ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು,
ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು
ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ,
ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ
ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ ಪ್ರೋತ್ಸಾಹ,
ಸಂವಿಧಾನವಿತ್ತ ಶಿಕ್ಷಣದ ಅವಕಾಶ,
ಮೂಡಿಸಿತು ಸ್ಮೃತಿಯೊಳಗೆ ವಿದ್ಯೆ ಪಡೆಯುವ ಉತ್ಸಾಹ…
ಪಂಜರದ ನೀಲಾಂಗನೆಗೆ ದೊರೆಯಿತು ಜ್ಞಾನ,
ಗಗನ ಯಾತ್ರಿ ಯಾಗಲು ತಿಳಿಸಿತು ನಮ್ಮ ವಿಜ್ಞಾನ….
ಬಾಳೆಗೊನೆ ಬಿರಿಯದಂತೆ ನಿಭಾಯಿಸುವಳು
ಜನನಿ ಸಂಸಾರ,
ಶಿಕ್ಷಕಿಯಾಗಿ ಕಲಿಸುವಳು ಜಗದ್ರಕ್ಷಕನಾಗೋ ಕಂದನಿಗೆ ಸುಸಂಸ್ಕಾರ…..
ಹೆಣ್ಣಿರದ ಧರೆಯು ಶೂನ್ಯವಿದ್ದಂತೆ,
ಮನುಕುಲವ ಸೃಷ್ಟಿಸಿ ಮೆರೆದಿಹಳು ಗಾಂಧಾರೆಯಂತೆ……
ತನ್ನ ಕಾರ್ಯಕ್ಷೇತ್ರದ ಯಶಸ್ಸಿಗೆ ತನ್ಮಯವಾಗುವಳೂ ಹೆಲನ್ ಕೆಲ್ಲರಂತೆ,
ದಕ್ಷ ಸೇವೆಯಲ್ಲಿ ಹೊಳೆಯುತಿಹಳು ಬೆಳದಿಂಗಳಂತೆ…….
ವಿರಾಮವಿರದ ರಮಣೀಯರ ಸಾಧನೆಯ ಸ್ಮರಿಸುವ ಕ್ಷಣ,
ನಮಗೆ ವಿಶ್ವ ಸಂಸ್ಥೆ ಕೊಟ್ಟ ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನ.
ಶ್ರೇಷ್ಠ ಮಹಿಳೆಯರು ಸ್ಫೂರ್ತಿಯಾಗಲಿ,
ಅರಳುವ ಕುಸುಮಗಳಿಗಿಂದು,
ಹರಸುವೆ ನಾ ತರುಣಿಯರ ಪರಿಶ್ರಮದ ಸಾಹಸಕೆ ಜಯವಾಗಲೆಂದು………
-ನಾಗಮಣಿ ಕನಕ