆ. ಪರಸ್ಪರರ ಪ್ರೀತಿಯನ್ನು ಹೃದಯ ಅರಿಯಬಲ್ಲದೆ ಹೊರತು ಮಾತಿನಿಂದ ವಿವರಿಸಲು ಅಸಾಧ್ಯ ಎಂಬುದನ್ನು ಈ ಶಾಯಿರಿ ವಿವರಿಸುತ್ತದೆ.
 
ಶ್ರೀ ಮರುಳಸಿದ್ದಪ್ಪ ದೊಡ್ಡಮನಿಯವರು ಗದಗ ಜಿಲ್ಲೆಯ ಹುಲಕೋಟಿ ಗ್ರಾಮದವರಾಗಿದ್ದು ಮುತ್ತಿನ ಹನಿ, ನೆಲದ ಧನಿ, ಹನಿ ಹನಿ, ಮರುಳನ ಶಾಯಿರಿ ಲೋಕ, ಉರಿವ ಬಿಸಿಲೊಳಗೆ, ವಚನಾಮೃತ ಮತ್ತು ಎದೆಯೊಳಗಿನ ಮಾತು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಶಾಯಿರಿ…

       ದೇವರ ಆಟದ ಮುಂದ
   ಯಾರ ಆಟಾನೂ ನಡೆಯಂಗಿಲ್ಲ !
            ಆಂವ ಕೈ ಬಿಟ್ಟರ
ಈ ಜಗದಾಗ ನಾವು ಯಾರೂ ಉಳಿಯಂಗಿಲ್ಲ!!

         
ಎನ್ನುವ ಶ್ರೀ ಮರುಳಸಿದ್ದಪ್ಪ ದೊಡ್ಡಮನಿಯವರ ಶಾಯಿರಿ ನಾವಿರುವ ಜಗತ್ತು ಸುಂದರವಾಗಿರಲಿ ನಮ್ಮೊಡನಿರುವವರ ನಡೆ – ನುಡಿ ಅಪ್ಯಾಯಮಾನವಾಗಿರಲಿ ನಾವು ನಂಬಿದ ದೇವರು ನಮ್ಮ ಕೈ ಹಿಡಿದು ನಡೆಸಲಿ. ನನ್ನ ಸಮಾಜ ಹೇಗಿದ್ದರೆ ಚೆನ್ನ ಅನ್ನುವ ಅತ್ಮೀಯ ಆಶಯಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸುವ ಕವಿಗೆ ದೇವರ ಬಗೆಗಿನ ಸಾಮಾಜಿಕ ಜವಾಬ್ದಾರಿಯ ಪ್ರಶ್ನೆ ಇದೆ. ಜನ ಸ್ಪಂದನೆಯ ಗುಣವಿದೆ ಹಾಗಾಗಿ ದೇವರ ಬಗೆಗೆ ಮಹತ್ವವಾದ ವಿಚಾರವನ್ನು ಹೇಳಲು ಅವರು ಈ ಶಾಯಿರ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ.
ಶ್ರೀ ಯಲ್ಲಪ್ಪ ಹರ್ನಾಳಗಿಯವರು “ಯಮಹ” ಎಮಬ ಕಾವ್ಯನಾಮದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದು ವೃತ್ತಿಯಿಂದ ಶಿಕ್ಷಕರು. ಈವರೆಗಿನ ಪ್ರಕಟಿತ ಪುಸ್ತಕಗಳ ಸಂಖ್ಯೆ ಎಂಟು.

ನನ್ನ ಪ್ರೀತಿಯನ್ನೊಮ್ಮೆ ಹೊಳ್ಳಿ ನೋಡು ಗೆಳತಿ,
ನಿನ್ನ ನೆಳ್ಳಿಗೆ ನೆಳ್ಳಾಗಿ ನಿಲ್ಲತೇನಿ!
ಆ ನೆಳ್ಳಿಗು ಕಪ್ಪ ಹತ್ತಲಾರದಂಗ ನಾ ಕಪ್ಪಾಗಿ ಇರ್ತಿನಿ!!
