ಇಂದಿನ ದಿನಗಳಲ್ಲಿ ಸಾಹಿತ್ಯ ಎಂಬ ಪವಿತ್ರ ಕ್ಷೇತ್ರವೂ ವ್ಯಾಪಾರದ ಮಾರುಕಟ್ಟೆಯಾಗಿ, ಸ್ವಾರ್ಥದ ವೇದಿಕೆಯಾಗಿ ಬದಲಾಗುತ್ತಿರುವುದು ನೋವಿನ ಸಂಗತಿ. ಒಮ್ಮೆ ಕಲಂ ಹಿಡಿದವನು ಸಮಾಜದ ಕಣ್ಣಾಗಿರಬೇಕಿತ್ತು, ನಾಡಿನ ನೋವಿಗೆ ದನಿಯಾಗಬೇಕಿತ್ತು, ಅಂಕುಡೊಂಕುಗಳನ್ನು ತಿದ್ದುವ ಕೈಯಾಗಬೇಕಿತ್ತು. ಆದರೆ ಇಂದು ಶೇಕಡಾ ತೊಂಬತ್ತು ಜನ ಸಾಹಿತಿಗಳು ಎನ್ನುವವರು ಪ್ರಶಸ್ತಿ, ಸನ್ಮಾನ, ವೇದಿಕೆ ಮತ್ತು ಅಧಿಕಾರದ ಸುತ್ತಲೇ ಸುತ್ತುವ ಗಿಡುಗರಂತೆ ಆಗಿದ್ದಾರೆ. ಅವರಿಗೆ ಸಾಹಿತ್ಯ ಎಂದರೆ ಮಾನವೀಯತೆಯ ಕಳಕಳಿಯಲ್ಲ, ಅದು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವ, ಹೆಸರು ಬೆಳೆಯುವ ಒಂದು ವ್ಯವಹಾರ. ಇವರು ಸಂಘಟನೆ ಮಾಡಲು ಹೋಗುವುದಿಲ್ಲ. ಏಕೆಂದರೆ ಸಂಘಟನೆಗೆ ಬೆವರು ಬೇಕು, ಸಮಯ ಬೇಕು, ತ್ಯಾಗ ಬೇಕು. ಇವರು ಹೋರಾಟದ ಮೈದಾನಕ್ಕೆ ಬರುವುದಿಲ್ಲ. ಏಕೆಂದರೆ ಹೋರಾಟದಲ್ಲಿ ಕಲ್ಲು-ಏಟು ತಿನ್ನಬೇಕು, ಜೈಲು ಸೇರುವ ಭಯವಿರುತ್ತದೆ. ಇವರ ಕೈಯಲ್ಲಿ ಹಣ ಬಿಡುವುದಿಲ್ಲ. ಒಂದು ಪುಸ್ತಕ ಮುದ್ರಿಸಲು, ಒಂದು ಕಾರ್ಯಕ್ರಮ ಮಾಡಲು ಕಾಸು ಕೊಡಲು ಇವರ ಕೈ ನಡುಗುತ್ತದೆ. ಸಮಯ ಕೇಳಿದರೆ ” ಬಹಳ ಬ್ಯುಸಿ ” ಎಂಬ ರೀತಿಯಲ್ಲಿ ಸಾವಿರ ಕಾರಣ ಹೇಳುತ್ತಾರೆ. ಆದರೆ ಅದೇ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆಯಲು, ಶಾಲು ಹೊದ್ದು ಫೋಟೋ ತೆಗೆಸಿಕೊಳ್ಳಲು ಇವರು ಮೊದಲ ಸಾಲಿನಲ್ಲಿ ಇರುತ್ತಾರೆ.
