ಬಳ್ಳಾರಿ / ಕಂಪ್ಲಿ : ಪಟ್ಟಣದ 5ನೇ ವಾರ್ಡಿನ ಇಂದಿರಾನಗರದಲ್ಲಿರುವ ಉದ್ಭವ ನಾಗೇಂದ್ರ ದೇವಸ್ಥಾನ(ಜೋಡಿ ನಾಗದೇವತಾ)ದಲ್ಲಿ ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಶ್ವತ್ಥನಾರಾಯಣ ದೇವತಾ ಕಲ್ಯಾಣ ಮಹೋತ್ಸವ ಶ್ರದ್ಧಾಭಕ್ತಿಯಿಂದ ಗುರುವಾರ ಜರುಗಿತು.
ಇಲ್ಲಿನ ದೇವಸ್ಥಾನದಲ್ಲಿ ಶಿವರಾಮಕೃಷ್ಣಶರ್ಮಾ (ಶಿವಾಜಿ) ಅವರ ಸಾನಿಧ್ಯದಲ್ಲಿ ಬೆಳಿಗ್ಗೆ ಗಂಗೆಪೂಜೆ, ಗೋ ಪೂಜೆ, ಮಹಾ ಗಣಪತಿ, ಪುಣ್ಯ ವಚನೆ, ಕಂಕಣ ಪೂಜೆ, ನವಗ್ರಹ ಪೂಜೆ, ಪಂಚಾಮೃತಾಭಿಷೇಕ, ಜಾಲಾಧಿವಾಸ, ಪುಷ್ಪಾಧಿವಾಸ, ಹೋಮಾ, ಹವನ, ಪೂರ್ಣಾಹುತಿ, ಅಷ್ಟೋತ್ತರ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಶಾಸ್ತ್ರತವಾಗಿ ನೆರವೇರಿದವು. ನಂತರ ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಶ್ವತ್ಥನಾರಾಯಣ ದೇವತಾ ಕಲ್ಯಾಣ ಮಹೋತ್ಸವ ಶ್ರದ್ಧೆಯಿಂದ ನಡೆಯಿತು. ಇಲ್ಲಿನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲ್ಯಾಣ ಮಹೋತ್ಸವ ಹಿನ್ನಲೆ ಸಾಕಷ್ಟು ಭಕ್ತರು ಆಗಮಿಸಿ, ಕಾಯಿ, ಕರ್ಪೂರ ಅರ್ಪಿಸಿ, ದರ್ಶನ ಪಡೆದರು. ತದನಂತರ ಅನ್ನ ಸಂತಾರ್ಪಣೆ ಸ್ವೀಕರಿಸಿದರು. ಯುವ ಮುಖಂಡ ಜಿ.ಯಲ್ಲಪ್ಪ ಮಾತನಾಡಿ, ಲೋಕಕಲ್ಯಾಣ, ನಾಡಿನಲ್ಲಿ ಸಮೃದ್ಧ ಮಳೆ, ಬೆಳೆಯೊಂದಿಗೆ ಜನರ ನೆಮ್ಮದಿಯ ಜೀವನಕ್ಕಾಗಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ದೇವರ ಪೂಜೆ, ಪುನಸ್ಕಾರ, ಸಂಸ್ಕೃತಿ, ಸಂಪ್ರದಾಯಗಳ ಆಚರಣೆ ಮಾಡಲಾಗುತ್ತಿದೆ. ಇಲ್ಲಿನ ಸಹಸ್ರಾರು ಭಕ್ತರ ಉದ್ಭವ ನಾಗೇಂದ್ರ ದೇವಸ್ಥಾನದಲ್ಲಿ ನೂತನವಾಗಿ ಜೋಡಿ ನಾಗದೇವತಾ ಮತ್ತು ಅಶ್ವತ್ಥನಾರಾಯಣ ಕಲ್ಯಾಣ ಮಹೋತ್ಸವ ಶ್ರದ್ಧೆಯಿಂದ ಮಾಡಲಾಯಿತು. ದೇವರ ಪೂಜೆ ಮತ್ತು ಆರಾಧನೆಯಿಂದ ಭಕ್ತರ ಇಷ್ಟಾರ್ಥಗಳು ಲಭಿಸಲು ಸಾಧ್ಯ. ಮನುಷ್ಯನ ಬದುಕಿಗೆ ಭಕ್ತಿ, ಭಾವ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕರೇಕಲ್ ಮನೋಹರ, ಎಸ್.ಸುರೇಶ, ಯು.ವೆಂಕಟೇಶ, ಜಿ.ರಾಜ, ಆಟೋ ರಾಘವೇಂದ್ರ, ಬಿ.ಪಕ್ಕೀರಪ್ಪ, ಜಿ.ವೆಂಕಟೇಶ, ರಮೇಶ, ಯು.ನವೀನ್, ಎಸ್.ವಿರೇಶ, ಡೆಕೊರೇಷನ್ ರಾಘವೇಂದ್ರ, ಬಸವರಾಜ ಸೇರಿದಂತೆ ಜೋಡಿ ನಾಗದೇವತಾ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















