ವಿಜಯಪುರ ಜಿಲ್ಲೆಯ ತಾಳಿಕೋಟೆಯ ಶ್ರೀ ಜಗದ್ಗುರು ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ ನಿಯಮಿತ ತಾಳಿಕೋಟೆ ಶಾಖೆಯ 26ನೇ ವರ್ಷದ ವಾರ್ಷಿಕ ವರದಿ, 2025 26 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆಯನ್ನು ದಿನಾಂಕ 24 .09 .2026ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಖಾಸ್ಗತೇಶ್ವರ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಶ್ರೀ ಮುತ್ತುರಾಜ ವಿ. ಜಹಾಗೀರದಾರ ಇವರ ಘನ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಮಹಾಸಭೆಯಲ್ಲಿ ಸಂಘದ ಸರ್ವ ಸದಸ್ಯರು ಭಾಗವಹಿಸಿ ಶೋಭೆ ತಂದರು.
ಈ ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಯೋಗಿ ಸಿದ್ದಲಿಂಗ ದೇವರು ವಹಿಸಿದ್ದರು.
ಸಾನಿದ್ಯವನ್ನು ಸಿಂದಗಿ ಶಾಖೆಯ ಶ್ರೀ ರಾಮಲಿಂಗಯ್ಯ ಕೆ ಹಿರೇಮಠವರು ವಹಿಸಿದರು.
ಉಪಾಧ್ಯಕ್ಷರಾದ ಶ್ರೀ ನಾಗಲಿಂಗಯ್ಯ ಚ. ಡೋಣೂರ ಮಠ ಸರ್ವ ನಿರ್ದೇಶಕ ಮಂಡಳಿ ಹಾಗೂ ಸಿಂದಗಿ ಶಾಖೆಯ ಸಲಹಾ ಸಮಿತಿ ಸದಸ್ಯರುಗಳು ಹಾಗೂ ಮುದ್ದೇಬಿಹಾಳ ತಾಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಆರ್ ಬಿ ದಮ್ಮೂರ ಮಠ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸ್ವಾಗತವನ್ನು ಸೋಮಶೇಖರ್ ಹಿರೇಮಠವರು ಕೋರಿದರು.
ಪ್ರಥಮವಾಗಿ ತಾಳಿಕೋಟೆಯ ಶ್ರೀಖಾಸ್ಗತೇಶ್ವರ ಮಠದ ಸಂಗೀತ ಶಾಲೆಯ ದೀಪಕ್ ಸಿಂಗ್ ತಂಡದ ವತಿಯಿಂದ ಪ್ರಾರ್ಥನೆ ಗೀತೆ ಹಾಡುವ ಮುಖಾಂತರ ಈ ಸಭೆಗೆ ಚಾಲನೆ ನೀಡಲಾಯಿತು.
ನಂತರ ಜ್ಯೋತಿ ಬೆಳಗಿಸುವುದರ ಮುಖಾಂತರ ಈ ಕಾರ್ಯಕ್ರಮವನ್ನು ವೇದಿಕೆಯ ಸರ್ವ ಸದಸ್ಯರು ಕೂಡಿಕೊಂಡು ಉದ್ಘಾಟಿಸಿದರು.
ಆರ್ ಬಿ ದಮ್ಮೂರಮಠ ಅವರು ಅತಿಥಿ ಭಾಷಣದಲ್ಲಿ ಮಾತನಾಡುತ್ತಾ ದಿ. 6 -9 -2000 ನೇ ಇಸವಿಯಲ್ಲಿ 300 ಶೇರುಗಳನ್ನು ಸಂಗ್ರಹ ಮಾಡಿ ಪಂಚಾಕ್ಷರಿ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆ ಮಾಡಿ 25ನೇ ವರ್ಷದಲ್ಲಿ 1240 ಸದಸ್ಯರುಗಳನ್ನು ಹೊಂದಿದ್ದು ಈ ವರ್ಷ 1354 ಸದಸ್ಯರನ್ನು ಹೊಂದಿದೆ ಹೇಳಲು ಹೆಮ್ಮೆ ಅನಿಸುತ್ತದೆ. ಸಿಂದಗಿಯಲ್ಲಿ ಒಂದು ಶಾಖೆಯನ್ನು ತೆಗೆದು 16 ಜನಕ್ಕೆ ಉದ್ಯೋಗವನ್ನು ಕೊಟ್ಟಿದ್ದೇವೆ. 2019 -20 ರಲ್ಲಿ ರಲ್ಲಿ ನಮ್ಮ ಸಮಾಜದ ವೀರೇಶ ಹಿರೇಮಠ ಅವರಿಗೆ ಆರ್ಥಿಕ ಬೆಂಬಲವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೂಡಿಕೊಂಡು 11 ಲಕ್ಷ ರೂ.ಗಳನ್ನು ಜಮಾವಣೆ ಮಾಡಿ ಎಂಬಿಬಿಎಸ್ ಡಾಕ್ಟರ್ ಕೋರ್ಸ್ ಅನ್ನು ಕಲಿಯಲು ಹಣ ಸಹಾಯ ಮಾಡಿದೆವು. ಆ ವಿದ್ಯಾರ್ಥಿ ಇಂದು ಎಂಬಿಬಿಎಸ್ ಶಿಕ್ಷಣ ಮುಗಿಸಿಕೊಂಡು ನಮ್ಮ ತಾಳಿಕೋಟೆಯ ಸರಕಾರಿ ದವಾಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ಅನಿಸುತ್ತದೆ ಎಂದರು.
ವ್ಯವಸ್ಥಾಪಕರಾದ ಶ್ರೀಕಾಂತ ಎಸ್. ಹಿರೇಮಠ ರವರು
ಈ ನಮ್ಮ ಸಂಘವು ಈ ವರ್ಷ 135. 81 ಕೋಟಿ ವ್ಯವಹಾರವಾಗಿದ್ದು ಎಲ್ಲಾ ಖರ್ಚು ವೆಚ್ಚವನ್ನು ತೆಗೆದು 82 ಲಕ್ಷ 80 ಸಾವಿರ 395 – 62 ಪೈಸೆ ನಿವ್ವಳ ಲಾಭ ಆಗಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಸರ್ವ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ ನಮ್ಮ ಸಂಘಕ್ಕೆ ಇನ್ನೂ ಹೆಚ್ಚಿನ ಲಾಭಾಂಶ ಸಿಗಲೆಂದು ಹೇಳಿ ವರದಿ ವಾಚನವನ್ನು ಮುಗಿಸಿದರು.
ನಂತರ ಈ ಸಂಘದ ಸದಸ್ಯರ ಮಕ್ಕಳಲ್ಲಿ ಪಿಯುಸಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100ಕ್ಕೆ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ವೇದಿಕೆ ಮೇಲೆ ಅವರುಗಳ ತಂದೆ ತಾಯಿ, ಸಹೋದರ ಸಹೋದರಿಯರನ್ನು ಕರೆಸಿ ನೆರವೇರಿಸಿದರು.
ನಂತರ ಈ ಸಭೆಯ ಸಾನಿಧ್ಯ ವಹಿಸಿದ ಶ್ರೀ ರಾಮಲಿಂಗಯ್ಯ ಕೆ ಹಿರೇಮಠ ರವರು ಆಶೀರ್ವಚನ ಹೇಳಿದರು.
ವಂದನಾರ್ಪಣೆಯನ್ನು ಸಿಬ್ಬಂದಿ ವರ್ಗದವರು ನೆರವೇರಿಸಿದರು.
ವರದಿಗಾರರು ಸಂಗಮೇಶ ಸಿ.ಚೌದ್ರಿ




















