ಹುಲಿ ವೇಷವನ್ನು ಬರೆಸಿಕೊಂಡ ನನ್ನ ಮಗ ಹುಲಿಯ ಹಾಗೆ ಆಗಲಿ ಎಂಬ ಬಲವಾದ ದೈವ ನಂಬಿಕೆ
ಬಳ್ಳಾರಿ / ಕಂಪ್ಲಿ : ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬವಾಗಿ ಇಂದಿಗೂ ತನ್ನ ಆಚರಣೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಬಂದಿದೆ.
ಮೊಹರಂ ಹಬ್ಬದಂದು ದೇವರಿಗೆ (ಪಂಜಾ) ವಿವಿಧ ರೀತಿಯ ಹರಕೆಗಳನ್ನು ಹೊತ್ತುಕೊಳ್ಳುವುದು ಹಿಂದಿನಿಂದ ಬಂದ ಸಂಪ್ರದಾಯ. ಸಂತಾನಭಾಗ್ಯ, ಕುಟುಂಬದ ಆರೋಗ್ಯ ಸಮಸ್ಯೆ ಪರಿಹಾರ ಹೀಗೆ ಹತ್ತಾರು ಸಮಸ್ಯೆಗಳ ನಿವಾರಣೆಗಾಗಿ ದೇವರ ಮೇಲೆ ಅಚಲವಾದ ನಂಬಿಕೆಯಿಂದ ಭಕ್ತರು ಹರಕೆ ಹೊತ್ತುಕೊಳ್ಳುತ್ತಾರೆ. ಇಂಥ ಹರಕೆಗಳಲ್ಲಿ ಹುಲಿವೇಷ ಬರೆಸಿಕೊಳ್ಳುವುದೂ ಸೇರಿದೆ.
“ಹುಲಿ ವೇಷವನ್ನು ಬರೆಸಿಕೊಂಡ ನನ್ನ ಮಗ ಹುಲಿಯ ಹಾಗೆ ಆಗಲಿ, ಆರೋಗ್ಯವಂತನಾಗಲಿ, ಜೀವನದಲ್ಲಿ ಉಜ್ವಲ ಭವಿಷ್ಯವನ್ನು ಕಾಣಲಿ’ ಎಂದು ದೇವರಿಗೆ 5, 11, 21 ವರ್ಷ ಅಥವಾ ಜೀವಂತ ಇರುವವರೆಗೂ ಹುಲಿವೇಷ ಬರೆಸುತ್ತೇವೆ” ಎಂದು ಹಲವು ಪೋಷಕರು ಹರಕೆ ಕಟ್ಟುತ್ತಾರೆ. ಅದರಂತೆ ಪ್ರತಿವರ್ಷ ಮೊಹರಂ ಹಬ್ಬ ಬಂದಾಗ ಹುಲಿವೇಷ ಬರೆಸಿಕೊಳ್ಳುವುದರ ಮೂಲಕ ಹರಕೆ ಪೂರೈಸುತ್ತಾರೆ.
ಹುಲಿವೇಷ ಬರೆಯುವುದೂ ಒಂದು ವಿಶಿಷ್ಟ ಕಲೆ: ಕಂಪ್ಲಿ ತಾಲ್ಲೂಕಿನಾದ್ಯಂತ ಹುಲಿವೇಷ ಬರೆಸಿಕೊಳ್ಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ನೂರಾರು ಜನರು ಹುಲಿವೇಷ ಬರೆಸಿಕೊಂಡು ಚರ್ಮದ ಹಲಿಗೆ ಅಥವಾ ತಮಟೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕಾಣಿಕೆ ಪಡೆದುಕೊಳ್ಳುತ್ತಾರೆ.
ಕಂಪ್ಲಿ ಪಟ್ಟಣದ ಚಿತ್ರಗಾರ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಭಕ್ತಿ, ಶ್ರದ್ಧೆ, ನಂಬಿಕೆ ಹಾಗೂ ಸಾಂಪ್ರದಾಯಕವಾಗಿ ಹುಲಿವೇಷ ಬರೆಯುತ್ತ ಬಂದಿದೆ. ಚಿತ್ರಗಾರ ಕುಟುಂಬದ ಸದಸ್ಯರು ಹುಲಿವೇಷ ಬರೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಾಂಪ್ರದಾಯಿಕ ಬಣ್ಣಗಳನ್ನು ಬಳಸಿ ಆಲಂಕಾರಿಕವಾಗಿ ಚಿತ್ರಗಳನ್ನು, ಸುಳಿವುಗಳನ್ನು ಹಳದಿ, ಕೆಂಪು, ಹಸಿರು, ಕರಿ ಮುಖ್ಯ ಬಣ್ಣಗಳಾಗಿ ಬಳಸಿಕೊಂಡು ಹುಲಿವೇಷ ಬರೆಯುವುದರಲ್ಲಿ ನುರಿತಿದ್ದಾರೆ.
‘ನಾಲ್ಕು ತಲೆಮಾರಿನಿಂದ ನಮ್ಮ ಕುಟುಂಬದವರು ಮೊಹರಂ ಹಬ್ಬದಂದು ಹುಲಿವೇಷ ಬರೆಯುತ್ತಾ ಬಂದಿದ್ದೇವೆ. ನಮ್ಮ ಕುಟುಂಬದವರಾದ ಚಿತ್ರಗಾರ್ ಶೀಲಾ ಬಾಯಿ, ಚಿತ್ರಗ ರಾಧಾಬಾಯಿ, ಚಿತ್ರಗಾರ ಸತೀಶ್ ಬಾಬು ಸೇರಿದಂತೆ ಶಾರದಮ್ಮ ಮನೆಯವರು ಈ ಕಾಯಕ ನಡೆಸಿಕೊಂಡು ಬಂದಿದ್ದೇವೆ, ಹಿಂದೆ ಹರಕೆ ಹೊತ್ತವರು ಇಡೀ ದೇಹಕ್ಕೆ ಹುಲಿವೇಷ ಬರೆಸಿಕೊಂಡು ಹರಕೆ ಪೂರೈಸುತ್ತಾರೆ. ಇವತ್ತಿನ ದುಬಾರಿ ಕಾಲದಲ್ಲಿ ನಮಗೆ ಆರ್ಥಿಕವಾಗಿ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಹುಲಿವೇಷ ಬರೆಯುವ ಕಲಾವಿದ ಚಿತ್ರಗಾರ ಪ್ರಸಾದ
ಯಾವುದೇ ಕೆಡಕುಗಳು ತಾಗದಿರಲಿ ದೈವದ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತಾರೆ.
ದೇಹದ ತುಂಬ ಹುಲಿವೇಷ ಬರೆಯಲು ₹800 ನೂರು ರೂಪಾಯಿ ತೆಗೆದುಕೊಳ್ಳುತ್ತೇವೆ.
ಪ್ರತಿ ಮೊಹರಂ ಹಬ್ಬದಲ್ಲಿ 150 ರಿಂದ 200 ಜನರಿಗೆ ಹುಲಿ ವೇಷದ ಬಣ್ಣ ಹಾಕುತ್ತೇವೆ.
- ಚಿತ್ರಗಾರ ಪ್ರಸಾದ,
ಹುಲಿವೇಷ ಬರೆಯುವ
ಕಲಾವಿದ, ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್




















