ಅಂತರ್ಜಲದಿಂದ ಹಗೆವುಗಳಲ್ಲಿ ಸಂಗ್ರಹ ಮಾಡಿದ್ದ ಜೋಳ ನಾಶ ಪರಿಹಾರಕ್ಕೆ ರೈತ ಸಂಘ ಆಗ್ರಹ
ಗದಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ರೈತರು ಬೆಳೆದ ಬೆಳೆಗಳು ಮಳೆ ನೀರಿಗೆ ಹಾನಿಗೊಳಲಾಗುತ್ತಿವೆ. ಇಡೀ ರಾಜ್ಯದ ಜನರು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದರೆ ಇದ್ದ ಬೆಳೆಯನ್ನು ಕಳೆದುಕೊಂಡ ರೈತರು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗೆ ಜಮೀನುಗಳಲ್ಲಿ ಬೆಳೆ ಸರ್ವನಾಶವಾದರೆ ಹಗೆವುಗಳಲ್ಲಿ ಸಂಗ್ರಹ ಮಾಡಿದ್ದ ಅಪಾರ ಜೋಳ ಕೂಡ ಅಂತರ್ಜಲದಿಂದ ಸರ್ವನಾಶವಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೋಳ ಹಾಳಾಗಿದ್ದನ್ನು ನೋಡಿದ ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ರೈತ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
*ಅತಿಯಾದ ಮಳೆಯಿಂದ ಅಂತರ್ಜಲ ಹೆಚ್ಚಳವಾಗಿ ಹಾನಿಯಾಗಿದೆ*
ದೀಪಾವಳಿ ಸಂಭ್ರಮ ಇಲ್ಲದಂತಾಗಿದೆ. ತಿನ್ನಲೂ ಏನು ಇಲ್ಲದಂತಾಗಿದೆ ಅಂತ ರೈತರು ಗೋಳಾಡುತ್ತಿದ್ದಾರೆ. ರೈತರು ಹಗೆವುಗಳಲ್ಲಿ ಅಪಾರ ನೀರು ಸಂಗ್ರಹವಾಗಿ ಹಾಳಾದ ಜೋಳ ನೋಡಿ ಇಡೀ ಗ್ರಾಮದಲ್ಲಿ ಗಬ್ಬು ವಾಸನೆ ಬೀರಿದೆ. ರೈತರ ಬದುಕು ನೋಡಿ ಗ್ರಾಮಸ್ಥರು ಮಮ್ಮಲ ಮರಗುತ್ತಿದ್ದಾರೆ. ಹೊಲದಲ್ಲಿ, ಊರಲ್ಲಿ ಬೆಳೆ, ಧಾನ್ಯ ಕಳೆದುಕೊಂಡ ರೈತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಮಹಿಳೆಯರು ಒತ್ತಾಯಿಸುತ್ತಿದ್ದಾರೆ.
*25ಹಗೆವುಗಳಲ್ಲಿ ಜೋಳ ಸಂಪೂರ್ಣ ಸರ್ವನಾಶ*
ಜಮೀನಿನಲ್ಲಿ ಬೆಳೆಗಳು ನಾಶವಾಗಿದ್ದಲ್ಲದೆ 25ಕ್ಕೂ ಅಧಿಕ ಹಗೆವುಗಳಲ್ಲಿ ಜೋಳ ಸಂಪೂರ್ಣ ಸರ್ವನಾಶಗೊಂಡು ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಹೆಸರು, ಶೇಂಗಾ, ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಆದರೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಳೆದ ಬೆಳೆಗಳು ಹಾನಿಗೊಂಡಿವೆ. ಹೊಲದಲ್ಲಿನ ಬೆಳೆ ಹಾಳಾದರೂ ಊಟಕ್ಕೆ ಬಿಳಿ ಜೋಳ ಇದ್ದು, ಅದನ್ನು ಮಾರಾಟ ಮಾಡಿಯಾದರೂ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಣೆ ಮಾಡಬಹುದು ಎಂದು ರೈತರು ಕನಸು ಕಂಡಿದ್ದರು. ಆದರೆ ಅತಿಯಾದ ಮಳೆಯಿಂದಾಗಿ ಅಂತರ್ಜಲ ಹೆಚ್ಚಾಗಿ ಹೆಗೆವುಗಳಲ್ಲಿ ಸಿಕ್ಕಾಪಟ್ಟೆ ನೀರು ನುಗ್ಗಿದೆ. ಸಾವಿರಾರೂ ಜೋಳದ ಚೀಲ ಸರ್ವನಾಶವಾಗಿದೆ.
