
ಬಳ್ಳಾರಿ / ಕಂಪ್ಲಿ: ಗಣಿನಾಡು ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ವರುಣನ ಕೃಪೆಯಾಗದೆ ತೀವ್ರ ಬರದ ಛಾಯೆ ಆವರಿಸಿದೆ. ರೈತರು ಬೆಳೆ ಕೈಸೇರದೆ ಆತಂಕದಲ್ಲಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ, ನಾಡಹಬ್ಬ ದಸರಾ ಮತ್ತು ಆಯುಧ ಪೂಜೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲು ಕಂಪ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ಸಜ್ಜಾಗಿದ್ದಾರೆ. ಸೋಮವಾರ ಕಂಪ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಸೇರಿದಂತೆ ನಾನಾ ಪೂಜಾ ಸಾಮಾಗ್ರಿಗಳ ಖರೀದಿಯ ಭರಾಟೆ ಜೋರಾಗಿ ಕಂಡು ಬಂತು.
ಮಾರುಕಟ್ಟೆಯತ್ತ ಹರಿದುಬಂದ ಜನಸಾಗರ
ದಸರಾ ಹಬ್ಬ ಬಂತೆಂದರೆ ಎಲ್ಲೆಡೆ ಸಡಗರ ಸಂಭ್ರಮ ಇದ್ದೇ ಇರುತ್ತದೆ. ಅದರಂತೆಯೇ ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಆಯುಧಪೂಜೆ ಮತ್ತು ವಿಜಯದಶಮಿ ಆಚರಣೆಗಾಗಿ ರೈತರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮುಂಜಾನೆಯಿಂದಲೇ ಕಂಪ್ಲಿ ಪಟ್ಟಣದತ್ತ ಮುಖ ಮಾಡಿದ್ದರು. ಹೂವು, ಹಣ್ಣು, ಕಾಯಿ, ಕುಂಬಳಕಾಯಿ, ಚೆಂಡುಹೂವು, ಬಾಳೆಕಂಬ ಸೇರಿದಂತೆ ಇನ್ನಿತರ ಪೂಜಾ ಸಾಮಾಗ್ರಿಗಳನ್ನು ಖರೀದಿಸಲು ಮಾರುಕಟ್ಟೆಯ ರಸ್ತೆ ಬದಿಯ ವ್ಯಾಪಾರಸ್ಥರ ಮುಂದೆ ಗ್ರಾಹಕರು ಮುಗಿಬಿದ್ದಿದ್ದರು.
ಜೇಬಿಗೆ ಕತ್ತರಿ ಹಾಕಿದ ಬೆಲೆ ಏರಿಕೆಯ ಬಿಸಿ :
ಈ ಬಾರಿ ಬರದ ಛಾಯೆ ಮೂಡಿದ್ದು, ರೈತರ ಬೆಳೆಗಳು ಕೈಸೇರುವ ತನಕ ಕಾಯುವಂತ ಭೀಕರ ಪರಿಸ್ಥಿತಿ ತಂದೊಡ್ಡಿದೆ. ಈ ಬರದ ನಡುವೆ ಹಬ್ಬ ಆಚರಣೆಗಾಗಿ ಸಕಲ ಸಿದ್ಧತೆಗಳು ನಡೆದಿವೆಯಾದರೂ, ಪೂಜಾ ಸಾಮಾಗ್ರಿಗಳ ಬೆಲೆ ಗಗನಕ್ಕೇರಿರುವುದು ಸಾರ್ವಜನಿಕರ ಜೇಬಿಗೆ ಭಾರಿ ಕತ್ತರಿ ಹಾಕಿದೆ. ಬರ ಒಂದು ಕಡೆಯಾದರೆ, ಮತ್ತೊಂದೆಡೆ ಹಬ್ಬದ ದಿನದ ಬೆಲೆ ಏರಿಕೆಯ ಬಿಸಿ ರೈತರ ಹಾಗೂ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ಆದಾಗ್ಯೂ, ಸಂಪ್ರದಾಯವನ್ನು ಮುಂದುವರಿಸಲು ಜನರು ಬೆಲೆಯನ್ನು ಲೆಕ್ಕಿಸದೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.
