೧.
ಭವದ ಬಂಧನವ
ನೀಗಿಸಲು ನೀ ಭುವಿಗೆ
ಬಾರಯ್ಯ, ಬಸವಯ್ಯ,
ನೀನಿರದ ಈ ಲೋಕ
ಕತ್ತಲುಮಯ,
ನಮ್ಮವರ ಸ್ಥಿತಿ
ಈಗ ಅಯೋಮಯ!
ಎಂದ ಶಿವ, ಶಿವಾ!.
೨.
ಕಚ್ಚಾಡುತಿಹರಿಲ್ಲಿ
ನಾ ಮೇಲು ನೀ ಕೀಳೆಂದು,
ಇವರಿಗೆ ಬುದ್ಧಿ ಬರುವುದೆಂದೋ,
ಆ ಧರ್ಮ, ಈ ಧರ್ಮ,
ಸ್ವ ಧರ್ಮ ಎನ್ನುತ್ತಾ
ಅಧರ್ಮದ ದಾರಿಯಲ್ಲೇ
ಸಾಗುತಿಹರಲ್ಲ, ಶಿವ ಶಿವಾ!.
೩.
ಶರಣರ ಕಾಲದಲ್ಲೂ
ಇತ್ತು ಅಲ್ಪ ಪ್ರಮಾಣದ
ಭ್ರಷ್ಟಾಚಾರ,
ಆಧುನಿಕ ಕಾಲದಲ್ಲಿ!?
ಬೆಳೆದಿದೆ ನೋಡಾ
ಬೃಹದಾಕಾರ!
ಇದೆಂಥ ಕಾಲ ಶಿವ ಶಿವಾ!
೪.
ಜಾತಿವಾದದ ಬಳ್ಳಿ
ಎಲ್ಲೆಲ್ಲೂ ಹಬ್ಬುತಿದೆ ನೋಡಾ,
ಸೀಮಿತ ಆಲೋಚನೆಯ
ಸ್ವಾರ್ಥಿಗಳು ನಾವಾಗಿಹೆವು ನೋಡಾ,
ದೂರ ದೃಷ್ಟಿ ಇಲ್ಲದ
ಮಂದಿ ನಾವಾಗಿಹೆವು ನೋಡಾ
ಅಧಿಕಾರ ಲಾಲಸೆಗೆ ಜೋತುಬಿದ್ದವರು ನಾವು
ನೋಡಾ, ಎಂದ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಕೊಪ್ಪಳ. 583231.



















