
ಬಳ್ಳಾರಿ / ಕಂಪ್ಲಿ : ವಿದ್ಯಾರ್ಥಿನಿಯರ ಭವಿಷ್ಯವು ಅವರ ಶಿಕ್ಷಣದಲ್ಲಿಯೇ ಅಡಗಿದ್ದು, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಒಂದು ಕುಟುಂಬದ ಪ್ರಗತಿಯಲ್ಲ, ಬದಲಿಗೆ ಇಡೀ ಸಮಾಜ ಮತ್ತು ದೇಶದ ಬೆಳವಣಿಗೆಗೆ ನಾಂದಿಯಾಗುತ್ತದೆ ಎಂದು ವಿಜಯನಗರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ನೋಡಲ್ ಅಧಿಕಾರಿ ಹವಾಲ್ದಾರ್ ನಾಗರಾಜ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸಣಾಪುರ ರಸ್ತೆಯ ಬಿ.ವೈ.ಎಸ್ ಗಾರ್ಡ್ನ್‌ನಲ್ಲಿ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯ, ಪದರ್ ತೆರೇಸಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಹಾಗೂ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಪಿಯುಸಿ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಜ್ಞಾನವು ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಸಮಾಜದಲ್ಲಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವ ವಹಿಸಿಕೊಳ್ಳಲು ಇದು ಅವರಿಗೆ ಶಕ್ತಿ ನೀಡುತ್ತದೆ. ಮಕ್ಕಳಿಗೆ ಪರೀಕ್ಷೆ ಉದ್ದೇಶದಿಂದ ಬೋಧಿಸದೇ ಜೀವನವನ್ನು ರೂಪಿಸಿಕೊಳ್ಳುವ ಮಾನವೀಯ ಮೌಲ್ಯಗಳ ಶಿಕ್ಷಣ ನೀಡಬೇಕು. ಕಟ್ಟಿಟ್ಟ ಜ್ಞಾನ ಕೊಳೆಯುತ್ತದೆ. ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ ಎಂದರು.
ನಂತರ ವಿವಿಎಸ್‌ಎಸ್ ಟ್ರಸ್ಟ್ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಹೆಣ್ಮಕ್ಕಳ ಭವಿಷ್ಯ ಚೆನ್ನಾಗಿರಲು ಶಿಕ್ಷಣದ ಜೊತೆಗೆ ಜೀವನಾಧರಿತ ಮೌಲ್ಯಗಳು ಅಗತ್ಯವಾಗಿದೆ. ಶಿಕ್ಷಣದೊಂದಿಗೆ ಪ್ರತಿಯೊಂದು ಹಂತದಲ್ಲಿ ತಮ್ಮ ಪ್ರತಿಭೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದರು.
ತದ ನಂತರ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಮದ್ದಾನೆಪ್ಪ ಬಿಡನಾಳ್ ಮಾತನಾಡಿ, ಈ ಭಾಗದ ಬಡ ಹಾಗೂ ಮಧ್ಯಮ ವರ್ಗದ ಹೆಣ್ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ವಿವಿಎಸ್‌ಎಸ್ ಟ್ರಸ್ಟ್, ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯ ಮತ್ತು ಮದರ್ ತೆರೇಸಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಒಳ್ಳೆಯ ಶಿಕ್ಷಣದ ಮೂಲಕ ಭವಿಷ್ಯ ರೂಪಿಸಲಾಗುತ್ತಿದೆ. ವಿದ್ಯಾರ್ಥಿನಿಯರ ಪ್ರತಿಭೆಗಳು ಇಂತಹ ವೇದಿಕೆಗಳ ಮೂಲಕ ಹೊರ ತರಲು ಸಾಧ್ಯವಾಗುತ್ತದೆ ಎಂದರು.
ಮೊದಲಿಗೆ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಇಂದ್ರಜಾಗೆ ಮತ್ತು ಮಾರ್ಗಸೂಚಕರಾದ ಉಪನ್ಯಾಸಕರಿಗೆ, ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ತದ ನಂತರ ರ‍್ಯಾಪ್ ಶೋ, ನೃತ್ಯ ಸೇರಿದಂತೆ ವಿದ್ಯಾರ್ಥಿನಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಬಳ್ಳಾರಿ ಗೌರವಾಧ್ಯಕ್ಷ ಎಂ.ಶ್ರೀಶೈಲ, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್.ರಾಜೀವ್, ಉಪನ್ಯಾಸಕ ಬಿ.ಕುಮಾರ, ಬಿಡಿಸಿಸಿ ಕ್ಷೇತ್ರ ಅಧಿಕಾರಿ ಎನ್.ಬಾಲಪ್ಪ, ವಿವಿಎಸ್‌ಎಸ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಜಿ.ಪ್ರಕಾಶ ನಾಯಕ, ಉಪ ಕಾರ್ಯದರ್ಶಿ ಬಸವರಾಜ, ಖಜಾಂಚಿ ಮಂಜುನಾಥ ತಳವಾರ, ಸದಸ್ಯರಾದ ಮಂಜಮ್ಮ ರಮೇಶ ಸುಗ್ಗೇನಹಳ್ಳಿ, ಹನುಮಂತಪ್ಪ, ಭಾಗ್ಯಮ್ಮ, ಜಯಲಕ್ಷ್ಮಿ, ಬಾಲಪ್ಪ ಎನ್, ರಾಜೇಶ್ವರಿ, ಹೆಚ್.ಮಲ್ಲಿಕಾರ್ಜುನ, ಕಾಲೇಜು ಪ್ರಾಂಶುಪಾಲ ಜಿ.ಮಹಾಬಲೇಶ್ವರಪ್ಪ, ಉಪನ್ಯಾಸಕರಾದ ಡಾ.ವಿಜಯಶಂಕರ, ಲಕ್ಷ್ಮಣನಾಯಕ, ಸುನೀತಾ, ಲೀಲಾವತಿ, ಸುರೇಶ, ಮೇಘರಾಜ್, ಉಮಾಮಹೇಶ್ವರಿ ಸೇರಿದಂತೆ ಮುಖಂಡರು, ಪೋಷಕರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















