
ರಟಕಲ್: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ
ಎ ಗ್ರೇಡ್ ದೇವಸ್ಥಾನ ರೇವಗಿ (ರಟಕಲ್) ಗುಡ್ಡದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡ ಒಟ್ಟು 38 ದಿನಗಳ ಕಾಲ ನಡೆದ ಪುರಾಣ ಕಾರ್ಯಕ್ರಮವು ಶುಕ್ರವಾರ ಭಕ್ತಿಭಾವದ ವಾತಾವರಣದಲ್ಲಿ ಅದ್ದೂರಿಯಾಗಿ ಸಮಾರೋಪಗೊಂಡಿತು.
ನಿನ್ನೆ ಶುಕ್ರವಾರದಂದು ಬೆಳಗ್ಗೆಯಿಂದಲೇ ವಿಶೇಷವಾಗಿ ಶ್ರೀ ರೇವಣಸಿದ್ದೇಶ್ವರರಿಗೆ ಮಹಾ ರುದ್ರಾಭಿಷೇಕ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು, ಪ್ರಸಾದ ಸೇವಿಸಿ ಪುರಾಣ ಪ್ರವಚನವನ್ನು ಆಲಿಸಿದರು.
ಪುರಾಣ ಮುಕ್ತಾಯ ಸಮಾರಂಭದ ಅಂಗವಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಹಾಗೂ ಆದರ್ಶಗಳನ್ನು ಸಾರುವ ಹೇಮರೆಡ್ಡಿ ಮಲ್ಲಮ್ಮನ ಪುರಾಣವನ್ನು ಭಕ್ತಿಭಾವದಿಂದ ಆಲಿಸಿದ ಭಕ್ತಾದಿಗಳು
ಪುರಾಣದ ಮಹಾಮಂಗಳ ಕಾರ್ಯಕ್ರಮವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶಾಂತವೀರ ಶಿವಾಚಾರ್ಯರು, ಕಮಲಾಪುರ ಹಾಗೂ ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ ರಟಕಲ್ ಅವರು ಉಪಸ್ಥಿತರಿದ್ದು, ಭಕ್ತರಿಗೆ ಆಶೀರ್ವಚನ ನೀಡಿದರು.
ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಆಡಳಿತ ಅಧಿಕಾರಿಗಳಾದ ಪ್ರಭು ರೆಡ್ಡಿ, ಸಹಾಯಕ ಆಯುಕ್ತರು, ಸೇಡಂ, ದೇವಸ್ಥಾನದ ಕಾರ್ಯದರ್ಶಿ ಸದಾಶಿವ ವಗೆ, ದೇವಸ್ಥಾನದ ಚಾರ್ಜ್ದಾರರು ಹಾಗೂ ಸಿಬ್ಬಂದಿ ವರ್ಗ, ಮುಖ್ಯ ಅತಿಥಿಗಳು ಮತ್ತು ರೇವಗ್ಗಿ, ಮತ್ತು ರಟಕಲ್ ಗ್ರಾಮದ ಭಜನಾ ಮಂಡಳಿಯವರು,ಅಪಾರ ಸಂಖ್ಯೆಯ ಶ್ರೀ ರೇವಣಸಿದ್ದೇಶ್ವರನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇವಸ್ಥಾನದ ಪೊಲೀಸ್ ಸಿಬ್ಬಂದಿಗಳಾದ ಜಗನ್ನಾಥ ಮೂಲಗೆ ಎಎಸ್ಐ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ಕಾರ್ಯಕ್ರಮವನ್ನು ಪುರಾಣ ಸೇವಕ ವೀರಣ್ಣ ಗಂಗಾಣಿ ನಿರೂಪಿಸಿ, ವಂದಿಸಿದರು.




















