
ಕ್ಷೇತ್ರದ ದೇವಾಲಯಗಳು ಮತ್ತು ಶಾಲೆಗಳ ಅಭಿವೃದ್ಧಿಗೆ ಧನ ಸಹಾಯ.
ಕೊರಟಗೆರೆ ತಾಲ್ಲೂಕಿನ ಕೋಳಲ ವ್ಯಾಪ್ತಿಯ ಸಿಂಗ್ರಿಹಳ್ಳಿ, ಎಸ್.ಗೊಲ್ಲಹಳ್ಳಿ ಹಾಗೂ ದೊಡ್ಡಪಾಲನಹಳ್ಳಿ ಗ್ರಾಮಗಳ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿಎನ್ ಕೃಷ್ಣಮೂರ್ತಿ ಧನಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವಸ್ಥಾನಗಳು ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಮ್ಮ ಮೊದಲ ಆದ್ಯತೆ ಎಂದು ಹೇಳಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೊರಟಗೆರೆಯಿಂದ ಎಲೆ ರಾಂಪುರ ಮಾರ್ಗವಾಗಿ ಬಸ್ ಸಂಪರ್ಕ ಕಲ್ಪಿಸಲು ಬೈರತಿ ಸುರೇಶ್ ಅವರೊಂದಿಗೆ ಮಾತನಾಡುವುದಾಗಿ ಪಿ. ಎನ್ . ಕೆ ಯವರು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಒಂದು ಗ್ರಾಮದಲ್ಲಿ ದೇವಸ್ಥಾನವಿದ್ದರೆ ಆ ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ. ಅದೇ ಗ್ರಾಮದಲ್ಲಿ ಶಾಲೆಯಿದ್ದರೆ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಜ್ಞಾನ ಬೆಳೆಯುತ್ತದೆ. ಹೀಗಾಗಿ ದೇವಸ್ಥಾನ ಹಾಗೂ ಶಾಲೆಗಳ ಅಭಿವೃದ್ಧಿಗೆ ತಮ್ಮಿಂದಾಗುವ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಎರಡು ಗ್ರಾಮಗಳ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಬಾಗಿನ ನೀಡಿ ಹಾರೈಸಿದ ಅವರು, ಗ್ರಾಮಗಳ ಜನರೊಂದಿಗೆ ತಮ್ಮ ಬಾಂಧವ್ಯ ಮುಂದುವರಿಸುವುದಾಗಿ ಹೇಳಿದರು.
“ಚುನಾವಣೆ ಬಂದಾಗ ಚುನಾವಣೆ ಮಾಡೋಣ. ಆದರೆ ನಾವು ಹುಟ್ಟಿ ಬೆಳೆದ ಗ್ರಾಮಗಳಿಗೆ, ನಮ್ಮನ್ನು ಬೆಳೆಸಿದ ಜನರಿಗೆ ನಮ್ಮಿಂದಾಗುವ ಸಹಾಯ ಮಾಡೋಣ” ಎಂದು ಪಿಎನ್ ಕೃಷ್ಣಮೂರ್ತಿ ಹೇಳಿದರು.
“ನನ್ನ 25 ವರ್ಷಗಳ ರಾಜಕೀಯ ಜೀವನದಲ್ಲಿ ನನಗೆ ಭವಿಷ್ಯ ಕೊಟ್ಟ ಸ್ಥಳ ಕೋಳಲ. ಇಲ್ಲಿನ ಜನರ ಪ್ರೀತಿ ಮತ್ತು ಆಶೀರ್ವಾದವನ್ನು ನಾನು ಎಂದಿಗೂ ಮರೆಯುವುದಿಲ್ಲ. 2028ರಲ್ಲಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಬಂದರೆ ನನಗೂ ಒಂದು ಅವಕಾಶ ನೀಡಿ. ನಿಮ್ಮೊಂದಿಗೆ ಸೇರಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡೋಣ.”
- ಪಿಎನ್ ಕೃಷ್ಣಮೂರ್ತಿ
ಪರಮೇಶ್ವರ್ ಬಗ್ಗೆ ಕೃಷ್ಣಮೂರ್ತಿ ಹೇಳಿದ್ದೇನು?
ಕೊರಟಗೆರೆ ತಾಲೂಕಿನ ಜನರು ಡಾ. ಜಿ. ಪರಮೇಶ್ವರ್ ಅವರಿಗೆ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಮುಂದೆ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬುದು ತಮ್ಮ ಹಾರೈಕೆ ಎಂದರು.
