ಸ್ನೇಹ ಎನ್ನುವ ವಿಶಾಲವಾದ ಪದವನ್ನು ಸಾಮಾನ್ಯವಾಗಿ ವಿವರಿಸಲು ಸಾದ್ಯವೇ ಇಲ್ಲ. ಯಾಕೆಂದರೆ ಅದರ ವ್ಯಾಪ್ತಿ ಮತ್ತು ಆಳವು ಅಷ್ಟೊಂದು ವಿಶಾಲವಾದ ಅರ್ಥವನ್ನು ಹೊಂದಿದೆ. ಎಲ್ಲಾ ಸಂಬಂಧಗಳನ್ನು ಮೀರಿ ನಮಗೆ ಅಗೋಚರವಾದ ಶಕ್ತಿಯನ್ನು ಕೊಡುವ ಏಕೈಕ ಟಾನಿಕ್ ಅಂದ್ರೆ ಅದು ಸ್ನೇಹ ಮಾತ್ರ.
ನಮ್ಮ ನೋವು- ನಲಿವುಗಳನ್ನು ಹಂಚಿಕೊಳ್ಳಲು ಇರುವ ಒಂದು ಪ್ರಮುಖ ಸಂಬಂಧ ಎಂದರೆ ಅದು ಗೆಳೆತನ ಅಂದ್ರೆ ತಪ್ಪಾಗಲಿಕ್ಕಿಲ್ಲ. ನಮಗೆ ಮನರಂಜನೆ, ನೆಮ್ಮದಿ ಹಾಗೂ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವಂತೆ ಮಾಡುವ ಶಕ್ತಿ ಗೆಳೆತನಕ್ಕೆ ಮಾತ್ರ ಇದೆ. ಅಟೋಟಗಳನ್ನು ನಾವು ಮಿತ್ರರೊಂದಿಗೆ ಮಾತ್ರ ಆಡಲು ಸಾಧ್ಯವಾಗುತ್ತದೆ ಎಂದಾಗ ಅದರ ಮಹತ್ವ ಎಷ್ಟು ಅತ್ಯದ್ಭುತವಾಗಿದೆ ಎಂಬುದು ಗೊತ್ತಾಗುತ್ತದೆಯಲ್ಲವೇ..?
ಆದರೆ ಇಂದು ಈ ಸ್ನೇಹ ಎನ್ನುವ ಸಂಬಂಧವು ಸ್ವಾರ್ಥವನ್ನೇ ಬಲವಾಗಿ ನಂಬಿಕೊಂಡು, ಅದನ್ನೇ ಜೀವನಪೂರ್ತಿ ಅಳವಡಿಸಿಕೊಂಡು ಸಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಇಂದು ಹಲವಾರು ಜನ ತಮ್ಮ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಆಸ್ತಿ, ಅಂತಸ್ತನ್ನು ನೋಡುತ್ತಿದ್ದಾರೆ. ಅವರ ಜನಪ್ರಿಯತೆ ಮತ್ತು ಜಾಣ್ಮೆ ಹೇಗಿದೆ, ಅವರು ನೋಡಲು ಸುಂದರವಾಗಿದ್ದಾರೆಯೇ ಎನ್ನುವ ಕ್ಷುಲ್ಲಕ ಅಂಶಗಳನ್ನು ಇಂದಿನ ಯುವಪೀಳಿಗೆ ಸ್ನೇಹದಲ್ಲಿ ಹುಡುಕುತ್ತಿದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಇತ್ತೀಚೆಗೆ ಸ್ವಜಾತಿಯ ವ್ಯಕ್ತಿಗಳ ಜೊತೆಯಲ್ಲಿ ಮಾತ್ರ ಸ್ನೇಹ ಬೆಳೆಸುವ ವಿಕೃತ ಮನೋಭಾವ ನಿಜಕ್ಕೂ ಸಮಾಜಕ್ಕೆ ಕಂಟಕವಾಗಿ ಪರಿಣಮಿಸುತ್ತಲಿದೆ.
