
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ನೂತನ ದೇವಾಲಯದ ಪ್ರಾರಂಭೋತ್ಸವ, ಕಳಸಾರೋಹಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ವಹಿಸಿಕೊಂಡು ಸಿ ಆರ್ ಸುರೇಶ್ (ಚೌಡ್ಲಾಪುರ ಸೂರಿ )ರವರು ಬರೆದ ಶ್ರೀ ಕರಿಯಮ್ಮ ದೇವಿ ಚರಿತೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಪುಸ್ತಕವನ್ನು ಬಿಡುಗಡೆ ಮಾಡಿ ಭಕ್ತರಿಗೆ ಒಳಿತಾಗಲಿ ಹಾಗೂ ದೇವಿಯ ಇತಿಹಾಸವನ್ನು ತಿಳಿಯಲು ತಾವೆಲ್ಲರೂ ಕೂಡ ಕರಿಯಮ್ಮ ದೇವಿ ಪುಸ್ತಕವನ್ನು ಓದಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಶ್ರೀ ಶ್ರೀ ಷ||ಬ್ರ || ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಮ್ಮ ಸಂಸ್ಕೃತಿ ಪರಂಪರೆಗೆ ಹಳ್ಳಿಗಳು ಭದ್ರ ಬುನಾದಿಯಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಜನರನ್ನು ಎಚ್ಚರಿಸುವ ಕೆಲಸ ವಾಗುತ್ತದೆ ಎಂದರು. ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕಾದರೆ ನಿತ್ಯ ದೈವಿಕ ಕಾರ್ಯಗಳು ಜರುಗುವುದು ಅವಶ್ಯಕವಾಗಿದೆ ಎಂದು ಮನಮಟ್ಟುವಂತೆ ತಿಳಿಸಿದರು.
ಹಾಗೆಯೇ ಮತ್ತೋರ್ವ ಪೂಜ್ಯರಾದ ಶ್ರೀ ಶ್ರೀ ಶ್ರೀ ಬಸವರಾಜ ಪಂಡಿತಾಚಾರ್ಯ ಸ್ವಾಮಿಗಳು ತಮ್ಮ ನುಡಿಗಳ ಮೂಲಕ ಧರ್ಮದ ನೆಲೆಗಟ್ಟಿನ ಬಗ್ಗೆ ವಿಸ್ಕೃತವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿಗಳಾದ ಸಿಂಗಟಗೆರೆ ಸಿದ್ದಪ್ಪನವರು ಕರಿಯಮ್ಮ ದೇವಿ ಚರಿತೆ ಕೃತಿಯನ್ನು ಉತ್ತಮವಾಗಿ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ವೈ ಎಂ ತಿಪ್ಪೇಶ್, ದೇವರಾಜ್, ನಂಜುಂಡಸ್ವಾಮಿ, ಮಂಜುಳ, ವಸಂತ, ಮಂಜಪ್ಪ, ಲೋಕೇಶ್, ಶಿವಣ್ಣ, ನಂಜುಂಡಪ್ಪ, ಮುಂತಾದವರು ಪಾಲ್ಗೊಂಡಿದ್ದರು.
ಕರಿಯಮ್ಮ ದೇವಿಯ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಕೆ ಎಸ್ ದೊರೆಸ್ವಾಮಿಯವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ಕಲಾವತಿ ಸಂಗಡಿಗರು ಪ್ರಾರ್ಥನೆ ಮಾಡಿದರೆ, ನಂಜುಂಡ ಸ್ವಾಮಿ ನಿರೂಪಿಸಿದರು, ಯುವ ಸಾಹಿತಿ ಚೌಡ್ಲಾಪುರ ಸೂರಿ ಸ್ವಾಗತಿಸಿದರು.
- ಕರುನಾಡ ಕಂದ ಪತ್ರಿಕೆ



