        
ವೈ ಎಮ್ ಹರ್ನಾಳಗಿ ಯವರ ಈ ಶಾಯಿರಿ ಪ್ರಾಮಾಣಿಕ ಪ್ರೀತಿ ಮಹತ್ವ ಎತ್ತಿ ತೋರಿಸುತ್ತದೆ. ಒಲವಿನ ಮಹತ್ವದಲ್ಲಿ ಗೆಳತಿಯ ಮನ ಆಕರ್ಷಿಸಲು ಸ್ಪಷ್ಟತೆಯ ಪ್ರೀತಿ ಪ್ರದರ್ಶನ ಗೊಳ್ಳಲು ಕಷ್ಟಕ್ಕೆ ನಾನಾಗುವೆ ಎನ್ನುವುದನ್ನು ಕಪ್ಪು ಬಣ್ಣಕ್ಕೆ ಸುಮಧುರವಾಗಿ ಹೋಲಿಸಿ ಹೇಳಲಾಗಿದೆ. ಇವರ ಇಂತಹ ಶಾಯಿರಿಗಳ ಚಿಂತನ ಮತ್ತು ಪ್ರೀತಿಯ ಧ್ಯಾನಸ್ಥ ಸ್ಥಿತಿಯೊಂದಿಗೆ ಅರಳಿ ಪರಿಮಳಿಸಲಿ ಎಂದು ಆಶಿಸುವೆ.
ಹಾಗೆಯೇ…
ಶ್ರೀ ಶಿವಪ್ರಸಾದ ಹಾದಿಮನಿ ಸರ್ ಅವರು ಹಾಯ್ಕು, ಹನಿಗವನ, ಕವಿತೆಗಳ ಮೂಲಕ ಸಾಹಿತ್ಯವಲದಯದಲ್ಲಿ ಗುರುತಿಸಿಕೊಂಡವರು. ಹಾದಿಮನಿ ಅವರದ್ದು ಹೊಸತನಕ್ಕೆ ಮುಖಾಮುಖಿಯಾಗುವ ಪ್ರಯೋಗಶೀಲ ಮನಸ್ಸು. 
ಇವರು ಗಂಭೀರ ಓದಿನ ಮೂಲಕ ಓದುಗರ ಗಮನ ಸೆಳೆಯುವ ವೈವಿಧ್ಯಮಯ ಶಾಹಿರಿಗಳನ್ನು ಬರೆದಿದ್ದಾರೆ. ಪ್ರೀತಿ, ಸ್ನೇಹ, ಪ್ರೇಮ, ಮೊದಲಾದವುಗಳ ಬಗೆಗೆ ಉತ್ತಮ ಶಾಹಿರಿಗಳನ್ನು ಬರೆದಿದ್ದಾರೆ.
ಅವುಗಳಲ್ಲಿ….
 ಹೇ ಹುಡುಗ 
 ನೀನೇ ಕಟ್ಟಬೇಕು ನೋಡು,
         ನನ್ನ ಕೊಳ್ಳಿಗೆ ತಾಳಿ!
         ಹೌದೇನ ಹುಡುಗಿ 
     ನಿನ್ನ ಕೊಳ್ಳಿಗೆ ನಾನೇ ಕಟ್ತಿನಿ ಬಿಡು ತಾಳಿ,
ಕಟ್ಟಿದ ಮ್ಯಾಲೆ ತಾಳಿ ನೀನಾಗ್ ಬಾರ್ದು ಕಾಳಿ!!