ಇದೆಲ್ಲವನ್ನೂ ಮೀರಿ ಯಾವ ಸ್ವಾರ್ಥದ ಲವಲೇಷವೂ ಇಲ್ಲದ ನಿಸ್ವಾರ್ಥ ಸ್ನೇಹವನ್ನು ಬೆಸೆಯಲು ಪ್ರಾರಂಭ ಮಾಡಿದರೆ ಮಾತ್ರ ಆಚರಿಸುತ್ತಿರುವ ಈ ಸ್ನೇಹಿತರ ದಿನಾಚರಣೆಗೆ ಒಂದು ಸೊಗಸಾದ, ಮಹತ್ವಪೂರ್ಣವಾದ ಅರ್ಥ ಸಿಗಬಹುದು.
ಬಡವರನ್ನು ಗೆಳೆಯರನ್ನಾಗಿ ಮಾಡಿಕೊಳ್ಳಲು ಹಿಂದೇಟು ಹಾಕುವ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳು ಯಾವತ್ತೂ ಉದ್ದಾರ ಆಗಲ್ಲ. ಬಡವ- ಬಲ್ಲಿದನೆಂಬ ಬೇಧ-ಭಾವ ಮಾಡದೆ ಗುಣ ನೋಡಿ ಗೆಳೆತನ ಮಾಡಿದರೆ ಅಂತಹ ಮಿತ್ರರು ಜೀವನವನ್ನೇ ಉದ್ಧಾರ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಿಜಕ್ಕೂ ಅವರು ನಿಮ್ಮ ಬಾಳಿನಲ್ಲಿ ಬೆಳಕಾಗಿ ಗೋಚರಿಸಬಲ್ಲರು.
ಇಂದಿನ ಸ್ವಾರ್ಥದ ಆಧುನಿಕ ಕಾಲದಲ್ಲಿ ಸನ್ಮಿತ್ರರು ಸಿಗುವುದು ಅಷ್ಟು ಸುಲಭವಲ್ಲ. ಆದರೂ ಒಳ್ಳೆಯ ಅನುಕಂಪ, ನಿಸ್ವಾರ್ಥತೆಯಿಂದ ಸಹಾಯ ಮಾಡುವ ಮನೋಭಾವ, ಸಹಾನುಭೂತಿ ಹಾಗೂ ಚೆನ್ನಾಗಿ ಅರ್ಥೈಸಿಕೊಳ್ಳುವ ಸ್ವಭಾವ ಇರುವಂತಹ ಅನೇಕರು ಇಲ್ಲಿದ್ದಾರೆ. ಅಂತವರನ್ನು ಮಾತ್ರ ಗೆಳೆಯರನ್ನಾಗಿ ಮಾಡಿಕೊಳ್ಳಬೇಕು. ಬಡವ-ಬಲ್ಲಿದನೆಂಬುದನ್ನು ಬಿಟ್ಟು, ಜಾತಿ-ಮತಗಳ ಅಂಧಕಾರ ತ್ಯಜಿಸಿ ಇಂತಹ ಗೆಳೆತನ ಮಾಡಿದಾಗ ಸ್ನೇಹವು ಅತ್ಯಮೂಲ್ಯವಾದ ಕೊಡುಗೆಯಾಗಿ, ಜೀವನದಲ್ಲಿ ಶಾಶ್ವತವಾಗಿ, ಭರವಸೆಯ ಬೆಳಕಾಗಿ ನೆಲೆ ಕಂಡುಕೊಳ್ಳಬಲ್ಲದು.
ಮರಕ್ಕೆ ಮರದಿಂದಲೇ ಮಾಡಿದ ಕೊಡಲಿಯ ಕಾವು ಶತ್ರು ಎನ್ನುವ ಹಾಗೆ ನಮ್ಮ ಜಾತಿಯಲ್ಲಿಯೇ ಗೆಳೆತನ ಮಾಡೋಣ ಎನ್ನುವವರಿಗೆ ಭಾರೀ ಆಘಾತವಾಗಬಲ್ಲದು. ಅದು ಹಿತಕರ ಸಂಬಂಧವನ್ನು ಬೆಳೆಸಲು ಸಾಧ್ಯವಾಗಲಾರದು. ಯಾಕೆಂದರೆ ಇಂದು ತಮ್ಮ ತಮ್ಮ ಜಾತಿಯವರನ್ನು ಮಾತ್ರ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮೂರ್ಖತನದ ಪರಮಾವಧಿ ಎಲ್ಲೆ ಮೀರುತ್ತಿದೆ.