ಇದ್ದಿದ್ದನ್ನು ಇದ್ದ ಹಾಗೆ ಹೇಳುವ ನೈತಿಕತೆ ಇವರಲ್ಲಿ ಇಲ್ಲ. ಪ್ರಾಮಾಣಿಕವಾಗಿ ಮಾತಾಡಿದರೆ ಯಾರ ಮನಸ್ಸು ನೋವಾಗುತ್ತದೋ, ಯಾರ ಬೆಂಬಲ ಕೈ ತಪ್ಪುತ್ತದೋ ಎಂಬ ಭಯ ಇವರನ್ನು ಆವರಿಸಿರುತ್ತದೆ. ಆದ್ದರಿಂದ ಇವರು ಸದಾ ಸಮಯ ಸಾಧಕರು. ಅಧಿಕಾರದಲ್ಲಿರುವವರು ಮಾತಾಡಿದರೆ “ಅತ್ಯುತ್ತಮ” ಎನ್ನುತ್ತಾರೆ. ಅಧಿಕಾರ ಕಳೆದುಕೊಂಡರೆ ಅದೇ ವ್ಯಕ್ತಿಯ ಬಗ್ಗೆ “ಹೀಗಿತ್ತು ಹಾಗಿತ್ತು” ಎಂದು ಗುಸುಗುಸು ಮಾಡುತ್ತಾರೆ. ಬೆಳಿಗ್ಗೆ ಒಂದು ಹೇಳಿಕೆ, ಸಂಜೆಗೆ ಇನ್ನೊಂದು ಹೇಳಿಕೆ. ಇದು ಇವರ ದ್ವಿಮುಖ ವ್ಯಕ್ತಿತ್ವದ ಸಂಕೇತ. ಒಳಗೆ ಒಂದು, ಹೊರಗೆ ಒಂದು. ನಾಲಿಗೆಯಲ್ಲಿ ಜೇನು, ಮನಸ್ಸಿನಲ್ಲಿ ಕತ್ತಿ.
ಇವರ ಮಾತು ಕೇಳಲು ಸಿಹಿಯಾಗಿರುತ್ತದೆ ಆದರೆ ಆ ಮಾತಿನಲ್ಲಿ ಸಮಾಜದ ನೋವಿಗೆ ಮುಲಾಮು ಇರುವುದಿಲ್ಲ. ಅದು ಕೇವಲ ತಮ್ಮನ್ನು ತಾವು ಉಳಿಸಿಕೊಳ್ಳುವ ಮುಖವಾಡ ಮಾತ್ರ.
ಇವರು ತಮ್ಮನ್ನು ತಾವು “ದೊಡ್ಡ ಸಾಹಿತಿ”, “ಶ್ರೇಷ್ಠ ಚಿಂತಕ”, “ನಾಡಿನ ಆಸ್ತಿ” ಎಂದು ಬೀಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ದೊಡ್ಡ ಸ್ಟೇಟಸ್, ಪತ್ರಿಕೆಯಲ್ಲಿ ಅರ್ಧ ಪುಟದ ಸಂದರ್ಶನ, ವೇದಿಕೆಯಲ್ಲಿ ಗಂಟೆಗಟ್ಟಲೆ ಉಪನ್ಯಾಸ. ಆದರೆ ಆ ಮಾತಿನ ಹಿಂದೆ ಯಾವ ಕಾಯಕವೂ ಇಲ್ಲ. ಒಂದು ಅನಾಥಾಶ್ರಮಕ್ಕೆ ಹೋಗಿ ಮಕ್ಕಳ ತಲೆಯ ಮೇಲೆ ಕೈ ಇಟ್ಟಿಲ್ಲ. ಒಂದು ಬಡ ಶಾಲೆಗೆ ಪುಸ್ತಕ ಕೊಟ್ಟಿಲ್ಲ. ರೈತ ಆತ್ಮಹತ್ಯೆ ಮಾಡಿಕೊಂಡಾಗ ಒಂದು ಸಾಲು ಬರೆದು ಕಣ್ಣೀರು ಸುರಿಸಿಲ್ಲ. ಪ್ರವಾಹ ಬಂದಾಗ ಒಂದು ರೂಪಾಯಿ ದೇಣಿಗೆ ಕೊಟ್ಟಿಲ್ಲ. ಆದರೂ “ನಾನು ಸಮಾಜಮುಖಿ ಸಾಹಿತಿ” ಎಂದು ಡಂಗೂರ ಸಾರುತ್ತಾರೆ. ಇದು ಕಪಟ ನಾಟಕವಲ್ಲದೆ ಮತ್ತೇನು? ಇದು ತೋರಿಕೆಗಾಗಿ ಮಾಡುವ ರಂಗ ಪ್ರವೇಶವಲ್ಲದೆ ಮತ್ತೇನು?
