ಬಳ್ಳಾರಿ / ಕಂಪ್ಲಿ: ಇಲ್ಲಿನ ಕರ್ನಾಟಕ ರಾಜ್ಯ (6ರಿಂದ 8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ (ಜಿಪಿಟಿ) ಕಂಪ್ಲಿ ತಾಲೂಕು ಘಟಕದ 2026-31ನೇ ಸಾಲಿನ ಚುನಾವಣೆಗೆ ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಹಾಗೂ ನಿವೃತ್ತ ಶಿಕ್ಷಕ ವೀರೇಶ್ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿದ್ದು, ಒಟ್ಟು 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಪ್ರಕಟಿಸಲಾಗಿದೆ. ಇದರಲ್ಲಿ 8 ಪುರುಷ ಹಾಗೂ 4 ಮಹಿಳಾ ಸ್ಥಾನಗಳು ಒಳಗೊಂಡಿವೆ. ವಿಶೇಷವೆಂದರೆ, ನಿಗದಿತ 12 ಸ್ಥಾನಗಳಿಗೆ ಸರಿಯಾಗಿ 8 ಪುರುಷರು ಮತ್ತು 4 ಮಹಿಳೆಯರು ಸೇರಿ ಒಟ್ಟು 12 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ಜಿಪಿಟಿ ಶಿಕ್ಷಕರಾದ ಮಂಜುನಾಥ, ಉಮೇಶ, ಗಾದಿಲಿಂಗಪ್ಪ, ಪಂಪನಗೌಡ, ಬಸವರಾಜ, ಪಾಂಡುರಂಗ, ವಾಲ್ಮೀಕಿ ಆಂಜಿನೇಯ್ಯ, ಎನ್. ಶಿವಕುಮಾರ, ಸುನೀತಕುಮಾರಿ, ಜ್ಯೋತಿ ಇಟಗಿ, ರಾಜೇಶ್ವರಿ ಹಾಗೂ ರೇಖಾ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಾಗಿದ್ದಾರೆ. ಸೆಪ್ಟೆಂಬರ್ 23 ರಂದು ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಸೆಪ್ಟೆಂಬರ್ 25 ರಂದು ಅಧಿಕೃತವಾಗಿ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟು ಸ್ಥಾನಗಳಿಗೆ ಸಮನಾಗಿ ನಾಮಪತ್ರಗಳು ಸಲ್ಲಿಕೆಯಾಗಿರುವುದರಿಂದ, ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ




















