ಕೊಪ್ಪಳ ಫೆಬ್ರವರಿ 15: ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮಾಜದ ಸಾಂಸ್ಕೃತಿಕ ನಾಯಕ. ಸಂತ ಸೇವಾಲಾಲ್ ಅವರ ತ್ಯಾಗದ ಫಲದಿಂದ ಇಂದು ಬಂಜಾರ ಸಮಾದಾಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭಾನುವಾರದಂದು ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ ಸಂತ ಸೇವಾಲಾಲ್ ಅವರು ಕರ್ನಾಟಕದ ಹಾವೇರಿ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ 1739 ಫೆಬ್ರವರಿ 15 ರಂದು ಜನಿಸಿದರು. ಇವರು ಶಿರಸಿಯ ಮಾರಿಕಾಂಬ ದೇವಿಯ ಆಶೀರ್ವಾದದಿಂದ ಸಂತರಾದರು. ಇವತ್ತು ರಾಜ್ಯದ ಎಲ್ಲಾ ತಾಂಡಾಗಳಲ್ಲಿ ಸೇವಾಲಾಲ್ ಅವರ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ. ಸೇವಾಲಾಲ್ ಅವರು ಬಂಜಾರ ಸಮಾದಾಯಕ್ಕೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಜ್ಞಾನಾರ್ಜನೆಯನ್ನು ಕಲಿಸಿಕೊಟ್ಟಿದ್ದಾರೆ
ಬಂಜಾರರು ಅಲೆಮಾರಿ ಸಮುದಾಯವಾಗಿದೆ. ಊರು ಹೊರಗಿನ ಸರಕಾರಿ ಭೂಮಿಗಳಲ್ಲಿ ತಾಂಡಗಳಲ್ಲಿ ವಾಸ ಮಾಡುತ್ತಿದ್ದಾರೆ.
ಸೇವಾಲಾಲ್ ಮಹಾರಾಜರು ಕೇವಲ ಒಬ್ಬ ಸಂತನಲ್ಲ, ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು, ಶೋಷಿತ ಸಮುದಾಯಗಳಿಗೆ ಅಸ್ಮಿತೆ ಮತ್ತು ಘನತೆಯನ್ನು ತಂದುಕೊಟ್ಟ ಮಹಾನ್ ಇತಿಹಾಸ ಪುರುಷರು. ಇವರು ಮೂಢನಂಬಿಕೆಗಳನ್ನು ವಿರೋಧಿಸಿ, ಪ್ರಕೃತಿ ಆರಾಧನೆ ಮತ್ತು ನೈತಿಕ ಬದುಕನ್ನು ಕಲಿಸಿದರು. ಸೇವಾಲಾಲ್ ಅವರ ದಾರಿ ನಮ್ಮೆಲ್ಲರಿಗೂ ದಾರಿದೀಪ.
ಸೇವಾಲಾಲ್ ಅವರು ಲಕ್ಷಾಂತರ ಜನರಿಗೆ ಶಿಕ್ಷಣ ಮತ್ತು ಸಂಸ್ಕಾರದ ಮಹತ್ವವನ್ನು ತಿಳಿಸಿಕೊಟ್ಟು, ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚು ತುಂಬಿದ ಇತಿಹಾಸ ಪುರುಷರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಸಹ ಗ್ರಂಥಾಪಾಲಕರಾದ ಡಾ. ಮಲ್ಲಿಕಾರ್ಜುನ ಬಿ ಅವರು ಮಾತನಾಡುತ್ತಾ ಸಂತ ಸೇವಾಲಾಲ್ ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಂಜಾರರು ಅದಿವಾಸಿ ಮತ್ತು ಅಲೆಮಾರಿ ಬುಡಕಟ್ಟು ಸಮುದಾಯವಾಗಿದೆ. ಬಂಜಾರ ಸಮುದಾಯ ಕಾಡಿನ ಜೀವನವನ್ನು ಬಿಟ್ಟು ತಾಂಡಗಳಲ್ಲಿ ವಾಸ ಮಾಡುತ್ತಿದ್ದಾರೆ. ಅದಿವಾಸಿಗಳ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕು. ಎಲ್ಲಾರು ಉನ್ನತ ಮನಸ್ಥಿತಿಯನ್ನು ಹೊಂದಿ ಸ್ವಾಭಿಮಾನದಿಂದ ಬದಕಬೇಕು.
ಪರಿಶುದ್ಧ ಜೀವನ, ಸತ್ಯ ಮತ್ತು ಅಹಿಂಸೆಯ ಬೋಧನೆಗಳನ್ನು ಸಾರಿದ, ಕ್ರಾಂತಿಕಾರಿ ಸಮಾಜ ಸುಧಾರಕ ಶ್ರೀ ಸಂತ ಸೇವಾಲಾಲ್ ಮಹಾರಾಜರು
ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಭೋಧಕೇತರ ಸಿಬ್ಬಂದಿಗಳಾದ ಗವಿಸಿದ್ದಪ್ಪ ಅಜ್ಜ, ರುಕ್ಮಿಣಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ನರಸಿಂಹ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