ಇದಕ್ಕೊಂದು ಪ್ರಬಲವಾದ ದೃಷ್ಟಾಂತವು ಇಲ್ಲಿದೆ ನೋಡಿ. ಇಂದಿನ ದಿನಮಾನಗಳಲ್ಲಿ ಅನೇಕರು ಹಲವಾರು ವಾಟ್ಸಾಪ್ ಗ್ರೂಪ್ ಗಳಿಲ್ಲಿದ್ದಾರೆ. ಗ್ರೂಪ್‌ನ ಯಾರಾದರೂ ಒಬ್ಬ ಸದಸ್ಯರು ಏನಾದರೂ ಸಾಧನೆ ಮಾಡಿದ್ದಾರೆಂದರೆ, ಅತ್ಯುನ್ನತ ಶ್ರೇಣಿಯನ್ನು ಪಡೆದಿದ್ದಾರೆಂದರೆ ಶುಭಕೋರುವುದಕ್ಕಾಗಿ ಮೊದಲು ಜನರು ನೋಡುವುದು ಇವರ ಜಾತಿಯನ್ನು, ಸಾಧನೆಯನ್ನಲ್ಲ..!!
ಎಂತಹ ಕಾಲ ಬಂತು ನೋಡಿ. ಮದುವೆ, ಜನ್ಮದಿನದ ಶುಭಾಶಯಗಳು ಹಾಗೂ ಇನ್ನಿತರ ಪ್ರಮುಖ ದಿನಗಳ ಶುಭಾಶಯಗಳನ್ನು ಕೋರುವಾಗ ಜನರು ಇಲ್ಲಿಯೂ ಕೂಡಾ ಸ್ವಜಾತಿಯರಾಗಿದ್ದರೆ ಮಾತ್ರ ಶುಭಾಶಯ ಹೇಳುತ್ತಾರೆ. ಆದರೆ ಅವರು ತಮ್ಮ ಆತ್ಮೀಯ ಗೆಳೆಯನಾಗಿದ್ದರೂ ಇಂತಹ ಸಂದರ್ಭಗಳಲ್ಲಿ ವಿಶ್ ಮಾಡಲ್ಲ. ಜಾತಿಯ ಮುಂದೆ ಗೆಳೆತನವು ಲೆಕ್ಕಕ್ಕೆ ಇಲ್ಲದಂತಾಗಿ ನಗಣ್ಯವಾಗಿದೆ ಅಂದ್ರೆ ಇಂತಹ ಗೆಳೆತನಕ್ಕೆ ಏನೆಂದು ಕರೆಯಬೇಕು..? ಇದನ್ನು ನಾನು ನೂರಾರು ವಾಟ್ಸಾಪ್ ಗ್ರೂಪ್‌ಗಳಲ್ಲಿ ಪರಿಶಿಲಿಸುತ್ತಾ ಸಮೀಕ್ಷೆ ಮಾಡುತ್ತಾ ಮತ್ತು ಇದನ್ನೇ ನನ್ನ ಆತ್ಮೀಯರೊಂದಿಗೆ ಸಾಕ್ಷೀಕರಿಸಿ ಜಾತಿಯ ವಿಪರೀತವಾದ ಕುರುಡು ಪ್ರೀತಿಯ ಬಗ್ಗೆ ಚರ್ಚೆ ಮಾಡುತ್ತಿರುತ್ತೇನೆ.
