
ಬೆಳಗಾವಿ/ ಅಥಣಿ: ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಶಾಸಕರಾದ ಲಕ್ಷ್ಮಣ್ ಸವದಿ ಅವರ ಹುಟ್ಟುಹಬ್ಬವನ್ನು ಅದ್ದೂರಿ ಸಂಭ್ರಮಗಳಿಲ್ಲದೆ, ಬಡ ಕುಟುಂಬದ ಬದುಕಿಗೆ ಬೆಳಕಾಗುವ ಮೂಲಕ ಅರ್ಥಪೂರ್ಣವಾಗಿ ಪುರಸಭೆ ಸದಸ್ಯರಾದ ಕಲ್ಲೇಶ್ ಮಡ್ಡಿ ಆಚರಿಸಿದರು.
ಅಥಣಿ ನಿವಾಸಿ ಮಹಾಂತೇಶ್ ಬನಸೋಡಿ ಅವರು ಆರ್ಥಿಕ ಸಂಕಷ್ಟದಲ್ಲಿ ಮನೆ ಕಟ್ಟಲು ಪರದಾಡುತ್ತಿದ್ದ ಸಂದರ್ಭದಲ್ಲಿ, ಅವರ ನೋವನ್ನು ಮನಗಂಡ ಕಲ್ಲೇಶ್ ಮಡ್ಡಿ, ಶಾಸಕರಾದ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಿ ಮಾನವೀಯತೆಯ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾದರು.
ನಾಯಕರ ಮೇಲಿನ ಅಭಿಮಾನವನ್ನು ಕಟೌಟ್ಗಳ ಮೂಲಕವಲ್ಲ, ಕಷ್ಟದಲ್ಲಿರುವ ಕುಟುಂಬದ ಕಣ್ಣೀರು ಒರೆಸುವ ಮೂಲಕ ತೋರಿಸಿದ ಕಲ್ಲೇಶ್ ಮಡ್ಡಿ ಅವರ ಕಾರ್ಯ ಶಾಸಕರಾದ ಲಕ್ಷ್ಮಣ್ ಸವದಿ ಅವರ ಹಾಗೂ ಸಾರ್ವಜನಿಕರ ಮನಗೆದ್ದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, “ಜನ್ಮದಿನವು ಸೇವೆಯ ದಿನವಾಗಬೇಕು, ಕಲ್ಲೇಶ್ ಮಡ್ಡಿಯವರ ಈ ಸಮಾಜಮುಖಿ ನಡೆ ನಿಜಕ್ಕೂ ಶ್ಲಾಘನೀಯ. ಶಿವಯೋಗಿ ನಾಡಿನಲ್ಲಿ ಇಂತಹ ಮಾನವೀಯ ಕಾರ್ಯಗಳು ನಿರಂತರವಾಗಿರಲಿ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಕಲ್ಲೇಶ್ ಮಡ್ಡಿ, “ಶಾಸಕರಾದ ಲಕ್ಷ್ಮಣ್ ಸವದಿ ಅವರ ಅಭಿವೃದ್ಧಿಪರ ಚಿಂತನೆ ಮತ್ತು ಬಡವರ ಮೇಲಿನ ಕಾಳಜಿಯೇ ನನಗೆ ಪ್ರೇರಣೆ. ಅವರ ಜನ್ಮದಿನದಂದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕೈ ಹಿಡಿಯುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ,” ಎಂದು ಭಾವನಾತ್ಮಕವಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಭೀಮು ನನ್ನವರೇ, ಸಚಿನ್ ಚಿನಗುಂಡಿ, ಮಂಜು ಭಜಂತ್ರಿ, ಶಂಕರ್ ಹಿರೇಮನಿ, ನಾಮದೇವ ಹೆಗ್ಗನ್ನವರ್, ಸಂಜು ಪಾರ್ಥನಹಳ್ಳಿ, ರಾಜು ಬಾವನೆ, ವಿಟ್ಟಲ್ ಪಾತ್ರೋಟ್ ಹಾಗೂ ಶಾಸಕರ ಅಭಿಮಾನಿಗಳು ಉಪಸ್ಥಿತರಿದ್ದರು.
ಒಟ್ಟಾರೆ, ಈ ಜನ್ಮದಿನ ಆಚರಣೆ ಒಂದು ಕುಟುಂಬದ ಬದುಕಿಗೆ ಆಶಾಕಿರಣವಾಗಿ ಮೂಡಿ, ನಾಯಕತ್ವದ ಅರ್ಥವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ವರದಿ. ವಿಠ್ಠಲ ಖೋಕಾಟೆ ಅಥಣಿ.



















