ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷೇಧಿಸುವ ಕುರಿತು ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗಳು ದೇಶದ ಜನರಿಗೆ ಮಾಡಿದ ಅಪಮಾನ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶಕ್ಕೆ
ಆಪತ್ತು ಬಂದಾಗ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಆರ್ಎಸ್ಎಸ್ ಕೇವಲ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ತನ್ನ ಸ್ವಯಂ ಸೇವಕರನ್ನು ಹೊಂದಿದೆ. ಶತಮಾನದ ಇತಿಹಾಸ ಹೊಂದಿರುವ ಸಂಘವನ್ನು ಸಚಿವ ಪ್ರಿಯಾಂಗ್ ಖರ್ಗೆ ಬ್ಯಾನ್ ಮಾಡಬೇಕು ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ಇಂಥಹ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.
ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ರಕ್ಷಣೆಗೆ ನಿಂತ ಸ್ವಯಂ ಸೇವಕರ ಸಂಘ ನಿಷೇಧಿಸುವುದು ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆ ನೆಹರು, ಇಂದಿರಾಗಾಂಧಿ ಸೇರಿದಂತೆ ಅನೇಕರು ಆರ್ ಎಸ್ಎಸ್ ನಿಷೇಧಿಸುವ ಕುರಿತು ಮಾತನಾಡಿದ್ದರು. ಆದರೆ, ನಂತರ ಸಂಘದ ಕಾರ್ಯ ವೈಖರಿ ಮೆಚ್ಚಿ ಶಾಖೆಗಳಿಗೆ ಆಗಮಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷ ಈ ಇತಿಹಾಸ ಮರೆತಂತಿದೆ ಎಂದಿದ್ದಾರೆ. ಇದೇ ವೇಳೆ, ಎರಡು ದಿನದ ಹಿಂದೆ ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಶಾಸಕ ಮುನಿರತ್ನ ಅವರಿಗೆ ಗಣವೇಷಧಾರಿ ಇರುವಾಗಲೇ ಸಾರ್ವಜನಿಕ ಸಭೆಯಲ್ಲಿ ನಿಂದಿಸಿ ಅವಮಾನ ಮಾಡಿದ್ದಾರೆ. ಇದೇ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಸಂಘದ ಗೀತೆ ಹಾಡಿದ್ದನ್ನು ಮರೆತಿದ್ದಾರೆ. ಸಂಘದ ಕಾರ್ಯವನ್ನು ಇಡೀ ದೇಶವೇ ಮೆಚ್ಚಿ ಜತೆಗೆ ನಿಂತಿರುವಾಗ ಕಾಂಗ್ರೆಸ್ ನಾಯಕರ ಇಂತಹ ಮನಸ್ಥಿತಿ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
- ಕರುನಾಡ ಕಂದ



