*ಹಗೆವು ತೆರೆದು ನೋಡಿದಾಗ ರೈತನಿಗೆ ಶಾಕ್!*
ಗ್ರಾಮೀಣ ಭಾಗದ ಹಗೆವುಗಳಿಗೆ ಇತಿಹಾಸವಿದೆ. ಹಳ್ಳಿಗಳಲ್ಲಿ ಸಣ್ಣಪುಟ್ಟ ಮನೆಗಳು ಇರುವುದರಿಂದ ಹಗೆವುಗಳಲ್ಲಿ ದವಸಧಾನ್ಯ ಸಂಗ್ರಹ ಮಾಡುತ್ತಾರೆ. ಹರ್ಲಾಪೂರ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ 25ಕ್ಕೂ ಅಧಿಕ ಹಗೆವುಗಳು ಇವೆ. ಇದರಲ್ಲಿ ಪ್ರತಿಯೊಬ್ಬ ರೈತರು 30-40 ಜೋಳದ ಚೀಲ ಇಟ್ಟಿದ್ದರು. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ನಿನ್ನೆ ಓರ್ವ ರೈತರು ಹಗೆವು ತೆರೆದು ನೋಡಿದಾಗ ಮಳೆ ನೀರಿಗೆ ಹಾನಿಯಾಗಿರುವುದನ್ನು ನೋಡಿ ಕಣ್ಣೀರು ಸುರಿಸಿದ್ದಾರೆ.
ಇಂದು ಉಳಿದ ರೈತರು ಕೂಡ ಹಗೆವು ತೆರೆದಿದ್ದು, ರೈತರಿಗೆ ಬರ ಸಿಡಿಲು ಬಡಿದಂತಾಗಿದೆ. ಜೋಳ ಹಾಳಾಗಿದ್ದನ್ನು ಕಂಡ ರೈತ ಮಹಿಳೆಯರು ಕಣ್ಣೀರು ಸುರಿಸಲು ಆರಂಭಿಸಿದ್ದಾರೆ. ಮಳೆಯಿಂದ ಜಮೀನಿನಲ್ಲಿದ್ದ ಬೆಳೆಯೂ ಹಾಳಾಗಿದೆ. ಇತ್ತ ಹಗೆವುನಲ್ಲಿ ಸಂಗ್ರಹಿಸಿಟ್ಟ ನೂರಾರು ಚೀಲ ಜೋಳ ನೀರುಪಾಲಾಗಿದೆ. ನಾವು ಬದುಕವುದಾದರೂ ಹೇಗೆ ಅಂತ ಪ್ರಶ್ನಿಸುತ್ತಿದ್ದಾರೆ. ರೈತರು ಸಂಕಷ್ಟದಲ್ಲಿ ಸಿಲುಕಿ ನರಳಾಡುತ್ತಿದ್ದರೂ ಕ್ಷೇತ್ರದ ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾ , ತಹಶೀಲ್ದಾರ್ ಇವರು ಕೂಡಾ ಸೌಜನ್ಯಕ್ಕೂ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಮಹಿಳೆಯರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ್, ಸತೀಶ ಹಾತಲಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮನಗೌಡ ಕೆಂಚನಗೌಡ್ರು, ಕೋಟ್ರಯ್ಯ ಮೇಗೇರಿ, ಶಿವಾನಂದ ಯಾಳವಾಡ, ಹಾಗೂ ಇನ್ನೂ ಮುಂತಾದ ನೂರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
8 Attachments • Scanned by Gmail
8 Attachments • Scanned by Gmail