ಇವರಿಗೆ ನಾಡಿನ ಸಮಸ್ಯೆಗಳ ಬಗ್ಗೆ ಚಿಂತೆಯಿಲ್ಲ. ಗಡಿಭಾಗದ ಹಳ್ಳಿಯಲ್ಲಿ ಕುಡಿಯಲು ನೀರಿಲ್ಲ ಎಂದರೆ ಇವರಿಗೆ ತಲೆನೋವು ಇಲ್ಲ. ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ ಎಂದರೆ ಇವರು ಕವಿತೆ ಬರೆಯುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಇವರ ಕಲಂ ಮುರಿಯುವುದಿಲ್ಲ. ಯಾಕೆಂದರೆ ಈ ವಿಷಯಗಳಿಂದ ಪ್ರಶಸ್ತಿ ಬರುವುದಿಲ್ಲ. ಸರ್ಕಾರದ ಅನುದಾನ ಬರುವುದಿಲ್ಲ. ವೇದಿಕೆಯಲ್ಲಿ ಆಹ್ವಾನ ಬರುವುದಿಲ್ಲ. ಇವರ ಪ್ರಪಂಚ ತಾನು, ತನ್ನ ಮಕ್ಕಳು, ತನ್ನ ಸಂಸಾರಕ್ಕೆ ಸೀಮಿತ. ತನ್ನ ಮನೆಗೆ ಒಂದು ಫ್ಲಾಟ್, ಮಕ್ಕಳಿಗೆ ವಿದೇಶದಲ್ಲಿ ವಿದ್ಯೆ, ತನ್ನ ಹೆಸರಿಗೆ ಒಂದು ಪ್ರಶಸ್ತಿ ಸಿಕ್ಕರೆ ಸಾಕು. ಸಮಾಜ ಹೋದರೆ ಹೋಗಲಿ, ನಾಡು ಹಾಳಾದರೆ ಹಾಳಾಗಲಿ ಎಂಬ ಮನಸ್ಥಿತಿ. ಇಂತಹ ಸ್ವಾರ್ಥಿ ಮನೋಭಾವದವರನ್ನು ಸಾಹಿತಿ ಎಂದು ಕರೆಯುವುದು ಸಾಹಿತ್ಯಕ್ಕೇ ಮಾಡಿದ ಅವಮಾನ.
ಇನ್ನೂ ಅಪಾಯಕಾರಿ ವಿಷಯ ಏನೆಂದರೆ ಸರ್ಕಾರ ಮತ್ತು ಕೆಲವು ಸಂಘ ಸಂಸ್ಥೆಗಳು ಇಂತಹವರನ್ನೇ ತಲೆಗೆ ಏರಿಸುತ್ತಿವೆ. ನಿಜವಾದ ಕಾಯಕ ಮಾಡುವ, ನೋವಿನಲ್ಲಿ ಬರೆಯುವ, ಹೋರಾಡುವ ಸಾಹಿತಿಗಳನ್ನು ಮೂಲೆಯಲ್ಲಿ ಕೂರಿಸಿ, ಈ ಸಮಯ ಸಾಧಕರಿಗೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಜಾಗ ಕೊಡುತ್ತಿವೆ. ಅನುದಾನ, ಪ್ರಶಸ್ತಿ, ಸ್ಥಾನ-ಮಾನ ಎಲ್ಲವೂ ಇವರ ಕೈಯಲ್ಲೇ. ಪರಿಣಾಮವಾಗಿ ಯುವಕರು “ಸಾಹಿತ್ಯ ಎಂದರೆ ಇದೇನಾ” ಎಂದು ತಪ್ಪು ತಿಳಿದುಕೊಳ್ಳುತ್ತಾರೆ. ಸಾಹಿತ್ಯದ ನಂಬಿಕೆಯೇ ಹೋಗುತ್ತದೆ. ಜನರು “ಇವರೆಲ್ಲಾ ಡೋಂಗಿಗಳು” ಎಂದು ಕಲಂ ಹಿಡಿದ ಪ್ರತಿಯೊಬ್ಬರ ಮೇಲೂ ಅನುಮಾನ ಮಾಡುವ ಪರಿಸ್ಥಿತಿ ಬರುತ್ತದೆ.
