ಬಳ್ಳಾರಿ / ಕಂಪ್ಲಿ : ಲೋಕಕಲ್ಯಾಣ, ನಾಡಿನ ಸುಭಿಕ್ಷೆ ಹಾಗೂ ಸಮೃದ್ಧ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕು ಅಧ್ಯಕ್ಷ ವಿ. ವಿರೇಶ ಅವರು ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಸೋಮವಾರ ದೀರ್ಘದಂಡ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ವಿಶಿಷ್ಟವಾಗಿ ಹರಕೆ ಸಲ್ಲಿಸಿದರು.
ಗ್ರಾಮದ ಬನ್ನಿಮಹಾಂಕಾಳಿ ಕಟ್ಟೆಯಿಂದ ಪ್ರಾರಂಭಿಸಿ, ಪ್ರಮುಖ ರಸ್ತೆಗಳ ಮೂಲಕ ನೂರಾರು ರೈತರ ಸಮ್ಮುಖದಲ್ಲಿ ಜಡಿತಾತ ದೇವಸ್ಥಾನದ ಸನ್ನಿಧಾನದವರೆಗೆ ಅವರು ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ದೇವರಲ್ಲಿ ಮೊರೆ ಇಟ್ಟರು.
ಡಿಸೆಂಬರ್ 20ರವರೆಗೆ ನೀರು ಹರಿಸಿ – ವಿ. ವಿರೇಶ ಆಗ್ರಹ :
ನಂತರ ಮಾತನಾಡಿದ ರೈತ ಮುಖಂಡ ವಿ. ವಿರೇಶ ಅವರು, ಸರ್ಕಾರದ ನೀರಾವರಿ ನೀತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಅಕ್ಟೋಬರ್ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ (ICC) ಸಭೆಯಲ್ಲಿ ಎಲ್‌ಎಲ್‌ಸಿ (LLC) ಕೆಳಭಾಗದ ರೈತರಿಗೆ ಮುಂಗಾರು ಬೆಳೆ ಕೈಸೇರುವವರೆಗೂ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು. ಈಗಾಗಲೇ ಸಮರ್ಪಕ ನೀರಿಲ್ಲದೆ ಕೆಳಭಾಗದ ರೈತರು ಸಂಕಷ್ಟದಲ್ಲಿದ್ದಾರೆ” ಎಂದರು.
ಜೊತೆಗೆ, “ರೈತ ದೇಶದ ಬೆನ್ನೆಲುಬು ಎಂಬುದು ಕೇವಲ ಗಾದೆ ಮಾತಿಗೆ ಸೀಮಿತವಾಗಿದೆ. ಅಧಿಕಾರಿಗಳು ಮತ್ತು ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಕುಡಿಯುವ ನೀರಿನ ನೆಪದಲ್ಲಿ ಕಾರ್ಖಾನೆಗಳಿಗೆ ನೀರು ಹರಿಸುವ ಹುನ್ನಾರ ನಡೆಯುತ್ತಿದೆ. ಕೂಡಲೇ ಸರ್ಕಾರ ಮತ್ತು ನೀರಾವರಿ ಅಧಿಕಾರಿಗಳು ಎಚ್ಚೆತ್ತುಕೊಂಡು ಡಿಸೆಂಬರ್ 20ರವರೆಗೆ ಎಲ್‌ಎಲ್ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಸರ್ಕಾರಕ್ಕೆ ಚಳಿ ಬಿಡಿಸುವ ತಾಕತ್ತು ರೈತರಿಗಿದೆ :
ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, “ಸರ್ಕಾರ ಮತ್ತು ಅಧಿಕಾರಿಗಳು ರೈತರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ರೈತರು ಮನಸ್ಸು ಮಾಡಿದರೆ ಸರ್ಕಾರಕ್ಕೆ ಚಳಿ ಬಿಡಿಸುವ ತಾಕತ್ತಿದೆ. ಆದ್ದರಿಂದ ತಕ್ಷಣವೇ ಮುಂಗಾರು ಬೆಳೆಗೆ ಸಮರ್ಪಕ ನೀರು ಪೂರೈಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕಾಸಿಂಸಾಬ್, ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಉಪಾಧ್ಯಕ್ಷ ಕಾಗಿ ಈರಣ್ಣ, ಎಮ್ಮಿಗನೂರು ಗ್ರಾಮ ಘಟಕದ ಅಧ್ಯಕ್ಷ ಸಣ್ಣ ಜಡೆಪ್ಪ, ರೈತ ಮುಖಂಡರಾದ ಎನ್. ಸೂಗಪ್ಪಧಣಿ, ಸದಾಶಿವಪ್ಪಧಣಿ, ಅಡಿವೆಯ್ಯಸ್ವಾಮಿ, ಕೆ. ತಿಪ್ಪಯ್ಯ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