- ಸೇವಂತಿಗೆ ಹೂವು: ₹200 ರಿಂದ ₹250
- ಸುಗಂಧರಾಜ ಹೂವು: ₹250
- ಚೆಂಡುಹೂವು: ₹60 ರಿಂದ ₹80
- ಕುಂಬಳಕಾಯಿ (ಒಂದಕ್ಕೆ): ₹50 ರಿಂದ ₹60
ಕುಂಬಳಕಾಯಿ ಖರೀದಿಗೆ ಭಾರೀ ಡಿಮ್ಯಾಂಡ್
ಆಯುಧ ಪೂಜೆಯ ದಿನದಂದು ವಾಹನಗಳು, ಯಂತ್ರೋಪಕರಣಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ದೃಷ್ಟಿ ತೆಗೆಯಲು ಬಳಸುವ ಕುಂಬಳಕಾಯಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇತ್ತು. ಪಟ್ಟಣದ ಡಾ. ರಾಜ್‌ಕುಮಾರ್ ಮುಖ್ಯರಸ್ತೆಯ ನಿರ್ಮಲ ಮೆಡಿಕಲ್ ಬಳಿಯ ಮುಖ್ಯ ರಸ್ತೆ ಬದಿಯಲ್ಲಿ ಗ್ರಾಹಕರು ಸಾಲುಗಟ್ಟಿ ನಿಂತು ಕುಂಬಳಕಾಯಿ ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು ಒಟ್ಟಾರೆಯಾಗಿ, ಗ್ರಾಹಕರಿಗೆ ಆರ್ಥಿಕ ಹೊರೆಯಾದರೂ ಸಹ ಕಂಪ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಅತ್ಯಂತ ಬಿರುಸಿನಿಂದ ಸಾಗಿದೆ.
“ಬರಗಾಲದಿಂದ ಕೈಯಲ್ಲಿ ಹಣವಿಲ್ಲ”
“ಈ ಬಾರಿ ಮಳೆ ಇಲ್ಲದೆ ಬೆಳೆಗಳೆಲ್ಲ ಒಣಗುತ್ತಿವೆ. ಕೈಯಲ್ಲಿ ಸರಿಯಾಗಿ ಹಣವಿಲ್ಲ. ಆದರೂ ವರ್ಷಕ್ಕೊಮ್ಮೆ ಬರುವ ನಾಡಹಬ್ಬವನ್ನು ಬಿಡಲು ಹೇಗೆ ಸಾಧ್ಯ? ಸಾಲಸೋಲ ಮಾಡಿಯಾದರೂ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದೇವೆ. ಆದರೆ ಬೆಲೆಗಳು ಮಾತ್ರ ಸಾಮಾನ್ಯ ಜನರಿಗೆ ತೀರಾ ಹೊರೆಯಾಗಿವೆ.”
— ಬಸವರಾಜ, ಸ್ಥಳೀಯ ರೈತ, ಕಂಪ್ಲಿ ತಾಲೂಕು.
“ಹಬ್ಬದ ನೆಪದಲ್ಲಿ ದುಬಾರಿ ದರ”
“ಕಳೆದ ವಾರಕ್ಕೆ ಹೋಲಿಸಿದರೆ ಹೂವು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ. ಆಯುಧ ಪೂಜೆಗೆ ಕುಂಬಳಕಾಯಿ ಕಡ್ಡಾಯವಾಗಿ ಬೇಕೇ ಬೇಕು, ಹಾಗಾಗಿ ₹60 ಕೊಟ್ಟಾದರೂ ಕೊಳ್ಳಲೇಬೇಕಾದ ಪರಿಸ್ಥಿತಿ ಇದೆ ಹಬ್ಬದ ಸಡಗರವಿದ್ದರೂ, ಬೆಲೆ ಏರಿಕೆ ಜೇಬಿಗೆ ಭಾರಿ ಕತ್ತರಿ ಹಾಕುತ್ತಿದೆ.”
— ರತ್ನಮ್ಮ, ಗ್ರಾಹಕರು, ಕಂಪ್ಲಿ ಪಟ್ಟಣ.
ವರದಿ : ಜಿಲಾನಸಾಬ್ ಬಡಿಗೇರ್




