ಸಮಾಜ ಈಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸಮಯ ಇದು. ಪ್ರತಿ ವೇದಿಕೆಯಲ್ಲಿ ಮಾತಾಡುವವನನ್ನು ಸಾಹಿತಿ ಎಂದು ಕರೆಯುವ ಮೊದಲು ಒಂದು ಸಲ ಪ್ರಶ್ನೆ ಮಾಡಿ. ನೀನು ಕೊನೆಯದಾಗಿ ಯಾವಾಗ ಸಂಘಟನೆ ಮಾಡಿದೆ? ಯಾವ ಹೋರಾಟದಲ್ಲಿ ಭಾಗವಹಿಸಿದೆ? ಎಷ್ಟು ಜನರಿಗೆ ನೇರವಾಗಿ ಸಹಾಯ ಮಾಡಿದೆ? ನಿನ್ನ ಬರಹದಿಂದ ಸಮಾಜದಲ್ಲಿ ಏನು ಬದಲಾವಣೆ ಆಯಿತು? ಎಂದು ಕೇಳಿ. ಉತ್ತರ ಬರದಿದ್ದರೆ ಅರ್ಥ ಮಾಡಿಕೊಳ್ಳಿ ಅವನು ಸಾಹಿತಿಯ ವೇಷದಲ್ಲಿರುವ ವ್ಯಾಪಾರಿ.
ಇದರ ಅರ್ಥ ನಾನು ಎಲ್ಲಾ ಸಾಹಿತಿಗಳನ್ನು ತಪ್ಪು ಎನ್ನುತ್ತಿಲ್ಲ. ಇಂದಿಗೂ ಶೇಕಡಾ ಹತ್ತು ಜನರಿದ್ದಾರೆ ಅವರು ನಿಜವಾದ ಸಾಹಿತಿಗಳು. ಅವರು ಪ್ರಶಸ್ತಿಗಾಗಿ ಬರೆಯುವುದಿಲ್ಲ. ಅವರು ರಾತ್ರಿ 12 ಗಂಟೆಗೂ ಬಡವರ ಬಗ್ಗೆ ಬರೆಯುತ್ತಾರೆ. ಅವರು ತಮ್ಮ ಸಂಬಳದಲ್ಲಿ ಒಂದು ಭಾಗವನ್ನು ಸಮಾಜಕ್ಕೆ ಕೊಡುತ್ತಾರೆ. ಅವರು ಅಧಿಕಾರಿಗಳ ತಪ್ಪನ್ನು ಪ್ರಶ್ನಿಸಿ ಬೆದರಿಕೆಗೆ ಹೆದರುವುದಿಲ್ಲ. ಅವರು ಹಳ್ಳಿ-ಹಳ್ಳಿಗೆ ಹೋಗಿ ವಾಸ್ತವ ವಿಚಾರಗಳ ಬಗ್ಗೆ ಹೇಳುತ್ತಾರೆ, ಮಕ್ಕಳಿಗೆ ಪುಸ್ತಕ ಕೊಡುತ್ತಾರೆ, ಸಮಾಜದ ಅಂಕುಡೊಂಕು ತಿದ್ದಲು ಹಗಲು ರಾತ್ರಿ ಶ್ರಮಿಸುತ್ತಾರೆ. ಅವರಿಗೆ ವೇದಿಕೆ ಸಿಗದೇ ಇರಬಹುದು. ಅವರ ಹೆಸರು ಪತ್ರಿಕೆಯಲ್ಲಿ ಬರದೇ ಇರಬಹುದು. ಆದರೆ ಅವರ ಕಲಂನಲ್ಲಿ ಶಕ್ತಿ ಇರುತ್ತದೆ. ಅವರ ಮಾತಿನಲ್ಲಿ ಪ್ರಾಮಾಣಿಕತೆ ಇರುತ್ತದೆ. ಅವರ ಬದುಕಿನಲ್ಲಿ ಕಾಯಕ ಇರುತ್ತದೆ. ಇಂತಹ ಸ್ವಾಭಿಮಾನಿ ಸಾಹಿತಿಗಳನ್ನೇ ಇಂದಿನ ಸಮಾಜ ಮತ್ತು ಸರ್ಕಾರಗಳು ಗುರುತಿಸಬೇಕು. ಅವರನ್ನು ಮುಖ್ಯವಾಹಿನಿಗೆ ತರಬೇಕು. ಅವರಿಗೆ ವೇದಿಕೆ ಕೊಡಬೇಕು. ಅವರಿಗೆ ಪ್ರಶಸ್ತಿ ಕೊಡಬೇಕು.