ನನ್ನ ಒಬ್ಬ ಆತ್ಮೀಯ ಗೆಳೆಯನಿದ್ದಾನೆ. ಆತನಿಗೆ ಅದೆಂತಹ ಜಾತಿಯ ವ್ಯಾಮೋಹ ಅಂದ್ರೆ ತಮ್ಮ ಜಾತಿಯವನಾಗಿದ್ದರೆ ಸಾಕು ಅವರು ಪರಿಚಯ ಇರಲಿ ಅಥವಾ ಇಲ್ಲದಿರಲಿ ಅವರಿಗೆ ಶುಭಕೋರಿ ಹಾರೈಸಿ ಅದನ್ನು ಸ್ಟೇಟಸ್ ನಲ್ಲಿ ಇಟ್ಟು ಜಾತಿಯ ಅಂಧಕಾರದ ಮೌಢ್ಯತೆಯನ್ನು ಸಾರಾಸಗಟಾಗಿ ಸಾಮಾಜಿಕ ಜಾಲತಾಣದಲ್ಲಿ, ವಾಟ್ಸಾಪ್ ಗ್ರೂಪಗಳಲ್ಲಿ ಶೇರ್ ಮಾಡಿ ಸಂಭ್ರಮ ಪಡುತ್ತಾನೆ. ಅಷ್ಟೇ ಅಲ್ಲ ತನ್ನ ಉಳಿದ ಸ್ವಜಾತಿಯವರಿಗೆ ಖುದ್ದಾಗಿ ಕರೆ ಮಾಡಿ ನಾನು ನಮ್ಮ ಜಾತಿಯವನನ್ನು ಹೇಗೆ ಪ್ರಚಾರ ಮಾಡುತ್ತಿದ್ದೇನೆ ನೋಡಿ, ನೀವು ಕೂಡಾ ಇದೇ ರೀತಿಯಲ್ಲಿ ಜಾತಿಯ ಬಗ್ಗೆ ಅಭಿ(ದುರ)ಮಾನ ಇಟ್ಕೊಂಡು ನಮ್ಮ ಜಾತಿಯವರನ್ನು ಎತ್ತಿ ಹಿಡಿಯುವ ಕೆಲಸ ಮಾಡೋಣ ಅನ್ನೋದನ್ನು ಸ್ವತಃ ನಾನೇ ಕಣ್ಣಾರೆ, ಕಿವಿಯಾರೆ ಕೇಳಿಸಿಕೊಂಡು ಕೂಲಂಕಷವಾಗಿ ಗಮನಿಸಿದ್ದೇನೆ.
ಇದೇ ಮಹಾನುಭಾವ ಗೆಳೆಯನಿಗೆ ಉಳಿದ ಜಾತಿಯ ಒಳ್ಳೊಳ್ಳೆಯ ಮಿತ್ರರಿದ್ದಾರೆ. ಆದರೆ ಅವರ್ಯಾರಿಗೂ ಒಂದು ದಿನವೂ ಶುಭಕೋರಿ ಹಾರೈಸುವುದೇ ಇಲ್ಲ. ಎಂತಹ ವಿಪರ್ಯಾಸ ನೋಡಿ. ಇದನ್ನು ಒಂದು ದಿನವೂ ಸ್ಟೇಟಸ್ ಗೆ ಇಟ್ಟುಕೊಳ್ಳುವುದಿರಲಿ ಒಂದು ಸಣ್ಣ ಶುಭಾಶಯದ ಮೆಸೆಜ್ ಮಾಡುವುದನ್ನು ಉದ್ದೇಶಪೂರ್ವಕವಾಗಿಯೇ ಬಿಡುತ್ತಾನೆ ಮತ್ತು ಉಳಿದವರಿಗೂ ಕೂಡಾ ಇಂತದ್ದೇ ಕಿವಿಮಾತನ್ನು ಸಹ ಹೇಳುತ್ತಾರೆ.
ನಮ್ಮ ನಮ್ಮ ವಾಟ್ಸಾಪ್ ಗ್ರೂಪ್ ನ್ಯಾಗ ಇರುವ ನಮ್ಮ ನಮ್ಮ ಮಂದಿಗಷ್ಟೇ ವಿಶ್ ಮಾಡ್ರಿ, ಉಳಿದವರಿಗೆ ಮಾಡಾಕ ಹೋಗಬೇಡ್ರಿ. ಅದರಿಂದ ನಮಗೇನೂ ಲಾಭ ಇಲ್ಲ ಎಂದು ಜಾತಿಯ ವಿಷಬೀಜವನ್ನು ಇತರರಲ್ಲಿಯೂ ಬಿತ್ತುವ ಕೆಲಸವನ್ನು ಇಂದು ಅನೇಕರು ಭರಪೂರವಾಗಿ ಮಾಡುತ್ತಿದ್ದಾರೆ.