ಶಿವಪ್ರಸಾದ್ ಹಾದಿಮನಿಯವರ ಈ ಶಾಯಿರಿ ಪ್ರೀತಿ ಬಗೆಗೆ ಮನುಷ್ಯನ ಸ್ವಭಾವ ಹೇಳುತ್ತದೆ. ಸಂಸಾರದಲ್ಲಿ ಪತಿ-ಪತ್ನಿ ಪಾತ್ರವನ್ನು ಕೂಡ ಮನಮುಟ್ಟುವಂತೆ ಹೇಳುತ್ತದೆ. ವಿವಾಹದಲ್ಲಿ ಪರ್ಯವಸಾನವಾಗುವ ಪ್ರೇಮದಿಂದ ಮಾನವ ವರ್ಗ ಸೃಷ್ಟಿಯಾಗುತ್ತದೆ. ಸ್ನೇಹದಿಂದ ಮನುಷ್ಯನ ಲೋಪದೋಷಗಳು ಬೇರ್ಪಟ್ಟು ಅವರು ಅನ್ಯೋನ್ಯರಾಗುತ್ತಾರೆ. ಪತ್ನಿಗೆ ಸಹನೆ ಅತಿ ಮುಖ್ಯ ಎಂದು ತಿಳಿಸಲಾಗಿದೆ. ಹೆಚ್ಚು ಸಹನೆಯಿಂದ ವರ್ತಿಸುವುದು ಮುಖ್ಯ.
ಆದರೆ ಪತ್ನಿಯ ಕೋಪದ ಮನೋಭಾವನೆಯನ್ನು ತಿಳಿ ಹೇಳಲು ಕಠೋರವಾಗಿರಬಾರದು ಎನ್ನುವ ವಾಸ್ತವ ಸ್ಥಿತಿಯನ್ನು ಹಾಸ್ಯಮಯವಾಗಿ ಈ ಶಾಹಿರಿಯಲ್ಲಿ ಹೇಳಲಾಗಿದೆ.
ಏ ಹುಡುಗಿ ಊರ ಮುಂದಿನ ಬಾವಿ
ನಿನ್ನ ಮನೆ ಹಿಂದಿನ ಹಿತ್ತಲ
ಇತಿಹಾಸ ಆಗಿ ಹೋಯ್ತಲ್ಲ!
ಈಗ ನೆನಪಿನ ಕೋಟೆ ಕೊತ್ತಲ!!
ವೃತ್ತಿಯಿಂದ ಕೃಷಿಕ ಆಗಿರುವ ಶ್ರೀ ಕೊಟ್ರೇಶ್ ಜವಳಿ ಯವರ ಈ ಶಾಯಿರಿಯು ಗ್ರಾಮೀಣ ಭಾಗದ ಸೊಗಡನ್ನ ಹಾಗೂ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಪ್ರೀತಿ ಕಳೆದುಕೊಂಡಾಗ ಮೊದಲು ಭೇಟಿಯಾದ ಕ್ಷಣಗಳು ಸ್ಥಳಗಳು ಅಂದರೆ ಊರ ಮುಂದಿನ ಬಾವಿ, ಮನೆಯ ಹಿಂದಲ ಹಿತ್ತಲ ಇವೆಲ್ಲ ಇತಿಹಾಸವಾಗುತ್ತವೆ ಎಂಬುದನ್ನು ಈ ಶಾಯಿರಿ ಹೇಳುತ್ತದೆ.

   ಕಾಡು ಕಗ್ಗಲ್ಲು ಶಿಲ್ಪಿ ಕೈಯಾಗ ಸಿಕ್ರ
 ಸುಂದರ ಮೂರ್ತಿ ಆಗಬಹುದು ಇಲ್ಲಾ ಮೆಟ್ಲು
  ಆಗಬಹುದು!!
ಅಂಗ ನಾನೂ ನಿನ್ನ ಕೈಯಾಗ ಸಿಕ್ರ
ಸಂಸಾರಿ ಆಗಬಹುದು ಇಲ್ಲ ತತ್ವಜ್ಞಾನಿಯಾಗಬಹುದು!!

ವೃತ್ತಿಯಿಂದ ಶಿಕ್ಷಕರಾಗಿರುವ ಶ್ರೀ ಈರಪ್ಪ ಬಿಜಲಿ ಯವರ ಈ ಶಾಯಿರಿ ಶಿಲ್ಪಿ ಹಾಗೂ ಪ್ರೀತಿ ಬಗೆಗೆ ಇದೆ. ಶಿಲ್ಪಿ ಕೈಯಾಗ ಕಲ್ಲು ಸಿಕ್ಕರೆ ಸುಂದರ ಮೂರ್ತಿ ಆಗುತ್ತೆ ಅಥವಾ ದೇವಾಲಯದ ಮೆಟ್ಟಿಲಾಗುತ್ತದೆ. ಹಾಗೆಯೇ ಪ್ರೇಯಸಿ ಸಿಕ್ಕರೆ ಸಂಸಾರಿಯಾಗುತ್ತೇನೆ ಅಥವಾ ಎಲ್ಲ ವಿಷಯದ ಅಧ್ಯಯನ ಮಾಡುವ ತತ್ವಜ್ಞಾನಯಾಗುತ್ತೇನೆ ಎನ್ನುವ ಶಾಯಿರಿ ತುಂಬಾ ಆಕರ್ಷಕವಾಗಿದೆ.
