
ಕೊಪ್ಪಳ ಜಿಲ್ಲೆಯ ಕುಕನೂರು ಐತಿಹಾಸಿಕ ಹಿನ್ನೆಲೆ ಇರುವ, ಸಾಂಸ್ಕೃತಿಕವಾಗಿಯೂ, ಪ್ರಸಿದ್ಧಿ ಪಡೆಯುತ್ತಿರುವ ಗ್ರಾಮೀಣ ಪ್ರದೇಶ ಎಂದರೆ
ತಪ್ಪಾಗದು.
ಇಂತಹ ಗ್ರಾಮದಲ್ಲಿ ಸಾರೆಪ್ಪ ಮತ್ತು ನೀಲಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಎರಡನೆಯ ಮಗನಾಗಿ, ಜೂನ್ ಒಂದು, ಹತ್ತೊಂಬತ್ತುನೂರಾ ಎಪ್ಪತ್ತೊಂದರಂದು ರವಿ. ಎಸ್.ಹಿರೇಮನಿ ಜನಿಸಿದರು.
ಅವರು ಕುಕನೂರು ಮತ್ತು ಯಲಬುರ್ಗಾಗಳಲ್ಲಿ, ಪ್ರಾಥಮಿಕ, ಮಾಧ್ಯಮಿಕ, ಶಿಕ್ಷಣ ಪೂರೈಸಿ, ಯಲಬುರ್ಗಾದಲ್ಲಿ ಪಿ. ಯು. ಸಿ ಹಾಗೂ
ಐ. ಟಿ. ಐ.ತರಬೇತಿಯ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಸಾಹಿತ್ಯದ ಓದಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಕವನ, ಚುಟುಕು, ಬರೆಯುವ ಹವ್ಯಾಸ ಬೆಳೆಸಿಕೊಂಡರು.
ವಿದ್ಯಾಭ್ಯಾಸ ಮುಗಿದ ನಂತರ, ಸರಕಾರಿ ನೌಕರಿಯ
ಹುಡುಕಾಟ ನಡೆಸಿ ನೌಕರಿ ಸಿಗದಿರುವ ಕಾರಣಕ್ಕೆ, ಸ್ವಂತ ಉದ್ಯೋಗ ಮಾಡಲೆಂದು ಕುಕನೂರಿನಲ್ಲೇ ಸಣ್ಣದೊಂದು ಝರಾಕ್ಸ್ ಸೆಂಟರ್ ಮಾಡಿಕೊಂಡು ಸ್ವ ಉದ್ಯೋಗಿಯಾಗಿ, ಸರಳವಾದ, ಜೀವನ ನಡೆಸುತ್ತಾ, ಸಾಮಾಜಿಕ ಜೀವನದ ಬದುಕಿನಲ್ಲಿ, ನೊಂದವರಿಗೆ, ಬಡತನದಲ್ಲಿರುವವರಿಗೆ ತಮ್ಮಿಂದಾದ ಸಹಾಯವನ್ನು
ಮಾಡುತ್ತಾ ಸಮಾಜ ಸೇವೆಯೇ ತನ್ನ ಕರ್ತವ್ಯವೆಂದು ಭಾವಿಸಿ,
“ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಮಾತಿಗೆ ನಿದರ್ಶನವಾಗಿದ್ದಾರೆ. ಇಷ್ಟಕ್ಕೇ ತೃಪ್ತರಾಗದ ರವಿ ಹಿರೇಮನಿಯವರು, ಸಾಹಿತ್ಯಿಕ , ಸಾಂಸ್ಕೃತಿಕ, ಲೋಕದಲ್ಲಿಯೂ ಪ್ರತಿನಿತ್ಯ ಸಾಹಿತ್ಯದ ವಿವಿಧ ಗುಂಪುಗಳಲ್ಲಿ ಹನಿಗವನ, ಹಾಯ್ಕು, ಟಂಕಾ, ಕವನ, ರುಬಾಯಿ, ಬರೆದು ಆನ್ಲೈನ್ ವಾಟ್ಸಪ್ ನಲ್ಲಿ ಉತ್ತಮ, ಅತ್ಯುತ್ತಮ, ಪ್ರಶಸ್ತಿಗಳನ್ನು ಪಡೆಯುವ ಮೂಲಕ, ಸಾಹಿತ್ಯದ ಲೋಕದಲ್ಲಿ ಗಟ್ಟಿಯಾಗಿ ನಿಲ್ಲುವ ಸೂಚನೆ ನೀಡಿದರು, ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ, ದಾವಣಗೆರೆಯ ಸಾಂಸ್ಕೃತಿಕ ಸಂಘಟನಾ ಸಂಸ್ಥೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಸಾಲಿಗ್ರಾಮ ಇವರು
