ಬೀದರ್: ಲಿಂಗಾಯತ ಮಠಾಧೀಶರು ಮತ್ತು ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯನ್ನು ದೇಶದಿಂದ ಗಡಿಪಾರು ಮಾಡುವಂತೆ ಸಾಹಿತಿ, ಹೋರಾಟಗಾರ ಸಂಗಮೇಶ ಎನ್ ಜವಾದಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು ಕನ್ನೇರಿ ಸ್ವಾಮಿಯ ಹಿಂದಿರುವ ಶಕ್ತಿಗಳು ಅವರ ಬಾಯಿಯಲ್ಲಿ ಈ ರೀತಿಯ ಅಶ್ಲೀಲ ಹೇಳಿಕೆಗಳನ್ನು ನೀಡಿಸಿವೆ, ಅವರಿಂದ ಪದೇ ಪದೇ ಲಿಂಗಾಯತ ಧರ್ಮ ಹಾಗೂ ಬಸವ ತತ್ವ ಸಿದ್ಧಾಂತಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕೇಳುತ್ತಿದ್ದೇವೆ ಇದರಿಂದ ಲಕ್ಷಾಂತರ ಬಸವಾಭಿಮಾನಿಗಳಿಗೆ ನೋವುಂಟಾಗಿದೆ.
ಕಾರಣ ಈ ಕೂಡಲೇ ಕಾಡಸಿದ್ದೇಶ್ವರ ಶ್ರೀಗಳನ್ನು ಈ ತಕ್ಷಣವೇ ಮಠದಿಂದ ಉಚ್ಚಾಟಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಸಿದ್ದೇಶ್ವರ ಸ್ವಾಮಿಯ ಮಾತಿನಿಂದ ಕೋಟ್ಯಾಂತರ ಲಿಂಗಾಯತರಿಗೆ ಅಪಮಾನವಾಗಿದ್ದು, ಇವರ ಮಾತು ಸಾಮಾಜಿಕ ಶಾಂತಿಗೆ ಧಕ್ಕೆ ತರುತ್ತಿವೆ. ಕೋಮುದ್ವೇಷ, ಸಾಮಾಜಿಕ ಶಾಂತಿಗೆ ಭಂಗ ತರುವಂತೆ ಮಾತನಾಡಿ ಕಾನೂನು ಸುವ್ಯವ̧ಸ್ಥೆಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇಂತಹ ಕಿಡಿಗೇಡಿಗಳಿಂದ ಸಮಾಜದ
ಸ್ವಾಸ್ಥ್ಯ ಹಾಳಾಗುತ್ತದೆ. ವಿಶೇಷವಾಗಿ ಸಹಬಾಳ್ವೆ ಸೌಹಾರ್ದ, ಸಹೋದರತ್ವದ ಮೂಲದಂತಿರುವ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಈ ಕೃತ್ಯವು ದೇಶದ್ರೋಹಿ ಕೃತ್ಯಕ್ಕೆ ಸಮಾನವಾಗಿರುತ್ತದೆ.
ಲಿಂಗಾಯತ ಮಠಾಧೀಶರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಮಾಜಿಕ ಶಾಂತಿಗೆ ದಕ್ಕೆ ಉಂಟು ಮಾಡಿರುವ ಸ್ವಾಮಿಯ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಸಂಗಮೇಶ ಎನ್ ಜವಾದಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿದ್ದಾರೆ.

- ಕರುನಾಡ ಕಂದ




