ಅಂತಾದ್ದೇನೈತಿ
ಈ ಜೀವನದಾಗ ಬಂದಿದ್ದ ಉಣಬೇಕು
ಕರದಾಗ ಎದ್ದ ಹೋಗ್ಬೇಕು
ಕತ್ತಲು ಬೆಳಕು ಎಲ್ಲಾ ಅವನ ಮನಸಿನಂಗ!!

ಗದುಗಿನ ತೋಂಟದಾರ್ಯ ಶಿಕ್ಷಣ ಸಂಸ್ಥೆಯಾದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಶಿಲ್ಪಾ ಮ್ಯಾಗೇರಿ ಯವರ ಈ ಶಾಯಿರಿ ಬದುಕಿನ ಬಗೆಗೆ ತಿಳಿ ಹೇಳುತ್ತದೆ.
ಬದುಕು ಏಕೆ? ಬದುಕು ಹೇಗೆ? ಎಂಬ ವಿಚಾರದ ಪ್ರಶ್ನೆಗಳ ತರ್ಕ, ಪಾಂಡಿತ್ಯಗಳಿಗೆ ಸಂಬಂಧಪಟ್ಟ ವಸ್ತುಗಳಲ್ಲ. ವಿವೇಚನೆಗೆ ಪ್ರಾಮಾಣಿಕತೆಗೆ ಸಂಬಂಧಪಟ್ಟವು ಅವು ಎಂಬ ಡಾ|| ಶಿವರಾಮ ಕಾರಂತರ ‘ಅಳಿದ ಮೇಲೆ’ ಎಂಬ ಕೃತಿಯಲ್ಲಿನ ಬರಹವನ್ನು ಬದುಕಿನ ಬಗೆಗಿನ ಈ ಶಾಯಿರಿ ನೆನಪಿಸಿತು.
ಈ ಕೆಟ್ಟ ಮನದಾಗ ಕುಂತು
ಒಮ್ಮೆ ನಗಸ್ತೀದಿ ಒಮ್ಮೆ ಅಳಸ್ತೀದಿ
ನನ್ನ ಬಿಟ್ಟು ನೀನ ದೂರ ಹೋಗಿ
ಮಂದಿ ಕೂಡ ನಂಗ ಯಾಕ ಹಿಂಗ ಅನಸ್ತೀದಿ

ಶ್ರೀ ಹನುಮಂತ ಸೋಮನಕಟ್ಟಿ ಯವರ ಈ ಶಾಯಿರಿ ಪ್ರೀತಿ ಬಗೆಗೆ ಇರುವ ಶಾಯರಿ ಇದಾಗಿದೆ. ಪ್ರೀತಿ ಅಪ್ರಸನ್ನರನ್ನು ಪ್ರಸನ್ನರಾಗಿಯೂ ಅವಿಶ್ವಾಸಿಗಳನ್ನು ವಿಶ್ವಾಸಿಗಳನ್ನಾಗಿಯೂ, ಅಸುಖಿಗಳನ್ನು ಸುಖಿಗಳನ್ನಾಗಿಯೂ ಮಾಡಬಲ್ಲುದು. ಪ್ರೀತಿಯೂ ನಮ್ಮನ್ನು ಪಟ್ಟಕ್ಕೇರಿಸಬಲ್ಲಂತೆ ಶೂಲಕ್ಕೇರಿಸಲೂಬಹುದು. ಅದು ನಮ್ಮನ್ನು ಎತ್ತರಿಸಬಲ್ಲಂತೆ ಕತ್ತರಿಸಲೂಬಲ್ಲದು ಎಂಬುದನ್ನು ತಿಳಿಸುವಂತಿದೆ.