ಇನ್ನೂ ಒಂದು ವಿಷಾದಕರ ಸಂಗತಿ ಏನೆಂದರೆ ಶ್ರದ್ಧಾಂಜಲಿ ಸಲ್ಲಿಸುವಾಗಲೂ ಕೂಡಾ ಜಾತಿಯ ಪ್ರಾಧಾನ್ಯತೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರೆ ಅರ್ಥ ಮಾಡಿಕೊಳ್ಳಿ ಇವರದ್ದು ಅದೆಂತಹ ಸ್ವಜಾತಿಯ ಮೋಹಕ್ಕೊಳಗಾಗಿದ್ದಾರೆ ಎಂದು..!
ಇದನ್ನು ನಾನು ಐದಾರು ವರ್ಷಗಳಿಂದ ನೂರಾರು ವಾಟ್ಸಾಪ್ ಗ್ರೂಪ್ ಗಳ ಪರಸ್ಪರ ಶುಭಾಶಯಗಳ ವಿನಿಮಯವನ್ನು ಅಭ್ಯಸಿಸಿ, ವಿಶ್ಲೇಷಿಸಿ ಈ ವರದಿಯನ್ನು ಶೇ.100 ಕ್ಕಿಂತಲೂ ಹೆಚ್ಚು ನಿಖರವಾಗಿದೆ ಎಂದು ಗಂಟಾಘೋಷವಾಗಿ ಕೈ ಎತ್ತಿ ಹೇಳುತ್ತೇನೆ.
ಹಾಗೆಯೇ ಮೊನ್ನೆ ತಾನೇ ಪ್ರಕಟಗೊಂಡ ಹತ್ತನೇ ತರಗತಿಯ ಫಲಿತಾಂಶವನ್ನು ಗಮನಿಸಿದಾಗ ಪ್ರಥಮ ರ್ಯಾಂಕ್ ಪಡೆದ 22 ವಿದ್ಯಾರ್ಥಿಗಳನ್ನು ನಾವೆಲ್ಲರೂ ಸರ್ವಾನುಮತದಿಂದ ಅಭಿನಂದಿಸಲೇಬೇಕು, ಎಲ್ಲರಿಗೂ ಸಮನಾಗಿ ನಾವು ಪ್ರೋತ್ಸಾಹ ನೀಡಿ ಬೆಂಬಲಿಸಲೇಬೇಕು. ಆದರೆ ಹಲವರು ತಮ್ಮ ತಮ್ಮ ಜಾತಿಯಲ್ಲಿ ರಾಜ್ಯಕ್ಕೆ ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳನ್ನು ಮಾತ್ರ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸಾಪ್ ನಂತಹ ಗ್ರೂಪಗಳಲ್ಲಿ ಶೇರ್ ಮಾಡೋದು, ಸ್ಟೇಟಸ್ ಇಟ್ಕೊಂಡು ಅದರಲ್ಲಿಯೂ ಜಾತೀಯತೆಯನ್ನು ಮೆರೆಯುತ್ತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮ ದೇಶ , ರಾಜ್ಯಗಳು ಎತ್ತ ಸಾಗುತ್ತಿವೆ ಎಂಬ ಆತಂಕ ಅಪಾಯಕಾರಿಯಾಗಿ ಕಾಡುತ್ತಿದೆ. ಸಾಕಷ್ಟು ಶ್ರಮವಹಿಸಿ ಓದಿ ಸಾಧನೆ ಮಾಡಿದ ಮಕ್ಕಳಿಗೆ ಸಮಾನವಾಗಿ ಪ್ರೋತ್ಸಾಹ ನೀಡುವ ಬದಲು ಜಾತಿಯ ಆಧಾರದ ಮೇಲೆ ಅಭಿನಂದಿಸಿ ಪ್ರೋತ್ಸಾಹ ನೀಡುತ್ತಿರುವುದು ಜಗಜ್ಜಾಹೀರಾಗಿದೆ. ಯಾಕಿಷ್ಟು ಜಾತಿಯ ಕುರುಡು ಪ್ರೀತಿ..?
