ಅಥಣಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2 ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಗಡಿ ಭಾಗದ ಪ್ರಮುಖ ತಾಲೂಕಾದ ಅಥಣಿಯ ಜ್ವಲಂತ ಸಮಸ್ಯೆಗಳು, ಜಿಲ್ಲೆ ಘೋಷಣೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಕಂದಾಯ ಇಲಾಖೆಯಲ್ಲಿ ಜನರು ಪಡುತ್ತಿರುವ ತೀವ್ರ ಪರದಾಟದ ಬಗ್ಗೆ ಸದನದಲ್ಲಿ ಕಡ್ಡಾಯವಾಗಿ ಚರ್ಚಿಸಿ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ SC-ST ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ಅಥಣಿ ಇದರ ರಾಜ್ಯ ಮಾಧ್ಯಮ ವಕ್ತಾರರಾದ ಮಹೇಶ್ ಎಮ್. ಶರ್ಮಾ ಅವರು ಮಾಧ್ಯಮ ಹಾಗೂ ಪತ್ರಿಕೆಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಥಣಿ ತಾಲೂಕಿನ ಅಭಿವೃದ್ಧಿ ಮತ್ತು ಸಾರ್ವಜನಿಕರ ಸಮಸ್ಯೆಗಳ ಕುರಿತು ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗುತ್ತಿದ್ದರೂ, ಅಧಿವೇಶನದ ವೇಳೆ ಜನಪ್ರತಿನಿಧಿಗಳು ಮತ್ತು ಸಚಿವರು ಈ ಬಗ್ಗೆ ಚರ್ಚಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿಯಾದರೂ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಸಚಿವರು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು ಈ ಕೆಳಗಿನ ಎಲ್ಲಾ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಅಧಿವೇಶನದಲ್ಲಿ ಚರ್ಚೆಯಾಗಲೇಬೇಕಾದ ಪ್ರಮುಖ ವಿಷಯಗಳು :
1. ಕಂದಾಯ ಇಲಾಖೆಯ ಸತಾಯಾಟ ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘನೆ:
ತಂದೆಯ ಆಸ್ತಿಯಲ್ಲಿ ಕಾನೂನುಬದ್ಧವಾಗಿ ಬರಬೇಕಾದ ಪಾಲಿಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿ, ನ್ಯಾಯಾಲಯದಿಂದ ಅಂತಿಮ ಆದೇಶ (Decree & Final Decree) ಹಾಗೂ ಜಮೀನಿನ ಕಬ್ಜಾ (Possession) ಪಡೆದುಕೊಂಡಿದ್ದರೂ, ಕಂದಾಯ ದಾಖಲೆಗಳಲ್ಲಿ (RTC/ಉತಾರ) ಹೆಸರು ದಾಖಲಿಸಲು ಕಂದಾಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ಜಮೀನಿನ ವಿಸ್ತೀರ್ಣದ ವ್ಯತ್ಯಾಸ ಸರಿಪಡಿಸಲು ತೆಲಸಂಗ ನೆಮ್ಮದಿ ಕೇಂದ್ರಕ್ಕೆ ಹೋದರೆ ‘ಪೋಡಿ ಮುಗಿಯದೆ 11E ಸ್ಕೆಚ್ ನೀಡುವುದಿಲ್ಲ’ ಎನ್ನುತ್ತಾರೆ; ಇನ್ನೊಂದೆಡೆ ‘ಮೊದಲು 11E ಸ್ಕೆಚ್ ತನ್ನಿ’ ಎಂದು ಬಡ ಅರ್ಜಿದಾರರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ನ್ಯಾಯಾಲಯದ ಆದೇಶವಿದ್ದಾಗ ಇಲಾಖೆಯೇ ತಾಂತ್ರಿಕ ದೋಷ ಸರಿಪಡಿಸಿ ಉತಾರ ನೀಡುವ ಬದಲು ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗದಂತೆ ಮಾಡಲಾಗುತ್ತಿದೆ.
