ಬಳ್ಳಾರಿ/ ಕಂಪ್ಲಿ : ದಂಪತಿಗಳಲ್ಲಿ ಪರಸ್ಪರ ಸಹಾಯ, ಸಹಕಾರ, ಅನ್ಯೋನ್ಯತೆ ಇದ್ದರೆ ಅವರ ದಾಂಪತ್ಯ ಮಧುರವಾಗಿರುತ್ತದೆ. ಜೀವನದಲ್ಲಿ ಕಷ್ಟ ಇಲ್ಲದೆ ಇದ್ದರೆ ನಮಗೆ ಸುಖದ ಅನುಭೂತಿಯೇ ಆಗುತ್ತಿರಲಿಲ್ಲ. ಕಷ್ಟ ಬಂದಾಗ ದಂಪತಿಗಳು ಧೃತಿಗೆಡದೆ ಪರಸ್ಪರ ಸಮಾಲೋಚನೆ ಮಾಡುತ್ತಾ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಅಂದಾಗ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಇರುತ್ತದೆ. ದಾಂಪತ್ಯ ಎನ್ನುವುದು ಕೇವಲ ಗಂಡು ಹೆಣ್ಣು ಒಟ್ಟಿಗೆ ಜೀವಿಸುವುದಲ್ಲ ಇದು ಪ್ರೀತಿ ವಿಶ್ವಾಸಗಳ ಸಂಗಮ ಎಂದು ಯಡಿಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಅಪ್ರತಿಮ ವಾಗ್ಮಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ 64ನೇಯ ಸ್ಮರಣೆಯಲ್ಲಿ ಹಮ್ಮಿಕೊಂಡ ‘ಮಹಿಳಾ ರತ್ನ ಹಾಗೂ ಆದರ್ಶ ದಂಪತಿ’ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮುಂದುವರೆದು ಮಾತನಾಡಿದ ಶ್ರೀಗಳು ಬರುವ ಸೆಪ್ಟೆಂಬರ್ 1 ರಿಂದ ಇಡೀ ರಾಜ್ಯಾದ್ಯಂತ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ನಾಡಿನ ಜನತೆಗೆ ತಿಳಿಸುವ ದೃಷ್ಟಿಯಿಂದ “ಬಸವ ಸಂಸ್ಕೃತಿ ಅಭಿಯಾನ”ವನ್ನು ಹಮ್ಮಿಕೊಳ್ಳಲಾಗುತ್ತಿದ್ದು ನಾಡಿನ ಜನತೆ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.
ಮಹಿಳಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಹಿಂದುಸ್ತಾನಿ ಗಾಯಕಿ, ಕಂಪ್ಲಿಯ ಅಕ್ಕಿಗಿರಣಿ ಮಾಲೀಕರ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಅವರ ಪುತ್ರಿ ರೋಹಿಣಿ ಗಂಗಾಧರಯ್ಯ ಕರಜಗಿಮಠ ಸಂಗೀತ ಕಲಿಯಲು ಯಾವುದೇ ಜಾತಿ ಮತಗಳ ಭೇದವಿಲ್ಲ. ಸಂಗೀತವು ನಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಮನಸ್ಸಿಗೆ ನೆಮ್ಮದಿ ನೀಡುವುದರ ಮೂಲಕ ವ್ಯಕ್ತಿಯನ್ನು ಚೈತನ್ಯಯುತವನ್ನಾಗಿಸುತ್ತದೆ. ಭಾರತೀಯ ಸಂಗೀತಕ್ಕೆ ಮನುಷ್ಯನನ್ನು ಆರೋಗ್ಯವಂತನನ್ನಾಗಿಸುವ ಶಕ್ತಿ ಇದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ, ನಟ ಕೆ. ವಿ. ನಾಗರಾಜ ಮೂರ್ತಿರವರಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಟ ಕೆ ವಿ ನಾಗರಾಜ ಮೂರ್ತಿ ಅವರ ಧರ್ಮಪತ್ನಿ ಪತ್ರಕರ್ತೆ ಎಸ್ ಜಿ ತುಂಗರೇಣುಕ ಉಪಸ್ಥಿತರಿದ್ದರು.
ಹಿರಿಯ ಸಾಹಿತಿ ಸುನಂದಾ ಎಮ್. ಪದ್ಮಾವತಿ ಷಣ್ಮುಖಪ್ಪ ಅಂಗಡಿ ಹಾಗೂ ರಾವ್ ಬಹದ್ದೂರ್, ಷಣ್ಮುಖಪ್ಪ ಅಂಗಡಿ ಅವರ ದಾಂಪತ್ಯ ಬದುಕಿನ ಕುರಿತು ಅತಿಥಿ ಉಪನ್ಯಾಸ ನೀಡಿದರು. ಕಲ್ಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಉಜ್ವಲ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕಿ ಶಿಲ್ಪಾ ಬೈರನಟ್ಟಿ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು. ಪ್ರಾಧ್ಯಾಪಕಿ ಸುಪರ್ಣ ಶಿರಗುಪ್ಪಿ ವಂದಿಸಿದರು.
ವರದಿ : ಜಿಲಾನಸಾಬ್ ಬಡಿಗೇರ



