ಆದರೆ ಕ್ಷೇತ್ರದಲ್ಲಿನ ಕೆಲವು ಅಧಿಕಾರಿಗಳ ಕಾರ್ಯವೈಖರಿಯಿಂದ ಡಾ. ಪರಮೇಶ್ವರ್ ಅವರಿಗೆ ಕೆಟ್ಟ ಹೆಸರು ಬರುವಂತಾಗಬಾರದು. ಅಧಿಕಾರಿಗಳನ್ನು ಸರಿಪಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
“ತಿಂಗಳಿಗೆ ಒಂದು ಬಾರಿಯಾದರೂ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಇಡೀ ರಾಜ್ಯದ ಜವಾಬ್ದಾರಿ ಅವರ ಮೇಲಿದೆ ಎಂಬುದು ನಮಗೆ ಗೊತ್ತಿದೆ. ಆದರೆ ಕ್ಷೇತ್ರದ ಕಡೆಗೂ ಸ್ವಲ್ಪ ಗಮನ ಹರಿಸಬೇಕು. ಇದು ಆಗ್ರಹವಲ್ಲ, ಮಾಧ್ಯಮಗಳ ಮೂಲಕ ನೀಡುತ್ತಿರುವ ಒಂದು ಸಲಹೆ” ಎಂದು ಹೇಳಿದರು.
ಮಾವತ್ತೂರು ಮಂಜುನಾಥ್ ಮಾತನಾಡಿ
“ಪಿಎನ್ ಕೃಷ್ಣಮೂರ್ತಿ ಅವರು ಗ್ರಾಮಗಳ ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿರುವುದು ಸಂತೋಷದ ವಿಚಾರ. ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಸುವ ಇಂತಹ ವ್ಯಕ್ತಿಗಳ ಅಗತ್ಯ ನಮಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಜನಪರ ಕೆಲಸಗಳನ್ನು ಮುಂದುವರಿಸಲಿ ಎಂಬುದು ನಮ್ಮ ಆಶಯ.” ಎಂದು ತಿಳಿಸಿದರು.
ಕೇಬಲ್ ಕಾಂತರಾಜು ಮಾತನಾಡಿ
“ಕೋಳಲ ವ್ಯಾಪ್ತಿಯ ಗ್ರಾಮಗಳೊಂದಿಗೆ ಪಿಎನ್ ಕೃಷ್ಣಮೂರ್ತಿ ಅವರಿಗೆ ಬಹಳ ವರ್ಷಗಳ ನಂಟಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯ ಮಾಡಿರುವುದು ಗ್ರಾಮಸ್ಥರಿಗೆ ಅನುಕೂಲವಾಗಿದೆ. ರಾಜಕೀಯ ಏನೇ ಇರಲಿ, ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.” ಎಂದು ತಿಳಿಸಿದರು.
ದೊಡ್ಡಪಾಲನಹಳ್ಳಿ ಗ್ರಾಮಸ್ಥ ಕಿರಣ್ ಮಾತನಾಡಿ.
“ನಮ್ಮ ಗ್ರಾಮದ ದೇವಸ್ಥಾನದ ಅಭಿವೃದ್ಧಿಗೆ ಧನಸಹಾಯ ನೀಡಿರುವುದು ನಮಗೆ ಸಂತೋಷ ತಂದಿದೆ. ಗ್ರಾಮಗಳ ಅಭಿವೃದ್ಧಿಗೆ ಇನ್ನಷ್ಟು ಸಹಕಾರ ಸಿಗಬೇಕು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಇಂತಹ ಜನಪ್ರತಿನಿಧಿಗಳು ಹಾಗೂ ಮುಖಂಡರು ಬೇಕು.” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್, ಪರಮೇಶ್, ರಂಗನಾಥ್, ಸಿಂಗರಿಹಳ್ಳಿ ರಂಗನಾಥ್, ಕಾಂತರಾಜು, ನರಸಿಂಹರಾಜು. ಎಲ್, ಗಿರೀಶ್, ಇನ್ನು ಅನೇಕ ಪಿಎಂಕೆ ಅಭಿಮಾನಿಗಳು ಭಾಗವಹಿಸಿದ್ದರು.
ವರದಿ. ಪ್ರಸನ್ನಕುಮಾರ್, ಎಸ್. ಕೊರಟಗೆರೆ.




