ಚಿಕ್ಕೋಡಿ ಉಪವಿಭಾಗಾಧಿಕಾರಿಗಳು (AC) ಮತ್ತು ಅಥಣಿ ತಹಶೀಲ್ದಾರರು ತಕ್ಷಣ ಮಧ್ಯಪ್ರವೇಶಿಸಿ, ಇಲಾಖಾ ಹಂತದಲ್ಲೇ ಪೋಡಿ ಪ್ರಕ್ರಿಯೆ ಪೂರ್ಣಗೊಳಿಸಿ ಸಂತ್ರಸ್ತ ಮಹಿಳೆಯ ಹೆಸರನ್ನು RTC ಯಲ್ಲಿ ದಾಖಲಿಸಬೇಕು. ಅಲ್ಲದೆ ಕಂದಾಯ ಹಾಗೂ ಇತರ ಇಲಾಖೆಗಳಲ್ಲಿ ಸಾರ್ವಜನಿಕರು ನಿತ್ಯ ಪಡುತ್ತಿರುವ ಪರದಾಟಕ್ಕೆ ಅಂತ್ಯ ಹಾಡಬೇಕು.
2. ಅಥಣಿ ಜಿಲ್ಲೆ ಘೋಷಣೆ ಮತ್ತು ಆಡಳಿತಾತ್ಮಕ ಬಲವರ್ಧನೆ:
ಆಡಳಿತಾತ್ಮಕ ಹಿತದೃಷ್ಟಿಯಿಂದ ಅಥಣಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು.
ಅಥಣಿ ಪುರಸಭೆಯನ್ನು ತಕ್ಷಣವೇ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕು.
ಸಾರ್ವಜನಿಕರ ಅನುಕೂಲಕ್ಕಾಗಿ ಅಥಣಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಾಲಯಗಳು, ಉಪವಿಭಾಗಾಧಿಕಾರಿ (AC) ಕಚೇರಿ ಹಾಗೂ ಜಿಲ್ಲಾಧಿಕಾರಿ (DC) ಕಚೇರಿಗಳನ್ನು ನಿರ್ಮಿಸಬೇಕು.
3. ಸಂಚಾರ (ಟ್ರಾಫಿಕ್) ಮತ್ತು ಸಂಪರ್ಕ ಕ್ರಾಂತಿ:
ಪಟ್ಟಣದ ಸಂಚಾರ ದಟ್ಟಣೆ ನಿವಾರಿಸಲು ಬೈಪಾಸ್ ರಸ್ತೆ ಮತ್ತು ಅಗತ್ಯವಿರುವ ಕಡೆ ಓವರ್ ಬ್ರಿಡ್ಜ್ ನಿರ್ಮಿಸಬೇಕು.
ಅಥಣಿಗೆ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರು ಮಾಡಬೇಕು. ಈಗಾಗಲೇ ವೃತ್ತಗಳಲ್ಲಿ ಅಳವಡಿಸಿರುವ ಟ್ರಾಫಿಕ್ ಲೈಟ್ಗಳನ್ನು ತಕ್ಷಣ ಚಾಲನೆಗೊಳಿಸಬೇಕು ಹಾಗೂ ಉಳಿದ ವೃತ್ತಗಳಲ್ಲಿ ಹೊಸ ಟ್ರಾಫಿಕ್ ಲೈಟ್ ಅಳವಡಿಸಬೇಕು.
ಬಹುದಿನಗಳ ಕನಸಾದ ಅಥಣಿ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಮತ್ತು ಸಿದ್ಧೇಶ್ವರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಕ್ಷಣ ಚಾಲನೆ ನೀಡಬೇಕು.
4. ಕೆರೆ ಅಭಿವೃದ್ಧಿ ಮತ್ತು ಮಾರುಕಟ್ಟೆ ಶಿಸ್ತು:
ಅಥಣಿ ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ, ಕೆರೆಯ ಮಧ್ಯಭಾಗದಲ್ಲಿ ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗಳನ್ನು ನಿರ್ಮಿಸಬೇಕು.
ಎಂ.ಜಿ. ಮಾರುಕಟ್ಟೆಯಲ್ಲಿ ಸಾರ್ವಜನಿಕರು ಮತ್ತು ವಿಶೇಷವಾಗಿ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ ನಿರ್ಮಿಸಬೇಕು.
ಬೀದಿ ಬದಿ ವ್ಯಾಪಾರಸ್ಥರು ಹಾಗೂ ಬೈಕ್ ನಿಲುಗಡೆಗೆ ಪ್ರತ್ಯೇಕವಾಗಿ ಗೆರೆ (Line) ಎಳೆದು, ವ್ಯಾಪಾರಸ್ಥರು ಮತ್ತು ವಾಹನ ಸವಾರರು ಆ ಗೆರೆಯ ಹೊರಗೆ ಬರದಂತೆ ಒಳಗೇ ಇರುವಂತೆ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೊಳಿಸಬೇಕು.
5. ಶಿವಯೋಗಿ ನಗರ ಹಾಗೂ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿ:
ಶಿವಯೋಗಿ ನಗರವನ್ನು ಅಧಿಕೃತವಾಗಿ ಪುರಸಭೆ ವ್ಯಾಪ್ತಿಗೆ ಒಳಪಡಿಸಬೇಕು. ಇಲ್ಲಿನ ಮೋಟಗಿ ತೋಟ ಶಾಲೆಯಲ್ಲಿ 9 ಮತ್ತು 10ನೇ ತರಗತಿಗಳನ್ನು ಆರಂಭಿಸಬೇಕು, ಶಾಲೆಯ ಹತ್ತಿರ ರಸ್ತೆ ಬ್ರೇಕ್ (Road Breaker) ಅಳವಡಿಸಬೇಕು ಹಾಗೂ ಬಾಕಿ ಇರುವ ಎಲ್ಲಾ ಕಡೆ ವಿದ್ಯುತ್ ದೀಪ ಮತ್ತು ರಸ್ತೆಗಳನ್ನು ನಿರ್ಮಿಸಬೇಕು.
ಯಲಡಗಿ ಗ್ರಾಮದಿಂದ ಮುಖ್ಯ ರಸ್ತೆಯವರೆಗೆ, ಅಡಹಳಟ್ಟಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮತ್ತು ಅಥಣಿ ಪಟ್ಟಣದ ಪ್ರತಿಯೊಂದು ಗಲ್ಲಿಗಳಲ್ಲಿ ಗುಣಮಟ್ಟದ ರಸ್ತೆ ಹಾಗೂ ಗಟರ್ (ಚರಂಡಿ) ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ಸರ್ಕಾರ ಮತ್ತು ಉನ್ನತ ಪ್ರಾಧಿಕಾರಗಳಿಗೆ ಮನವಿ:
ಈ ಎಲ್ಲಾ ಗಂಭೀರ ಸಮಸ್ಯೆಗಳು ಮತ್ತು ಅಭಿವೃದ್ಧಿ ಬೇಡಿಕೆಗಳನ್ನು ಪರಿಗಣಿಸಿ, ಡಿಸೆಂಬರ್ 2ರಿಂದ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕೋಡಿ ಸಂಸತ್ ಸದಸ್ಯರು, ಬೆಳಗಾವಿ ಜಿಲ್ಲಾಧಿಕಾರಿಗಳು (DC), ಚಿಕ್ಕೋಡಿ ಸಹಾಯಕ ಆಯುಕ್ತರು (AC) ಹಾಗೂ ಅಥಣಿ ತಹಶೀಲ್ದಾರರಿಗೆ ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ ಮಾಡಲಾಗುತ್ತಿದೆ. ಆಡಳಿತ ಯಂತ್ರ ತಕ್ಷಣ ಎಚ್ಚೆತ್ತುಕೊಂಡು ಸಂತ್ರಸ್ತ ಮಹಿಳೆಗೆ ಹಾಗೂ ಅಥಣಿ ತಾಲೂಕಿನ ಸಮಸ್ತ ಜನತೆಗೆ ನ್ಯಾಯ ಒದಗಿಸಿಕೊಡಬೇಕೆಂದು ಮಹೇಶ್ ಎಮ್. ಶರ್ಮಾ ಅವರು ಒತ್ತಾಯಿಸಿದ್ದಾರೆ.
ಇನ್ನಾದ್ರೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು ಕೇಂದ್ರ ಸರಕಾರ ಕೇಂದ್ರ ಸರ್ಕಾರದ ಸಚಿವರು ಕರ್ನಾಟಕ ಲೋಕಸಭಾ ಸದಸ್ಯರು ಅಥಣಿ ತಾಲೂಕಿಗೆ ಇವೆಲ್ಲ ಹೇಳಿದಂತ ಅಭಿವೃದ್ಧಿಗಳು ಯೋಜನೆಗಳು ಅಲೆದಾಟ ಈ ಸಮಸ್ಯೆಗಳು ಬಗೆಹರುತ್ತಾ ಯಥಾ ಸ್ಥಿತಿ ಮುಂದುವರಿಸುತ್ತಾರೆ ದಯಾಳುಗಳಾದ ಮನವಿ ಮಾಡಿಕೊಳ್ಳುತ್ತಿದ್ದೇವೆ?




















