ಅಪ್ಪ ಹೇಳಿಕೊಟ್ಟ ಸಂಸ್ಕಾರ
ಅಮ್ಮ ತೋರಿಸಿದ ಮಮಕಾರ
ಗುರು ಬೋಧಿಸಿದ ವಿದ್ಯಾಸಾರ
ಜೀವನ ಕಲಿಸಿದ ಅನುಭವ ಸಾರ ನಾನೇಕೆ ನಡುಗಲಿ ಬದುಕಿನ ಆಗು ಹೋಗುಗಳಿಗೆ,
ನೊಂದಾಗ ಸಂತೈಸುವ ಹೆತ್ತವರು ಅಂಜಿದಾಗ ಬೆನ್ನು ತಟ್ಟುವ ಸಹೋದರರು ಎಡವಿದಾಗ ಕೈಹಿಡಿದ ಸ್ನೇಹಿತರು ಸಂಸಾರದ ಗುಟ್ಟನ್ನು ಹೇಳಿದ ಹಿರಿಯರು ನಾನೇಕೆ ಅಳುಕಲಿ ಪರರ ನಿಂದನೆಗೆ
ಸಜ್ಜನ ಸಂಪನ್ನರ ಸಂಘ ಮಾಡಬೇಕೆಂದವರು ನನ್ನ ಹೆತ್ತವರು ಮಾಡುವ ಕಾಯಕದಲ್ಲಿ ಭಕ್ತಿ ಇರಬೇಕು ಎಂದವರು ನನ್ನ ಗುರುಗಳು ನಾನೇಕೆ ಸಂಸ್ಕಾರದ ಮಾರ್ಗ ಬಿಡಲಿ ಬದುಕಿಗೆ
ಸದ್ಗುಣ ಸಂಪನ್ನರ ಮಾತು ಆಲಿಸುವೆ ದುರ್ಜನ ಸಹವಾಸ ನಾನೇಕೆ ಮಾಡಲಿ ಕಾಯಕದ ಮೇಲೆ ಭಕ್ತಿ ನನ್ನೊಳಗಿರಲು ನಾನೇಕೆ ಉಂಡ ಮನೆಗೆ ದ್ರೋಹ ಬಗೆಯಲಿ
ಕೊಡುವಷ್ಟು ಇಲ್ಲವಾದರೂ ಹಂಚುವ ಮನಸ್ಥಿತಿ ಇದೆ ಕಿತ್ತು ತಿನ್ನುವ ಬಡತನವಾದರೂ ಸ್ವಾಭಿಮಾನದ ಛಲವಿದೆ ಹೆಚ್ಚು ತಿಳಿದಿಲ್ಲವಾದರೂ ತಕ್ಕಮಟ್ಟಿನ ಜ್ಞಾನವಿದೆ ನಾನೇಕೆ ಅಜ್ಞಾನಿಗಳ ದಂಡು ಕಟ್ಟಲಿ ಆತ್ಮ ಶುದ್ದಿ ಕಾರ್ಯ ಪ್ರಯತ್ನ ಮಾಡುತ್ತಿರಲು.
ರಚನೆ ಅನುರಾಧ ಡಿ ಸನ್ನಿ ,ಸಾ. ಹೂಲಗೇರಿ
