ಬುದಗುಂಪಾ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಒಕ್ಕೂಟದ ಕಚೇರಿ ಉದ್ಘಾಟನೆ
ಕಾರಟಗಿ : ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವಸಹಾಯ ಸಂಘದ ಸಂಜೀವಿನಿ ಒಕ್ಕೂಟದ ಕಚೇರಿ ಉದ್ಘಾಟನಾ ಸಮಾರಂಭವು ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಕರೆಸಿದ್ದನಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕಿ ಅನ್ನಪೂರ್ಣ ಅವರು, ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದಲ್ಲಿ ಸಂಜೀವಿನಿ ಒಕ್ಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ಅಧ್ಯಕ್ಷರು ಪ್ರತಿಯೊಬ್ಬ ಸದಸ್ಯರು ಹೈನುಗಾರಿಕೆ ಮಾಡಿ ಪ್ರತಿಯೊಬ್ಬರ ಮನೆಯಲ್ಲಿ ಜವಾರಿ ಹಸುವನ್ನು ಸಾಗಾಣಿಕೆ ಮಾಡಬೇಕು ಹಾಗೂ ನೈಸರ್ಗಿಕ ಕೃಷಿಯನ್ನು ಮಾಡಬೇಕು, ಮಹಿಳೆಯರಿಗೆ ವೃತ್ತಿ ಕೌಶಲ್ಯ ತರಬೇತಿ, ಮಕ್ಕಳ ಶಿಕ್ಷಣ ಹಾಗೂ ಮಹಿಳಾ ಸಂಘಟನೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು.
ಮಹಿಳೆಯರು ಒಕ್ಕೂಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು. ಆರ್ಥಿಕ ಬಲವರ್ಧನೆಯ ಜತೆಗೆ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಲು ಒಕ್ಕೂಟಗಳು ಸಹಕಾರಿಯಾಗುತ್ತವೆ. ಮಹಿಳಾ ಸದಸ್ಯರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಂಜೀವಿನಿ ಒಕ್ಕೂಟಗಳು ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಒಕ್ಕೂಟದ ಕಾರ್ಯ ವ್ಯಾಪ್ತಿಯನ್ನು ಕೇವಲ ಸಾಲ ಪಡೆಯುವುದಕ್ಕೆ ಸೀಮಿತಗೊಳಿಸದೆ, ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹಿಳೆಯರು ಸಹಕರಿಸಬೇಕು. ಸಂಜೀವಿನಿ ಒಕ್ಕೂಟಗಳ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಕಸ ವಿಲೇವಾರಿ ಮತ್ತು ನೈರ್ಮಲ್ಯ ನಿರ್ವಹಣೆಯನ್ನು ಕೀಳರಿಮೆಯಿಂದ ನೋಡಬಾರದು. ಭವಿಷ್ಯದಲ್ಲಿ ಕಸ ವಿಲೇವಾರಿ ಕ್ಷೇತ್ರವು ಉದ್ಯಮವಾಗಿ ಬೆಳೆಯುವ ಸಾಧ್ಯತೆಯಿದ್ದು, ಮಹಿಳೆಯರು ಇಂತಹ ಚಟುವಟಿಕೆಗಳಲ್ಲಿಯೂ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎನ್‌ಆರ್‌ಎಂಎಲ್ ಸದಸ್ಯರು ಹಾಗೂ ಪುಸ್ತಕ ಬರಹಗಾರರಾದ ವೀರಮ್ಮ ಮಾತನಾಡಿ, ಸಂಜೀವಿನಿ ಒಕ್ಕೂಟದ ಯೋಜನೆಗಳ ಮೂಲಕ ಮಹಿಳೆಯರು ಜೀವನೋಪಾಯ, ಆರೋಗ್ಯ, ನೈರ್ಮಲ್ಯ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ಮೂಲಸೌಕರ್ಯಗಳ ಬೇಡಿಕೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.
ಒಕ್ಕೂಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಹಿಳೆಯರಲ್ಲಿ ನಾಯಕತ್ವದ ಗುಣಗಳು ಬೆಳೆಯುತ್ತವೆ. ಪರಸ್ಪರ ಸಹಕಾರ ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ಉತ್ತಮ ತಂಡವನ್ನು ರೂಪಿಸಿಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ಒಕ್ಕೂಟದ ಪದಾಧಿಕಾರಿಗಳು, ಉಪಸಮಿತಿ ಸದಸ್ಯರು, ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.




