ಯಾಕೆಂದರೆ ಸಾಹಿತ್ಯ ಎಂದರೆ ಕೇವಲ ಪದಗಳ ಆಟವಲ್ಲ. ಅದು ಸಮಾಜದ ಆತ್ಮಸಾಕ್ಷಿ. ಸಾಹಿತಿ ಎಂದರೆ ಕೇವಲ ಪುಸ್ತಕ ಬರೆಯುವವನಲ್ಲ. ಅವನು ಜನರ ಜೊತೆ ನಿಲ್ಲುವವನು, ಜನರ ನೋವನ್ನು ತನ್ನ ನೋವನ್ನಾಗಿ ಮಾಡಿಕೊಳ್ಳುವವನು. “ಕಾಯಕವೇ ಕೈಲಾಸ” ಎಂದ ಬಸವಣ್ಣನವರು ಹೇಳಿದಂತೆ ಸಾಹಿತಿಯ ಕಾಯಕವೂ ಸೇವೆಯಾಗಬೇಕು. “ಬೇಡಿದಾಗ ವರ ಕೊಡುವ ಶಕ್ತಿ ಇಲ್ಲ, ನಿನ್ನ ಪರಿಶ್ರಮವೇ ಆಸರೆ” ಎಂಬ ಸತ್ಯವನ್ನು ಸಾಹಿತಿಯೂ ನಂಬಬೇಕು.
ಆದ್ದರಿಂದ ನನ್ನ ವಿನಂತಿ ಒಂದು ಮಾತು. ನಕಲಿ ನಾಣ್ಯಗಳನ್ನು ಗುರುತಿಸಿ. ಅವುಗಳ ಹೊಳಪಿಗೆ ಮೋಸ ಹೋಗಬೇಡಿ. ನಿಜವಾದ ಚಿನ್ನ ಮಂದವಾಗಿದ್ದರೂ ಅದರ ಬೆಲೆ ಇರುತ್ತದೆ. ಅದೇ ರೀತಿ ಸದ್ದು ಮಾಡದೇ ಕೆಲಸ ಮಾಡುವ, ಪ್ರಶಸ್ತಿ ಆಶಿಸದೇ ಬರೆಯುವ, ವೇದಿಕೆಗಾಗಿ ಹಾತೊರೆಯದೇ ಜನರ ಮಧ್ಯೆ ಇರುವ ಆ ಶೇಕಡಾ ಹತ್ತರಷ್ಟು ಸಾಹಿತಿಗಳನ್ನು ಹುಡುಕಿ, ಅವರಿಗೆ ಗೌರವ ಕೊಡಿ. ಅವರನ್ನು ಬೆಳೆಸಿ. ಆಗ ಮಾತ್ರ ಸಾಹಿತ್ಯ ಬದುಕುತ್ತದೆ. ಆಗ ಮಾತ್ರ ನಾಡು ಬದುಕುತ್ತದೆ. ಇಲ್ಲದಿದ್ದರೆ ಸಾಹಿತ್ಯ ಕ್ಷೇತ್ರ ಇಡೀ ಒಂದು ಕಪಟ ನಾಟಕದ ರಂಗವಾಗಿ ಉಳಿದು ಜನರ ನಂಬಿಕೆ ಸಂಪೂರ್ಣವಾಗಿ ಹೋಗುತ್ತದೆ.
ಕೊನೆಯಲ್ಲಿ ಒಂದು ಮಾತು. ಕಲಂ ದೇವರ ಆಯುಧ. ಆಯುಧದಿಂದ ಯಾರ ಹೊಟ್ಟೆ ತುಂಬಿಸುವಿರೋ, ಯಾರ ಗಾಯಕ್ಕೆ ಮುಲಾಮು ಹಚ್ಚುವಿರೋ ಅದರ ಮೇಲೆ ನಿಮ್ಮ ಸಾಹಿತ್ಯದ ಸಾರ್ಥಕತೆ ಇರುತ್ತದೆ. ಪ್ರಶಸ್ತಿಯ ಕಪಾಟಿನಲ್ಲಿ ಅಲ್ಲ.
ಲೇಖಕರು: ಸಂಗಮೇಶ ಎನ್ ಜವಾದಿ, ಬರಹಗಾರರು, ಪತ್ರಕರ್ತರು, ಬೀದರ್ ಜಿಲ್ಲೆ.




