ಶ್ರೀಮತಿ ರಜನಿ ಅಶೋಕ ಜೀರಗ್ಯಾಳ ಅವರು ಬಹುಮುಖ ಪ್ರತಿಭೆಯುಳ್ಳವರು… ಅವರ ಶಾಯಿರಿ…
ಪ್ರೀತಿ ಸಿಕ್ತದೋ ಇಲ್ಲೋ ನಾ ಚಿಂತಿ ಮಾಡಂಗಿಲ್ಲ
ಆಕೆ ನಗಿ ಮಾರಿ ನೋಡದೆ ದಿನ ಹ್ಯಾಂಗ ಕಳಿಲಿ
ಅನ್ನೋದ ತಿಳಿತಿಲ್ಲ ನಕ್ಕರ ನಗಲೇಳ ಮಂದಿ
ನನಗ ಫರಕ ಬೀಳಂಗಿಲ್ಲ
ಆಕಿ ಮಾರಿ ತಿರುವಿದರ ನನ್ನ ಬದುಕ ನಡೆಯಂಗಿಲ್ಲ!!
ಇದೊಂದು ಪ್ರೀತಿ ಬಗ್ಗೆ ಮನಮೋಹಕ ಶಾಯಿರಿ. ಪ್ರೀತಿ ನಿಜವಾದ ಅರ್ಥವಿರುವುದು ತ್ಯಾಗದಲ್ಲಿ. ಪ್ರೀತಿ ಅನಂತ ಅವ್ಯಾತ. ಪ್ರೀತಿ ಎಂದಿಗೂ ತನ್ನ ನಾವೀನ್ಯತೆಯನ್ನು ಕಳೆದುಕೊಳ್ಳಲಾರದು. ಪ್ರೇಮ ಮನವನ್ನು ಬೃಂದಾವನವನ್ನಾಗಿ ಮಾಡುವ ಶಕ್ತಿ ಪುಂಜ.
ಪತ್ರಕರ್ತರಾಗಿ, ಸಾಹಿತಿಗಳಾಗಿ ಸಮಾಜದ ಸೇವಕರಾಗಿ ಗುರುತಿಸಿಕೊಂಡಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ *ಶ್ರೀ ವೀರಪ್ಪ ಮಲ್ಲಪ್ಪ ನಿಂಗೋಜಿಯವರು ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದಾಗ ಕೇವಲ ಮೂರು ವರ್ಷದಲ್ಲಿ ಸುಮಾರು 15 ಸಮ್ಮೇಳನಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಶಾಯಿರಿ ಹೀಗಿದೆ…..
ಹಗಲಿನ್ಯಾಗ ಸೂರ್ಯ
ರಾತ್ರಿಯಲ್ಲಿ ಚಂದ್ರ ಇದ್ದರ
ಜಗಕ್ಕೆ ಬೆಳಕು ಇರತೈತಿ!!
ನೀ ನನ್ನ ಜೊತೆಗಿದ್ದರ
ಹಗಲು- ರಾತ್ರಿ ಆದರೂ
ಮನ್ಯಾಗ ಬೆಳಕು ಸದಾ ಇರತೈತಿ!
ಅನ್ಯೋನ್ಯ ಪ್ರೇಮವೇ ಜೀವನದ ಆನಂದಾತಿಶಯದ ಕಿರೀಟ. ಪ್ರೇ ಮೊಟ್ಟಮೊದಲು ಹೃದಯದ ಕೋರಕಿಯನ್ನು ಪ್ರವೇಶಿಸಿದಾಗ ಅದರ ವಿದ್ಯುತ್ ಸ್ಪರ್ಶದಿಂದ ಜಡ ಜಗತ್ತು ಚೇತನ ಪೂರ್ಣವಾಗುತ್ತದೆ. ಹಾಗಾಗಿ ಕವಿ ಇಲ್ಲಿ ಮನ್ಯಾಗ ಮನದಾಗ ಸದಾ ಬೆಳಜು ಇರತೈತಿ ಎನ್ನುತ್ತಾರೆ.
