ಯಾದಗಿರಿ : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM), ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಜಿಲ್ಲಾ ಪಂಚಾಯತ್ ಯಾದಗಿರಿ, ತಾಲೂಕಾ ಪಂಚಾಯತ್ ಮತ್ತು CMTC ಯಾದಗಿರಿ ವತಿಯಿಂದ ಆರೋಗ್ಯಕರ ಕುಟುಂಬ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಎಫ್‌ಎನ್‌ಎಚ್‌ಡಬ್ಲ್ಯೂ (FNHW – Food, Nutrition, Health and WASH) ಇಮ್ಮರ್ಶನ್ ಸೈಟ್ ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ನವೆಂಬರ್ 23 ಮತ್ತು 24 ರಂದು ಯಾದಗಿರಿಯ ಸಿಎಂಟಿಸಿ (CMTC) ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶ್ರೀ ಬಸವರಾಜ್ ಶರಭೈ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳಾದ ಡಾ. ದೀಪಾ ಕಾಮತ್ ಅವರು ಭಾಗವಹಿಸಿ, ಆಹಾರ, ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ (FNHW) ವಿಷಯಗಳ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ NRLM ಡಿಪಿಎಂ ಸಿದ್ರಾಮಪ್ಪ, ಡಿಎಂ ಗಿರೀಶ್ ಮುಂಡರಗಿ ಮಠ್, ಡಿಎಂ ಶ್ರೀಮತಿ ಕಾವೇರಿ, ಡಿಎಂಐಎಸ್ ಪ್ರವೀಣ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್‌ಗಳ ಎನ್‌ಆರ್‌ಎಲ್‌ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತರಬೇತಿಯಲ್ಲಿ ಗ್ರಾಮೀಣ ಕುಟುಂಬಗಳಲ್ಲಿ ಪೌಷ್ಟಿಕ ಆಹಾರ ಸೇವನೆ, ತಾಯಿ ಮತ್ತು ಮಗುವಿನ ಆರೋಗ್ಯ, ಕುಟುಂಬದ ಯೋಗಕ್ಷೇಮ, ವೈಯಕ್ತಿಕ ಹಾಗೂ ಸಮುದಾಯದ ನೈರ್ಮಲ್ಯ, ಜನಜಾಗೃತಿ ಮತ್ತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಕುರಿತು ಮಾಹಿತಿ ನೀಡಲಾಯಿತು.
ಎಫ್‌ಎನ್‌ಎಚ್‌ಡಬ್ಲ್ಯೂ ಕಾರ್ಯಕ್ರಮವನ್ನು ಸ್ವಸಹಾಯ ಸಂಘಗಳು, ಗ್ರಾಮ ಸಂಘಗಳು ಮತ್ತು ಸಮುದಾಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಹಾಗೂ ಆರೋಗ್ಯಕರ ಕುಟುಂಬ ಮತ್ತು ಆರೋಗ್ಯಕರ ಯಾದಗಿರಿ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಲಾಯಿತು.




















