ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರುಕುಂಬಿ ಅಸ್ಪೃಶ್ಯತೆ ಪ್ರಕರಣದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಸಿ ಅವರು 101 ಅಪರಾಧಿಗಳಿಗೂ ಶಿಕ್ಷೆ ವಿಧಿಸಿ ಗುರುವಾರ(ಅ24) ತೀರ್ಪು ನೀಡಿದ್ದು, ಇವರಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ,3 ಅಪರಾಧಿಗಳಿಗೆ 5 ವರ್ಷಗಳ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ನ್ಯಾಯಾಧೀಶರ ಈ ತೀರ್ಪು ದೌರ್ಜನ್ಯಕ್ಕೆ ಒಳಗಾಗಿದ್ದ ಪರಿಶಿಷ್ಟರಿಗೆ (ದಲಿತರಿಗೆ) ನ್ಯಾಯ ದೊರೆತಂತಾಗಿದೆಯಲ್ಲದೇ ಈ ಪ್ರಕರಣ ದೇಶದ ಗಮನ ಸೆಳೆದಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ2014 ರಲ್ಲಿ ಹೋಟೆಲ್ ಹಾಗೂ ಕ್ಷೌರದಂಗಡಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸವರ್ಣೀಯರು ದಲಿತರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಕುರಿತು ಪ್ರಗತಿಪರ ಸಂಘಟನೆಗಳು ಬಹು ದೊಡ್ಡ ಹೋರಾಟ ನಡೆಸಿ ನೊಂದವರಿಗೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದ್ದರು.ಈ ಪ್ರಕರಣ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತಲ್ಲದೇ ನೊಂದವರಿಗೆ ನ್ಯಾಯ ಕೊಡಬೇಕು ಎಂದೆನ್ನುವ ಒತ್ತಾಯವೂ ಸರ್ಕಾರದ ಮಟ್ಟದಲ್ಲಿ ಕೇಳಿ ಬಂದಿತ್ತು.ಗಂಗಾವತಿ ನ್ಯಾಯಾಲಯದಿಂದ ಜಿಲ್ಲಾ ನ್ಯಾಯಾಲಯದ ವರೆಗೂ ಪ್ರಕರಣದ ವಿಚಾರಣೆ ಸುದೀರ್ಘವಾಗಿ ನಡೆಯಿತು. ಆರಂಭದಲ್ಲಿ ಈ ಪ್ರಕರಣದಲ್ಲಿ ಗಂಗಾವತಿ ಪೊಲೀಸರು 117 ಜನರ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಿ(ಚಾರ್ಜ್ಶೀಟ್) ಸಲ್ಲಿಸಿದ್ದರು.
ಕೋರ್ಟ್ನಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಕೋರ್ಟ್ನಲ್ಲಿ101 ಜನರ ಮೇಲೆ ಪೂರಕ ದಾಖಲೆಗಳು ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಚಂದ್ರಶೇಖರ ಅವರು 101 ಆರೋಪಿಗಳು ಅಪರಾಧಿಗಳು ಎಂದು ಕಳೆದ ಕೆಲವು ದಿನದ ಹಿಂದಷ್ಟೇ ತೀರ್ಪು ಪ್ರಕಟಿಸಿದ್ದರು. ಆದರೆ ಈ ಅಪರಾಧಿಗಳಿಗೆ ಆಗ ಏಷ್ಟು ಪ್ರಮಾಣದ ಶಿಕ್ಷೆ ಎಂದು ಪ್ರಕಟಿಸಿರಲಿಲ್ಲ. ಗುರುವಾರಕ್ಕೆ ಶಿಕ್ಷೆ ಪ್ರಮಾಣದ ತೀರ್ಪು ಕಾಯ್ದಿರಿಸಿದ್ದರು. ನ್ಯಾಯಾಧೀಶರು 101 ಜನರು ದೋಷಿಗಳು ಎಂದು ತೀರ್ಪು ನೀಡಿದ ಬೆನ್ನಲ್ಲೆ ಗಂಗಾವತಿ ಪೊಲೀಸರು 101 ಅಪರಾಧಿಗಳನ್ನು ಬಂಧಿಸಿ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
-ಕರುನಾಡ ಕಂದ