ಶ್ರೀನಿವಾಸ ಚಿತ್ರಗಾರ ಶಿಕ್ಷಕರು ವಿಶ್ವಪ್ರಸಿದ್ಧವಾದ ಕಿನ್ನಾಳ ಗ್ರಾಮದವರು. ಇವರು ಕಿನ್ನಾಳ ಕಲಾವಿದರು ಹಾಗೂ ಸಾಹಿತಿಗಳು ಸಂಘಟಕರು ಸಮಾಜ ಸೇವಕರು. ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಹದಿನೈದಕ್ಕೂ ಹೆಚ್ಚು ಕೃತಿಗಳನ್ನು ಅವರದೇ ಆದ ಶ್ರೀ ನಿಮಿಷಾಂಬ ಪ್ರಕಾಶನದ ಮೂಲಕ ಬಿಡುಗಡೆ ಮಾಡಲಾಗಿದೆ. ಇವರ ನೂರೆಂಟರ ಗಂಟು ಹಿಂದಿ ಭಾಷೆಗೆ ಅನುವಾದಗೊಂಡಿದೆ. ಇವರ ಶಾಯಿರಿ….
ಅಲ್ಲಿ ನಿಧಿ ಐತಿ ಅಂತ ಬಾರೋ ಅಂದ್ರು,
ಆದ್ರ ಅವರಿಗೇನು ಗೊತ್ತು
ಇಲ್ಲಿ ನನ್ನೆದೆ ಒಳಗ ನನ್ನಾಕಿಯ
ಪ್ರೀತಿಯ ನಿಧಿ ಮುಂದ ಅವೆಲ್ಲಾ ನನ್ನ ಕಾಲ್ ಕಸ ಅಂತ!
ಪ್ರೀತಿಯ ಕುರಿತು ಇವರ ಶಾಯಿರಿ ನಿಜಕ್ಕೂ ಮೋಹಕವಾಗಿದೆ. ಪ್ರೀತಿಯ ಬಂಧನಕ್ಕಿಂತ ಉಚ್ಚವಾದುದೂ ಬಲವಾದುದೂ ಯಾವುದೂ ಇಲ್ಲ. ಬದುಕಿನ ಪ್ರದಾನ ಶಕ್ತಿ ಪ್ರೀತಿ. ಪ್ರೇಮ ಬಾಳಿನ ಮಹಾಸೂತ್ರ. ಇವರ ಶಾಯಿರಿ ಕುವೆಂಪುರವರ ” ಮಡದಿ ಅಪ್ಸರಿ, ಮನೆಯ ನಂದನ, ಮುಕ್ತಿಯೈಸಿರಿ ಪ್ರೇಮಬಂಧನ” ಎನ್ನುವುದನ್ನು ನೆನಪಿಸಿತು.
ಒಟ್ಟಾರೆ ಇಲ್ಲಿನ ಶಾಯಿರಿಗಳು ಪರಸ್ಪರ ದ್ವೀಪಗಳಂತಾಗಿರುವ ಮನಗಳನ್ನು ಉತ್ಸಾಹದಲ್ಲಿ ಅರಳಿಸುವಂತಿವೆ. ಓದುಗರ ಒಲವಿನ ಮನ ಚಪ್ಪರಿಸಿ ಆಸ್ವಾದಿಸುವ ರೀತಿಯಲ್ಲಿ “ನೂರ್ ಹನ್ನೊಂದು ಶಾಹಿರಿಗಳು” ಮೂಡಿಬಂದಿವೆ. ಇಂತಹ ಶಾಯಿರಿಗಳು ಇನ್ನೂ ಹೆಚ್ಚೆಚ್ಚು ಇವರಿಂದ ಹೊರಹೊಮ್ಮಲಿ ಹಾಗೂ ಓದುಗರ ಮನ ತಣಿಯಲಿ ಎಂದು ಆಶಿಸುವೆ.

  • ಅನ್ನಪೂರ್ಣ ಪದ್ಮಸಾಲಿ, ಕೊಪ್ಪಳ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