ಪೌರ ಕಾರ್ಮಿಕರಿಗೆ ಸೌಲತ್ತುಗಳನ್ನು ಒದಗಿಸಲು ಬದ್ಧ : ಬಿ.ಮಲ್ಲಿಕಾರ್ಜುನ
ಬಳ್ಳಾರಿ / ಕಂಪ್ಲಿ : ಪೌರ ಕಾರ್ಮಿಕರು ದಿನನಿತ್ಯದ ದುಡಿಮೆಯಲ್ಲಿ ಅಲ್ಪಸ್ವಲ್ಪ ಹಣವನ್ನು ಕೂಡಿಟ್ಟು, ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಬಳಸಿ, ಭವಿಷ್ಯ ರೂಪಿಸಬೇಕು. ಮತ್ತು ದುಶ್ಚಟಗಳಿಂದ ದೂರವಿರುವ ಮೂಲಕ ನಗರದ ಸ್ವಚ್ಚತೆಗೆ ಮುಂದಾಗಬೇಕು ಎಂದು ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣ ಪುರಸಭೆ ಕಛೇರಿ ಆವರಣದಲ್ಲಿ ಬುಧವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ದಿನನಿತ್ಯದಲ್ಲಿ ಕೈಗೊಂಡಿರುವ ಸ್ವಚ್ಚತೆ ಕಾರ್ಯ ಮೆಚ್ಚುವಂತಾಗಿದ್ದು, ಇದರ ಯಶಸ್ಸಿಗೆ ಪೌರ ಕಾರ್ಮಿಕರ ಶ್ರಮ ಮಹತ್ವದ್ದಾಗಿದೆ. ಪೌರ ಕಾರ್ಮಿಕರು ವರ್ಷಪೂರ್ತಿ ನಗರವನ್ನು ಸ್ವಚ್ಛವಾಗಿಡಲು ಆರೋಗ್ಯವನ್ನು ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ. ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಸಮಸ್ಯೆಗಳು ಪರಿಹರಿಸಲು ತ್ವರಿತವಾಗಿ ಸ್ಪಂದಿಸಲಾಗುವುದು. ಸರ್ಕಾರದಿಂದ ಪೌರ ಕಾರ್ಮಿಕರಿಗೆ ನೀಡುವ ಸೌಲತ್ತುಗಳನ್ನು ಒದಗಿಸಲು ಪುರಸಭೆ ಬದ್ಧವಾಗಿದೆ. ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆ ಶ್ರಮಿಸಲಿದೆ. ಪೌರ ಕಾರ್ಮಿಕರು ನಗರದ ಸೌಂದರ್ಯೀಕರಣಕ್ಕೆ ಸಹಕಾರ ನೀಡಬೇಕು. ಪೌರ ಕಾರ್ಮಿಕರು ಸರಿಯಾದ ದಾಖಲೆಗಳನ್ನು ನೀಡಿದ್ದಲ್ಲಿ ಅತಿ ಶೀಘ್ರದಲ್ಲೇ ನಿವೇಶನ ನೀಡಲಾಗುವುದು. ವಿಶ್ರಾಂತಿ ಗೃಹ ಕಟ್ಟಡ ಕಾಮಗಾರಿ ಈಗಾಗಲೇ ಮುಗಿದಿದ್ದು, ಅತಿ ಶೀಘ್ರದಲ್ಲೇ ಸ್ಥಳೀಯ ಶಾಸಕರ ಮೂಲಕ ಉದ್ಘಾಟಿಸಿ, ಪೌರ ಕಾರ್ಮಿಕರ ಬಳಕೆಗೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು. ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಸಮಾರಂಭದ ಮುಂಚಿತವಾಗಿ ನಗರದುದ್ದಕ್ಕೂ ಪೌರ ಕಾರ್ಮಿಕರ ದಿನಾಚರಣೆ ಆಚರಿಸುವ ಜೊತೆಗೆ ಧ್ವನಿ ವರ್ಧಕದ ಹಾಡುಗಳಿಗೆ ಪೌರ ಕಾರ್ಮಿಕ ಹೆಜ್ಜೆ ಹಾಕಿದರು. ನಂತರ ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಪೌರ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.
ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ರೀಜನ್ ಅಧ್ಯಕ್ಷ ಡಿ.ಮೌನೇಶ್ ಮಾತನಾಡಿ, ಪೌರ ಕಾರ್ಮಿಕರ ಆರೋಗ್ಯ ಕಾಪಾಡಿಕೊಂಡು, ನಗರದ ಸ್ವಚ್ಚತೆಗೆ ಮುಂದಾಗಬೇಕು. ನಗರವನ್ನು ಸ್ವಚ್ಚವಾಗಿಡಲು ಕಾರ್ಮಿಕರ ಪಾತ್ರ ದೊಡ್ಡದಿದೆ. ಅವರಿಗೆ ಗೌರವ ನೀಡುವ ಮೂಲಕ ಸಹಕರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕ ಅಧ್ಯಕ್ಷ ಡಾ.ಭರತ್ ಪದ್ಮಸಾಲಿ, ಆರೋಗ್ಯ ಹಿರಿಯ ನಿರೀಕ್ಷಕ ಪ್ರಕಾಶಬಾಬು, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ರುದ್ರಪ್ಪ ಆಚಾರ್, ಶಾಂತಿಲಾಲ್, ಪೌರ ಕಾರ್ಮಿಕರಾದ ಹೆಚ್.ರವಿ, ಹನುಮಂತ, ಓಬಳೇಶ, ಸುಂಕಪ್ಪ, ರಾಮಪ್ಪ, ಸುಜಾತ, ನಾಗಮ್ಮ, ಲಕ್ಷಿದೇವಿ, ಅನಂತಮ್ಮ ಸೇರಿದಂತೆ ಸಿಬ್ಬಂದಿಗಳು, ಪೌರ ಕಾರ್ಮಿಕರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