ಆದ್ದರಿಂದ ಈ ಜಾತಿಯ ಆಧಾರದ ಮೇಲೆ ಗೆಳೆತನ ಮಾಡೋದು, ಈ ಜಾತಿಯ ಕಾರಣದಿಂದಲೇ ಸೂಕ್ತ ಪ್ರತಿಭೆಗಳನ್ನು ಮತ್ತು ಆತ್ಮೀಯ ಸ್ನೇಹಿತರನ್ನು ದೂರ ಮಾಡಿಕೊಳ್ಳುವ ಕ್ಷುಲ್ಲಕ ಮನಸ್ಸಿನಿಂದ ಹೊರಬಂದು ಸದ್ಗುಣಗಳುಳ್ಳ ಸ್ನೇಹಿತರಿಗೆ ಬೆಲೆ ಕೊಡುವುದನ್ನು ಕಲಿತುಕೊಳ್ಳಿ. ಜಾತಿಯ ಸಂಕೋಲೆಯಿಂದ ಹೊರಬನ್ನಿ..!! ಮಾನವೀಯ ಮೌಲ್ಯಗಳನ್ನು ಅಳವಡಿಕೊಂಡು ಸಾಮಾಜಿಕ ಸಮಾನತೆಯತ್ತ ಈ ಸ್ನೇಹಿತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಬನ್ನಿ ಗೆಳೆಯರೇ..!!
ನಮಗೆ ಕಷ್ಟ ಬಂದಾಗ ಬಿಟ್ಟು ಹೋಗಿ, ಚೆನ್ನಾಗಿದ್ದಾಗ ಇನ್ನಿಲ್ಲದ ಆಪ್ತತೆ ತೋರಿಸುವ ಸ್ವಾರ್ಥ ಸ್ನೇಹಿತರು ಇರೋದಕ್ಕಿಂತ, ಯಾವ ಸ್ನೇಹಿತರು ಇಲ್ಲದೇ ಇರೋದೆ ಎಷ್ಟೋ ವಾಸಿ. ಕನಿಷ್ಟ ಪಕ್ಷ ಸೌಜನ್ಯತೆಗಾದ್ರೂ ಒಂದು ಒಳ್ಳೆಯ ಸಾಂತ್ವನ ನೀಡುವ ಶ್ರೇಷ್ಠ ಗುಣವು ಇರದಿದ್ದರೆ ಅಂತಹ ಗೆಳೆಯರಿಂದ ದೂರಾನೇ ಇದ್ದುಬಿಡಿ. ಸಮಾಧಾನ ನೀಡದ ಗೆಳೆಯರು ಬೇಡವೇ ಬೇಡ.
ಸದಾಕಾಲವೂ ನಮ್ಮೊಂದಿಗೆ ಇದ್ದು ನಿಸ್ವಾರ್ಥ ಮನೋಭಾವ ಹೊಂದಿರುವಂತಹ ಗೆಳೆಯರು ಜೀವನದಲ್ಲಿ ಅಜರಾಮರವಾಗಿ ನಿಲ್ಲುತ್ತಾರೆ. ಅಂತವರನ್ನು ಪ್ರಾಣ ಹೋದರೂ ಬಿಡಬಾರದು. ಅದುವೇ ನಮ್ಮ ನೈಜ ಆಸ್ತಿಯಾಗಬಲ್ಲದು. ನಿಸ್ವಾರ್ಥ ಮನೋಭಾವ ಹೊಂದಿರುವ ಶ್ರೀಕೃಷ್ಣ ಮತ್ತು ಕುಚೇಲನಂತಹ ಶ್ರೇಷ್ಠ ಸ್ನೇಹಿತರಿಗೆ ಮಾತ್ರ ಸ್ನೇಹಿತರ ದಿನಾಚರಣೆಯ ಶುಭಾಶಯಗಳು…!!

- ಶ್ರೀನಿವಾಸ.ಎನ್.ದೇಸಾಯಿ, ತಲ್ಲೂರ ಶಿಕ್ಷಕರು.
ಸ.ಮಾ.ಹಿ.ಪ್ರಾ.ಶಾಲೆ ವಿದ್ಯಾನಗರ ಕುಷ್ಟಗಿ.



















