ಅಂಬೇಡ್ಕರ್ ಅವರು ಜನ ಕಲ್ಯಾಣದ ಉಪಯೋಗಕ್ಕಾಗಿ ಸ್ಥಾಪಿಸಿದ ಸರಕಾರಿ ವಿದ್ಯುತ್ ವಲಯ ಖಾಸಗೀಕರಣ ಮಾಡುವ ತೀರ್ಮಾನವನ್ನು ತಕ್ಷಣಕ್ಕೆ ಕೈ ಬಿಡಬೇಕು : ರೈತ ಮುಖಂಡರ ಆಗ್ರಹ
ಚಿಂಚೋಳಿ ಪಟ್ಟಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟಾಟಾ ಪವರ್ ಕಂಪನಿಗೆ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ರೈತ ಸೇನೆ ವತಿಯಿಂದ ಚಿಂಚೋಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಅಧ್ಯಕ್ಷರಾದ ವೀರಣ್ಣ ಗಂಗಾಣಿ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿದ ರೈತ ಮುಖಂಡರ ನಿಯೋಗವು, ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ ಅವರು, “ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ವಹಿಸಿ ಕೊಡುವುದರಿಂದ ರೈತರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಯೋಜನೆಗಳಿಗೆ ಧಕ್ಕೆಯಾಗಲಿದೆ. ಇದರಿಂದ ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದು, ಕಡುಬಡವರು ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ವಿದ್ಯುತ್ ದರ ದುಬಾರಿಯಾಗಲಿದೆ ಸರ್ಕಾರ ತಕ್ಷಣವೇ ಈ ನಿರ್ಧಾರವನ್ನು ಕೈಬಿಡಬೇಕು” ಎಂದು ಆಗ್ರಹಿಸಿದರು.
ಒಂದೊಮ್ಮೆ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿ ತಹಶೀಲ್ದಾರರಾದ ಸುಭಾಷ್ ಜಮಖಂಡಿ ರವರಿಗೆ ಮನವಿ ಪತ್ರ ಸಲ್ಲಿಸಿದರು .
ಈ ಪ್ರತಿಭಟನಾ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ರೈತ ಸೇನೆಯ ಪ್ರಮುಖ ಪದಾಧಿಕಾರಿಗಳಾದ ರೇವಣಸಿದ್ದ ಧರಿ, ಸಂತೋಷ್ ರೆಡ್ಡಿ ಹಾಗೂ ರೈತರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ



















