ಬೆಂಗಳೂರು : ಆನಂದ ರಾವ್ ವೃತ್ತದ ಬಳಿಯಿರುವ ಕ.ವಿ.ಪ್ರ.ನಿ.ನಿ, ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ.ಬಿ.ಎಂ. ವಾಣಿಶ್ರೀ ಅವರು ಹರಿದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳಾ ಹರಿದಾಸರ ಪಾತ್ರ ಕುರಿತು ಮಾತನಾಡುತ್ತಾ
ದಾಸಸಾಹಿತ್ಯಕ್ಕೆ ಮಹಿಳಾ ಹರಿದಾಸರ ಕೊಡುಗೆ ಅಪಾರ; ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಹರಿದಾಸರಿದ್ದರೂ ಗುರುತಿಸಲ್ಪಟ್ಟವರು ಕೆಲವೇ ಕೆಲವು ಜನ ಎಂದು ಮಹಾಭಾರತ, ರಾಮಾಯಣಗಳಲ್ಲಿ ಬರುವ ಸ್ತ್ರೀ ಪಾತ್ರಗಳನ್ನು, ಅವರು ಅನುಭವಿಸಿದ ಕಷ್ಟ ಸುಖವನ್ನು ವಿವರಿಸಿ, ಅವನ್ನೆಲ್ಲಾ ಕೃಷ್ಣಾರ್ಪಣವೆನ್ನುತ್ತಾ ಬದುಕಿದವರು ಮಹಿಳಾ ಹರಿದಾಸರು ಎಂದು ಹೇಳಿದರು.
ಮುಂದುವರಿದು, ಮಹಿಳಾ ಹರಿದಾಸರಲ್ಲಿ ಅಂಬಾಬಾಯಿಯವರು ಕುಸುಮ ಷಟ್ಪದಿಯಲ್ಲಿ ರಚಿಸಿರುವ ರಾಮಾಯಣ ಮಹಾಕಾವ್ಯವನ್ನು ಓದಿದರೆ ಎಲ್ಲರೂ ಬೆರಗಾಗುತ್ತಾರೆ, ಯಾವದೇ ಶಿಕ್ಷಣ ಪಡೆಯದೆ, ಪ್ರಬುದ್ಧ ಛಂದಸ್ಸನ್ನು ಬಳಸಿ
ಇಂತಹ ಕೃತಿ ರಚಿಸಿರುವದು ಮಹಿಳಾ ಹರಿದಾಸರ ಔನ್ನತ್ಯದ ಸಂಕೇತ ಎಂದು ತುಂಬಾ ಭೋದಕ ಉಪನ್ಯಾಸ ನೀಡಿದರು.
ನಂತರ ನಡೆದ ಮಹಿಳಾ ಹರಿದಾಸರ ಕೃತಿಗಳ ಆತ್ಮಾವಲೋಕನ ಗಾಯನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಕು.ಇಂಚರ ಹೊಯ್ಸಳ ಅವರು ತಮ್ಮ ಇ0ಪಾದ ಕಂಠಸಿರಿಯಿಂದ ಹಾಡಿದರೆ, ಪೂರ್ಣಿಮಾ ವೇಣುಗೋಪಾಲ ಅವರು ಕೃತಿಗಳ ಹಿನ್ನೆಲೆ ಹಾಗೂ ಅರ್ಥ ವಿವರಿಸಿದರು. ಅವರು ವಾಖ್ಯಾನ ನೀಡುತ್ತಾ ಆತ್ಮವಲೋಕನ ಮಾನಸಿಕ ಪ್ರೌಢತೆಯ ಕುರುಹು ; ಮಹಿಳಾ ಹರಿದಾಸರ ಯೋಚನಾಲಹರಿ ಅತ್ಯಂತ ಉತ್ತಮವಾದದ್ದು ; ಆತ್ಮವಲೋಕನ ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿದೆ; ಸಂಗೀತ -ಸಾಹಿತ್ಯಗಳು ಭಗವಂತನಿಗೆ ಹತ್ತಿರವಾಗುವ ಸಾಧನಗಳು; ನಿನ್ನೆಯ ಬದುಕಿನ ಆತ್ಮವಲೋಕನ ನಾಳೆಯ ಬದುಕನ್ನು ಉತ್ತಮಪಡಿಸಬಲ್ಲದು ಎಂದು
ಮನೋಜ್ಞವಾದ ವಿವರಣೆ ನೀಡಿ ಸಭಿಕರು ತಲೆದೂಗುವಂತೆ ಮಾಡಿದರು. ಭೂಮಿ ಬುಕ್ಸ್ ಪ್ರಕಾಶಕಿ ವಿಶಾಲಾಕ್ಷಿ ಶರ್ಮ ಅವರ ಪರಿಸರ ಪಾಠ ಕಣ್ತೆರೆಸುವಂತಿತ್ತು.
ಅಧ್ಯಕ್ಷತೆ ವಹಿಸಿದ ನಿವೃತ್ತ ಆರ್ಥಿಕ ಸಲಹೆಗಾರ ಎಂ ಎಸ್ ವೆಂಕಟೇಶ್ ಅವರು ಹರಿದಾಸರ ಕೊಡುಗೆಗಳನ್ನು ಸ್ಮರಿಸಿ ಕೃತಿಯೊಂದನ್ನು ಹಾಡಿ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಜನಪ್ರಿಯವಾಗಲಿ ಎಂದು ಹಾರೈಸಿದರು.
ಡಾ. ಬಿ ಎಂ ವಾಣಿಶ್ರೀ ಹಾಗೂ ಎಮ್ ಎಸ್ ವೆಂಕಟೇಶ್ ಅವರನ್ನು ಪೂರ್ಣಿಮಾ ವೇಣುಗೋಪಾಲ್ ಗೌರವಿಸಿದರು. ಉತ್ತಮ ಗಾಯನ ವ್ಯಾಖ್ಯಾನ ಕಾರ್ಯಕ್ರಮ ನೀಡಿದ ಪೂರ್ಣಿಮಾ ವೇಣುಗೋಪಾಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಸುನಂದ. ಕವಿಗಳಾದ ಕೊಪ್ಪರಮ್ ಅನ್ನಪೂರ್ಣ, ಜಿ ವಿ ಹೆಗಡೆ, ಪ್ರಭಾಕರ್ ಗಂಗೊಳ್ಳಿ ಸಂಘದ ನಿವೃತ್ತ ಅಧಿಕಾರಿ ಎಸ್ ಜೆ ಕೃಷ್ಣಮೂರ್ತಿ, ಸದಸ್ಯರುಗಳಾದ ಈರಪ್ಪ, ಭಾಗ್ಯ ಏ, ಪದ್ಮಾವತಿ ಎಚ್ಎಂ, ಹುಚ್ಚರಾಯಪ್ಪ ಹಾಗೂ ಗೀತಾ ಸಭಾಹಿತ, ಮಧು ಕಿರಣ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾದಂಬರಿಗಾರ್ತಿ ಶೋಭಾ ಹೆಗಡೆಯವರ ಅಚ್ಚುಕಟ್ಟಾದ ಕಾರ್ಯಕ್ರಮ ನಿರ್ವಹಣೆ ಮಾದರಿಯದಾಗಿತ್ತು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