ಬಳ್ಳಾರಿ/ ಕಂಪ್ಲಿ : ಇಲ್ಲಿನ ತಾಲೂಕು ಶರಣ ಸಾಹಿತ್ಯ ಪರಿಷತ್ ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅನುಭವ ಮಂಟಪದಲ್ಲಿ ಹಮ್ಮಿಕೊಂಡ 182ನೇ ಮಹಾಮನೆ ಕಾರ್ಯಕ್ರಮ ನಡೆಯಿತು.
ಹೊಸಪೇಟೆಯ ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಬಾರಕೀರ ಹುಲುಗಪ್ಪ ‘ಬಸವ ವಿಚಾರಧಾರೆ’ ಕುರಿತು ಉಪನ್ಯಾಸ ನೀಡಿ, ಜಗತ್ತಿನಲ್ಲಿ ಹೊಟ್ಟೆಯ ಹಸಿವು ಹೆಚ್ಚಾಗುತ್ತಿದೆಯೇ ವಿನಹ ಜ್ಞಾನದ ಹಸಿವಿನ ಕೊರತೆಯಿದೆ. ಸೇವೆಯ ಪ್ರತಿಫಲ ಹಣ, ಲಾಭದ ಆಶೆಯಿಂದ ಕೂಡಿರಬಾರದು, ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆಯೇ ಹೊರತು ಸಂಸ್ಕಾರ ನೀಡಲಾಗುತ್ತಿಲ್ಲ. ದೇಶದ ಸ್ಥಿತಿ ಸುಧಾರಣೆಗೆ ಬಸವ ತತ್ವ ಚಿಂತನೆಗಳು ಸಹಕಾರಿಯಾಗಲಿವೆ. ಕೇವಲ ಅಕ್ಷರ ನೀಡಿದರೆ ಸಾಲದು, ಜೊತೆಗೆ ಮೌಲ್ಯಯುತ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಬಸವ ತತ್ವ ವಿಚಾರಧಾರೆಗಳು ವೈಜ್ಞಾನಿಕ, ವೈಚಾರಿಕತೆಯಿಂದ ಕೂಡಿದ್ದು ಆಡಳಿತ, ಶಿಕ್ಷಣ, ರಾಜಕೀಯ, ನಿತ್ಯಜೀವನ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಅಳವಡಿಕೆಯ ಅಗತ್ಯವಿದೆ ಎಂದರು.
ತಾಲೂಕು ವೀರಶೈವ ಸಂಘದ ಕಾರ್ಯದರ್ಶಿ ಎಚ್. ನಾಗರಾಜ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳು ಓದಿ ರ‍್ಯಾಂಕ್‌ಗಳಿಸುವ ಯಂತ್ರಗಳಾಗಿವೆಯೇ ಹೊರತು ನೈತಿಕತೆ, ಪ್ರಾಮಾಣಿಕತೆ, ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ತಂದೆ ತಾಯಿಗಳು ಶರಣರ ವಿಚಾರಧಾರೆ ಮೈಗೂಡಿಸಿಕೊಂಡಲ್ಲಿ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ನೀಡಲು ಸಾಧ್ಯ. ಬಸವ ವಿಚಾರಧಾರೆ ಭಾಷಣದ ಸರಕಾಗದೆ ಜೀವನದಲ್ಲಿ ಅನುಷ್ಠಾನಗೊಳ್ಳಬೇಕಿದೆ ಎಂದರು.
ಸಂಗಾತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಎಮ್ಮಿಗನೂರಿನ ಅತಿಥಿ ಶಿಕ್ಷಕ ಎಸ್.ರಾಮಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಅಶೋಕ ಕುಕನೂರು, ಕೆ.ಚಂದ್ರಶೇಖರ, ಬಿ.ಎಂ.ರುದ್ರಯ್ಯಸ್ವಾಮಿ, ಅಂಬಿಗರ ಮಂಜುನಾಥ, ಚಂದ್ರಯ್ಯಸೊಪ್ಪಿಮಠ, ಬಡಿಗೇರ ಜಿಲಾನ್‌ಸಾಬ್, ಸಜ್ಜೇದ ವೀರಭದ್ರಪ್ಪ, ಭಂಡಾರಿ ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















