ಅನ್ಯರ ಅಧರ್ಮದ
ಅನಾಚಾರದ ಮಾತುಗಳನು
ಲೆಕ್ಕಕ್ಕೇ ಇಲ್ಲವೆಂದು
ಬಿಟ್ಟು ಬಿಡು !
ಸೋತು ಬೆಂಡಾದ ಜೀವಗಳು
ಮತ್ತೆಂದೂ ಕುಗ್ಗಬಾರದೆಂದು
ಹಿಗ್ಗಿ ತೋರಿಸಿದವರ
ಹುಸಿ ಮಾತುಗಳನು
ಕೇಳದೆಯೇ
ಬಿಟ್ಟು ಬಿಡು !
ಅರಿತರೂ ಅರಿಯದಂತೆ,
ಇಲ್ಲದ್ದನ್ನೂ ಸಲ್ಲದ್ದನ್ನೂ
ವಾದವನ್ನಾಗಿಸುವವರ
ಮಾತುಗಳು ಸಾಕೆಂದು
ಮೌನದ ದಾರಿಯಲಿ
ಬಿಟ್ಟು ಬಿಡು !
ಅಜ್ಞಾನದ ನೆರಳಿನಲ್ಲಿ
ಕೀಳಾಗಿ ಕಾಣಿಸುವ
ನಯ-ನಾಜೂಕಿನ ವ್ಯಂಗ್ಯಮಾತುಗಳ
ಒಳಮರ್ಮವನು ಅರಿತು
ಅವುಗಳ ನೋವನು
ಮನದೊಳಗಿರಿಸದೆ
ಬಿಟ್ಟು ಬಿಡು !
ವಾದಕ್ಕೆ ವಾದವನ್ನೇ
ಮಾಡುತ್ತಾ ಹೋಗದೆ,
“ನಮ್ಮದೇ ಸರಿ” ಎನ್ನುವ
ಅವರ ಅರೆಜ್ಞಾನವನು
ಅವರಲ್ಲಿಯೇ ಬಿಟ್ಟು
ಮುಂದೆ ಸಾಗು—
ಬಿಟ್ಟು ಬಿಡು !
ನಿನ್ನ ಮೌಲ್ಯವನು
ಅನ್ಯರ ಮಾತಿನಲ್ಲಿ ಹುಡುಕದೆ,
ನಿನ್ನ ದಾರಿಯನು
ನೀನೇ ಆರಿಸಿಕೋ;
ಕಲ್ಲೆಸೆದ ಕೈಗಳತ್ತ
ಮತ್ತೆ ನೋಡದೆ
ಬಿಟ್ಟು ಬಿಡು !
ನಿಂದೆಯ ಮಾತು ಬಂದರೆ
ನಗುತಲೇ ಸಾಗು,
ಅಪಮಾನ ಎದುರಾದರೆ
ಸಹನೆಯಲಿ ನಿಲ್ಲು;
ಕಾಲವೇ ಉತ್ತರಿಸುವಾಗ
ನೀನು ಉತ್ತರಿಸದೆ
ಬಿಟ್ಟು ಬಿಡು !
ಮನಸ್ಸಿಗೆ ನೋವು ಕೊಡುವ
ನೆನಪುಗಳನ್ನೂ,
ಮುಂದೆ ಸಾಗಲು ತಡೆಯುವ
ಬಂಧಗಳನ್ನೂ,
ನಿನ್ನ ನೆಮ್ಮದಿ ಕಸಿಯುವ
ಎಲ್ಲ ಮಾತುಗಳನ್ನೂ—
ಜೀವನದ ದಾರಿಯಿಂದ
ನಿಧಾನವಾಗಿ
ಬಿಟ್ಟು ಬಿಡು !
ಏಕೆಂದರೆ
ಪ್ರತಿ ಮಾತಿಗೂ ಉತ್ತರಿಸುವುದು
ಜಾಣ್ಮೆಯಲ್ಲ;
ಕೆಲವೊಮ್ಮೆ
ಮೌನವೇ ಮಹತ್ತರ ಉತ್ತರ,
ಮುಂದೆ ಸಾಗುವುದೇ
ಅತ್ಯುತ್ತಮ ಪ್ರತಿಕ್ರಿಯೆ!
ನಿನ್ನ ನೆಮ್ಮದಿಗಾಗಿ,
ನಿನ್ನ ಆತ್ಮಗೌರವಕ್ಕಾಗಿ,
ನಿನ್ನ ಸುಂದರ ನಾಳೆಗಾಗಿ—
ಅಗತ್ಯವಿಲ್ಲದ ಎಲ್ಲವನ್ನೂ
ಇಂದು
ಬಿಟ್ಟು ಬಿಡು !
- ಡಾ. ಎಂ.ಆರ್. ಛಲವಾದಿ
ಕನ್ನಡ ಅತಿಥಿ ಉಪನ್ಯಾಸಕರು ,
ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ.




















