ಬೆಂಗಳೂರು: ನೊಬಲ್ ಹಾರ್ಟ್ಸ್ ವತಿಯಿಂದ ದಿ. 7/12/2025ರ ಭಾನುವಾರ ಬೆಂಗಳೂರಿನ ಕುವೆಂಪು ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅಯೋಧ್ಯೆಯ ಶ್ರೀ ರಾಮಲಲ್ಲಾನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಹಾಗೂ ಖ್ಯಾತ ತಬಲಾ ಪಟು ವಿದ್ವಾನ್ ಕಿರಣ್ ಗೋಡ್ಖಿಂಡಿಯರನ್ನು ಸಂಸ್ಥೆಯ ಸತ್ಯಪ್ರಸಾದ್, ಡಾ ಸತ್ಯನಾರಾಯಣ ಹಾಗೂ ಮಾತಿನ ಮನೆ ರಾ. ಸು. ವೆಂಕಟೇಶ ಗೌರವಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಬಡ ಮಕ್ಕಳಿಗಾಗಿ ಜಯನಗರ ಸ್ತ್ರೀ ಸಮಾಜದವರು ನಡೆಸುತ್ತಿರುವ ವಿದ್ಯಾ ವಿಕಾಸ ಶಾಲೆಗೆ ದಾನಿಗಳು ನೀಡಿದ 21 ಲಕ್ಷ ರೂಪಾಯಿಗಳಿಗೂ ಮೀರಿದ ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು.
ಪ್ರಭಾತ್ ಸಂಸ್ಥೆಯ ಸ್ಥಾಪಕರಾದ ಶ್ರೀ ಗೋಫಿನಾಥ ದಾಸರ ಪುತ್ತಳಿಯನ್ನು ಅರುಣ್ ಯೋಗಿರಾಜ್ ಹಾಗೂ ಪುತ್ತಳಿಯ ಶಿಲ್ಪಿ ಶ್ರೀ ಎನ್ ಶಿವದತ್ತ ಅನಾವರಣ ಮಾಡಿ, ಪ್ರಭಾತ್ ಸಂಸ್ಥೆಯ ಶ್ರೀ ವೆಂಕಣ್ಣಾಚಾರ್ ಕುಟುಂಬದವರಿಗೆ ಅವರಿಗೆ ಹಸ್ತಾಂತರಿಸಿದ್ದರು. ನಂತರ ಮಾತನಾಡಿದ ನಟಿ, ಭರತನಾಟ್ಯ ಗುರು ಹೇಮ ಪ್ರಭಾತ್ ತಾತ ಗೋಪಿನಾಥ ದಾಸರ ಕುರಿತು ಭಾವುಕರಾಗಿ ಮಾತನಾಡಿದರು.
ಪಂಡಿತ್ ಪ್ರವೀಣ್ ಗೋಡ್ಖಿಂಡಿಯವರ ಬಾನ್ಸುರಿ ವಾದನದ ಫ್ಯೂಷನ್ ಕಲಾರಸಿಕರನ್ನು ಸೆಳೆದಿತ್ತು, ಸಭಿಕರೊಡನೆ ಸಂವಹನಿಸುತ್ತ ಕೊಳಲು ನುಡಿಸಿದ ಪ್ರವೀಣ್ ಅವರು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.
ಆರಂಭದಲ್ಲಿ ಉದ್ಘಾಟನೆ ಹಾಗೂ ಜ್ಯೋತಿ ಬೆಳಗುವಿಕೆಯನ್ನು 25 ನಿಮಿಷಗಳ ವಿಶೇಷ ಧ್ವನಿ ಬೆಳಕಿನ ಸಂಯೋಜನೆಯಲ್ಲಿ ಆಯೋಜಿಸಿದ್ದು ನೆರೆದಿದ್ದವರ ಮನಸ್ಸನ್ನು ಸೆಳೆದಿತ್ತು.
ನೊಬಲ್ ಸತ್ಯಪ್ರಸಾದ್ ಅವರ ಪ್ರಾಸ್ತಾವಿಕ ನುಡಿಗಳು ಹಾಗೂ ಮಾತಿನ ಮನೆ ರಾ ಸು ವೆಂಕಟೇಶ ಅವರ ಸ್ವಾಗತ ನುಡಿಗಳೊಂದಿಗೆ ಕಾರ್ಯಕ್ರಮ ಆರಂಭವಾಗಿತ್ತು.
ಶೈಲಸುತೆ ರಂಜಿತಾ, ಶ್ರೀಮತಿ ರಾಧಾ ಮೋಹನ್, ಸಹನಾ ರಾಜೇಶ್ ಹಾಗೂ ಅಕ್ಷತಾ ಅನೂಪ ಮೂರು ತಾಸುಗಳ ಕಾರ್ಯಕ್ರಮ ನಿರೂಪಕಿಯರಾಗಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















