ಪ್ಲಾಸ್ಟಿಕ್ ತಿಂದು ಅಸ್ವಸ್ಥಗೊಳ್ಳುತ್ತಿರುವ ಬೀದಿ ಹಸುಗಳು: ಗೋಶಾಲೆಗೆ ಸ್ಥಳಾಂತರಿಸಲು ಒತ್ತಾಯ.
ಕಂಪ್ಲಿ: ಪಟ್ಟಣದ ವಿವಿಧ ಬೀದಿಗಳಲ್ಲಿ ಮಾಲೀಕರಿಲ್ಲದೆ ಅಲೆದಾಡುತ್ತಿರುವ ಹಸುಗಳನ್ನು ಹಿಡಿದು, ಸುರಕ್ಷಿತ ಗೋಶಾಲೆಗೆ ಸ್ಥಳಾಂತರಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿ ‘ಕಂಪ್ಲಿ ಯುವಶಕ್ತಿ ಸಂಘ(ರಿ.)’ ಪದಾಧಿಕಾರಿಗಳು ಮಂಗಳವಾರ ಸ್ಥಳೀಯ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ರವರಿಗೆ ಮನವಿ ಸಲ್ಲಿಸಿದರು.
ಕಳೆದ ಹಲವು ದಿನಗಳಿಂದ ಪಟ್ಟಣದ ಮುಖ್ಯ ರಸ್ತೆ ಮತ್ತು ಬೀದಿಗಳಲ್ಲಿ ಹತ್ತಾರು ಹಸುಗಳು ವಾರಸುದಾರರಿಲ್ಲದೆ ಅಲೆಯುತ್ತಿವೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ರಸ್ತೆ ಬದಿಯ ಕಸದ ರಾಶಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ಕೊಳಕು ತಿನ್ನುವುದರಿಂದ ಮೂಕ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ ಎಂದು ಸಂಘದ ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 239 ಮತ್ತು 240ರ ಅನ್ವಯ ಸಾರ್ವಜನಿಕ ರಸ್ತೆಯಲ್ಲಿ ಹಸುಗಳನ್ನು ಅಲೆಯಲು ಬಿಡುವುದು ಹಾಗೂ ಅವುಗಳಿಗೆ ಕಸ ತಿನ್ನಲು ಬಿಡುವುದು ಅಪರಾಧವಾಗಿದೆ. ಜೊತೆಗೆ, ಕರ್ನಾಟಕ ಜಾನುವಾರು ಅತಿಕ್ರಮಣ ಅಧಿನಿಯಮ 1966ರ ಕಲಂ 10ರ ಪ್ರಕಾರ ಬೀದಿ ಹಸುಗಳನ್ನು ಹಿಡಿದು ದನದ ಕೊಟ್ಟಿಗೆಗೆ ಸೇರಿಸಿ, ನಂತರ ಗೋಶಾಲೆಗೆ ಕಳುಹಿಸುವುದು ಪುರಸಭೆಯ ಕರ್ತವ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ತಕ್ಷಣವೇ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಬೀದಿ ಹಸುಗಳನ್ನು ಹಿಡಿದು ಗೋಶಾಲೆಗೆ ಸೇರಿಸಬೇಕು. ಅಲ್ಲಿ ಅವುಗಳಿಗೆ ಅಗತ್ಯ ಮೇವು, ನೀರು ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಮುಂದಿನ 7 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳು ಹಾಗೂ ಪಶು ಸಂಗೋಪನಾ ಇಲಾಖೆಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್.ಎಂ. ಪತ್ರಯ್ಯ, ಡಿ. ವಿ. ಸತ್ಯನಾರಾಯಣ, ಎಂ. ಶ್ರೀನಿವಾಸ, ಜಿ. ಶ್ರೀನಿವಾಸ್, ಗೋವಿಂದ, ಇಟಗಿ ವಿರೂಪಾಕ್ಷಿ, ಕೃಷ್ಣಪ್ರಸಾದ್, ಶಂಕರ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.




