ದಿನಾಂಕ 5-12-2025 ರಂದು ಸರಸ್ವತಿ ಕನ್ನಡ ರತ್ನ ಪ್ರಶಸ್ತಿ ಮತ್ತು ಶಾಂತಲಾ ದೇವಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸಾಮಾನ್ಯ ಜ್ಞಾನ ಪರೀಕ್ಷೆಯ ಸ್ಪರ್ಧೆಯನ್ನು ಪ್ರತಿನಿತ್ಯ ನಡೆಸುವ ಬಾಗಲಕೋಟೆಯ ಮುತ್ತು ವಡ್ಡರ್ ಅವರ ಜ್ಞಾನ ಜ್ಯೋತಿ, ದಿನಂಪ್ರತಿ ಬಳಗದ ಸ್ಪರ್ಧೆಗಳಲ್ಲಿ, ಸತತವಾಗಿ ಎರಡು ತಿಂಗಳ ಕಾಲ ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ಜ್ಞಾನ ದಾಹ ತಣಿಸಿಕೊಳ್ಳುವುದರಲ್ಲಿಯೂ ಸಕ್ರಿಯರಾಗಿದ್ದಾರೆ,
ಇದೇ ರೀತಿ ಮೈಸೂರು ಮತ್ತು ಚಾಮರಾಜನಗರದ ಶ್ರೀಗಂಧ ಸಾಹಿತ್ಯ ಕಲಾ ಬಳಗದವರು, ಪ್ರತಿನಿತ್ಯ ನಡೆಸುವ ಸಾಹಿತ್ಯ ಸ್ಪರ್ಧೆಗಳಲ್ಲಿಯೂ, ನಿರಂತರವಾಗಿ ಭಾಗವಹಿಸಿ, ಇಲ್ಲಿಯೂ ಸಾಕಷ್ಟು ಬಾರಿ ಪ್ರಶಸ್ತಿ ಪಡೆದು, ಪ್ರಶಸ್ತಿಗಳ ಸರದಾರ ಎನಿಸಿದ್ದಾರೆ.

ಉದಾಹರಣೆಗೆ ರವಿ ಎಸ್. ಹಿರೇಮನಿ, ಅವರ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿ ಪತ್ರಗಳು ಈ ಕೆಳಗಿನಂತಿವೆ.
1) ವಿಶ್ವ ವಾಗ್ವಿಲಾಸ ಸಾಹಿತ್ಯ ರತ್ನ ಪ್ರಶಸ್ತಿ 2026.
2) ಸಂಗೊಳ್ಳಿ ರಾಯಣ್ಣ ಪ್ರಶಸ್ತಿ 2026.
3) ಕವಿ ವಿಭೂಷಣ ಪ್ರಶಸ್ತಿ,
4) ಕನ್ನಡ ರತ್ನ ಸಾಹಿತ್ಯ ಪ್ರಶಸ್ತಿ ಹೀಗೆ ಹೆಸರಿಸುತ್ತಾ ಹೋದರೆ, ಇವರನ್ನು ಪ್ರಶಸ್ತಿಗಳ ಸರದಾರ ಎಂದು
ಕರೆಯುವುದರಲ್ಲಿ ಯಾವ ಅತಿಶಯವೂ ಇಲ್ಲ, ಎನಿಸುತ್ತದೆ,
ಸಮಾಜ ಸೇವೆ ಮತ್ತು ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ನಡೆಸುತ್ತಿರುವ ರವಿ ಹಿರೇಮನಿಯವರಿಗೆ ಇನ್ನಷ್ಟು
ಪ್ರಶಸ್ತಿಗಳು ಲಭಿಸುವಂತಾಗಲಿ ಎಂದು ಆಶಿಸಿ ನನ್ನ ಈ ಬರಹಕ್ಕೆ ವಿರಾಮ ನೀಡುವೆ.

- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ.
ಮೊ. 7996790189.




















