ಬಳ್ಳಾರಿ / ಕಂಪ್ಲಿ : ಸಮೀಪದ ದೇವಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ₹2,51,796 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಮುಖ್ಯಕಾರ್ಯನಿರ್ವಾಹಕ ಎಸ್.ಎಸ್. ನಾಗರಾಜ ತಿಳಿಸಿದರು.
ಗ್ರಾಮದ ಸರ್ಕಾರಿ ಶಾಲಾ ಕೊಠಡಿಯಲ್ಲಿ ಬುಧವಾರ ಸಂಘದ ಅಧ್ಯಕ್ಷ ಅಳ್ಳಳ್ಳಿ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಅವರು ವರದಿ ಮಂಡಿಸಿದರು.
ಸಂಘವು ಪ್ರಸ್ತುತ 2,055 ಸದಸ್ಯರನ್ನು ಹೊಂದಿದ್ದು, ₹78.82 ಲಕ್ಷ ಶೇರು ಬಂಡವಾಳ ಹಾಗೂ ₹1.23 ಕೋಟಿ ಠೇವಣಿ ಸಂಗ್ರಹಿಸಿದೆ.
ಪ್ರಸಕ್ತ ಸಾಲಿನಲ್ಲಿ 604 ಸದಸ್ಯರಿಗೆ ₹4.92 ಕೋಟಿ ಕೆಸಿಸಿ ಬೆಳೆ ಸಾಲ, 9 ಜನರಿಗೆ ₹40.58 ಲಕ್ಷ ಮಧ್ಯಮಾವಧಿ ಸಾಲ ಹಾಗೂ 146 ಜನರಿಗೆ ₹90.29 ಲಕ್ಷ ಬಿಡಿಪಿ ಸಾಲ ವಿತರಿಸಲಾಗಿದೆ ಎಂದು ಆರ್ಥಿಕ ಪ್ರಗತಿ ವಿವರ ನೀಡಿದರು. ಸಂಘದ ಸಾರ್ವತ್ರಿಕ ಬೆಳವಣಿಗೆಗೆ ರೈತರು ಮತ್ತು ಸದಸ್ಯರ ಸಹಕಾರ ಹೀಗೆಯೇ ಮುಂದುವರಿಯಬೇಕು ಎಂದು ಅವರು ಕೋರಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಗಾದಿಗನೂರು ಹಂಪಮ್ಮ, ನಿರ್ದೇಶಕರಾದ ಕೆ. ತಿಪ್ಪೇರುದ್ರಪ್ಪ, ಸಿ.ಕೆ. ಸೋಮಶೇಖರ, ಜಿ. ಕಡೆಮನೆ ನಾಗರಾಜ, ಕೊರವರ ಹುಲುಗಪ್ಪ, ಈ. ಅನ್ನಪೂರ್ಣ, ಜಿ. ಗಣೇಶಗೌಡ, ಎಸ್.ಎಸ್. ಮಲ್ಲಿಕಾರ್ಜುನ, ಪಿ. ನೀಲಕಂಠಪ್ಪ, ನಾಯಕರ ತಿಪ್ಪೇಸ್ವಾಮಿ, ಸಣಾಪುರ ಪಾರ್ವತಿ, ಮುಖಂಡರಾದ ಅಳ್ಳಳ್ಳಿ ವಿರೇಶ, ಜಿ. ಲಿಂಗನಗೌಡ, ಜಿ. ಮಲ್ಲಿಗೌಡ, ನಾಯಕರ ಯಂಕೋಬ, ಅಮರೇಗೌಡ ಹಾಗೂ ಸಂಘದ ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















