ಪತ್ರ ನಿಮ್ಮದು ಒತ್ತಾಯದ ಸಹಿ ನನ್ನದು
ಬರೆದಿದ್ದಲ್ಲ ಬರೆಸಿದ್ದು ನನಗೂ ಸಾವುಂಟು
ಅನಾದಿ ಕಾಲ ಅಂಗೈಯಲ್ಲಿ ಸಾಕಿದೆ
ಬೇಕಾದಷ್ಟು, ಸಾಕು ಎನ್ನುವಷ್ಟು ನೀಡಿದೆ
ಮಿಕ್ಕಿ ಕಕ್ಕುವಷ್ಟು ಬಾಚಿ ಕೊಟ್ಟೆ
ಪಾಪ…ನಿಮ್ಮಿಂದ ಸಿಕ್ಕಿದ್ದು ದುಷ್ಟ ದುರುಳ ದ್ರೋಹಿ ಪಟ್ಟ.
ಅನನ್ಯ ಅಗಾಧ ಸಂಪತ್ತು ನನ್ನೊಳಗಿತ್ತು
ಬಣ್ಣದ ಲೋಕದಲ್ಲಿ ಇಲ್ಲದ್ದು ನನ್ನಲ್ಲಿತ್ತು
ಕಪಾಟು ಅಲ್ಮೆರಾ ರಹಸ್ಯ ಕೀಲಿಯ ಅಬಂಧವಿತ್ತು
ವಂಶಗಳೇ ಭಕ್ಷಿಸಿದರೂ ಕೊರತೆಯಿಲ್ಲದಷ್ಟು
ಬೆಚ್ಚಗಿನ ಗೂಡಲ್ಲಿ ಸುಖಿಸಿ ಬದುಕುವಷ್ಟು
ಕೈಯೊಡ್ದುವ ಮುನ್ನ ಪಾದಗಳಿಗೆ ಸುರಿದೆ.
ಬಂದಿದ್ದು ತಂದಿದ್ದು ಖಾಲಿ ಬುರುಡೆ
ಪುಂಗಿ ಶಾಸ್ತ್ರಕ್ಕೆ ನೊಬೆಲ್ ಕೊಟ್ಟರು ಸಾಲದು.
ಭೂಪಟದ ಚುಕ್ಕಿಗೆ ನನ್ನದೇ ಉಲ್ಲೇಖ
ಕೆರೆ ಕಟ್ಟೆ ಹಳ್ಳ ಕೊಳ್ಳಕ್ಕೆ ನನ್ನದೇ ಜಾಗ
ಕಾಡು ಮೇಡು ಬೆಟ್ಟ ಗುಡ್ಡಕ್ಕೂ ನಾನೇ ಮಾಲೀಕ
ಧರೆಗೆ ಸಿರಿ ಪ್ರಕೃತಿಗೆ ಚೆಲುವು ನನ್ನ ಭಿಕ್ಷೆ
ಪುಕ್ಕಟೆಯ ಮದ ನೆತ್ತಿಗೇರಿತು
ನಾನೆಂಬ ಅಹಂ ಮೆದುಳು ನೆಕ್ಕಿತು
ಸೊಕ್ಕು ದುರಹಂಕಾರ ನಿಲ್ಲದಾಯಿತು
ರುಚಿ ನೆಕ್ಕುವ ನಾಲಿಗೆ ಮಿತ್ರವಾಯಿತು
ನಾನು ನನ್ನದೆನ್ನುವ ಗರ್ವ ದೇಹಕ್ಕರಡಿತು
ಸುಡುಗಾಡಿನ ಜ್ವಾಲೆಯಂತೆ ಎಲ್ಲೆಡೆ ಹಬ್ಬಿತು
ಮಿಕ್ಕಿ ಮೀರಿ ಬೆಳೆಯಿತು ವಿಶ್ವ ನನ್ನದೆನ್ನುವ ಭಾವ
ತಿರುಕನ ಹಂಗಿನಾರ್ಭಟಕ್ಕೆ ಪೃಥ್ವಿಯ ಮುನಿಸು
ಅತೃಪ್ತಿ ಆತ್ಮಗಳಿಗೆ ನನ್ನ ಸಾವೇ ಪರಿಹಾರ
ಸಾವಿನ ಕಣ್ಣೀರಿಗೆ ಜಲ ಪ್ರಳಯದ ದಂಗೆ
ಅಲ್ಲಲ್ಲಿ ಭೂ ಕುಸಿತ ಭೂಕಂಪ ಸಾವಿನ ಕುರುಹುಗಳು
ರಕ್ತಗಳ ರೋಧನೆ ತೇಲುವ ಜೀವ ನನ್ನ ಕೊಡುಗೆ
ಪಾಪಿಗೆ ಸೇವಕನಾಗಲಾರೆ ನಾನು ಸಾಯುತ್ತೇನೆ
ಇಂದೇ ಬರೆಯುವೆ ಡೆತ್ ನೋಟ್…
-ಚೌಡ್ಲಾಪುರ ಸೂರಿ