ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಜಾಪ್ರಭುತ್ವದ ಕರಾಳ ದಿನ

ಶಿವಮೊಗ್ಗ: ಅಧಿಕಾರ ದಾಹಕ್ಕಾಗಿ ಸಂವಿಧಾನವನ್ನೇ ಹತ್ತಿಕ್ಕಿದ ಕಾಂಗ್ರೆಸ್ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ – ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ

ಶಿವಮೊಗ್ಗ: “ಜೂನ್ 25, 1975 ರ ಮಧ್ಯರಾತ್ರಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿಯು (Emergency) ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಮತ್ತು ನಾಚಿಕೆಗೇಡಿನ ಅಧ್ಯಾಯವಾಗಿದೆ. ಅಂದು ದೇಶದೊಳಗೆ ಯಾವುದೇ ಯುದ್ಧದ ವಾತಾವರಣವಿರಲಿಲ್ಲ ಅಥವಾ ದಂಗೆಗಳೂ ನಡೆದಿರಲಿಲ್ಲ. ಕೇವಲ ನ್ಯಾಯಾಲಯದ ತೀರ್ಪಿನಿಂದ ರದ್ದಾಗಿದ್ದ ತಮ್ಮ ಪ್ರಧಾನಿ ಹುದ್ದೆ ಹಾಗೂ ಅಧಿಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂಬ ಸ್ವಾರ್ಥ ಮತ್ತು ಹತಾಶೆಯಿಂದ ಇಡೀ ದೇಶವನ್ನು ಜೈಲುಖಾನೆಯನ್ನಾಗಿ ಪರಿವರ್ತಿಸಲಾಯಿತು,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ .

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, “ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಇಂದು ದೊಡ್ಡದಾಗಿ ಭಾಷಣ ಬಿಡುವ ಕಾಂಗ್ರೆಸ್ ನಾಯಕರು, ತಮ್ಮ ಪಕ್ಷದ ಆಡಳಿತಾವಧಿಯ ಕರಾಳ ಇತಿಹಾಸವನ್ನು ಒಮ್ಮೆ ತಿರುವಿ ನೋಡಲಿ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾದ ಪತ್ರಿಕಾ ಸ್ವಾತಂತ್ರ್ಯ ಮತ್ತು ನ್ಯಾಯಾಂಗದ ಮೇಲೆ ಗದಾಪ್ರಹಾರ ನಡೆಸಿತ್ತು. ನಾಗರೀಕರ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು. ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನು ಅಮಾನವೀಯವಾಗಿ ಜೈಲಿಗೆ ತಳ್ಳಲಾಯಿತು .”

“ಕಾಂಗ್ರೆಸ್‌ನ ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಲೋಕನಾಯಕ ಜಯಪ್ರಕಾಶ್ ನಾರಾಯಣ್ (JP), ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಎಚ್.ಡಿ. ದೇವೇಗೌಡರು ಸೇರಿದಂತೆ ದೇಶದ ದಿಗ್ಗಜ ನಾಯಕರು ಧೀರೋದಾತ್ತವಾಗಿ ಹೋರಾಡಿದರು ಮತ್ತು ಸುದೀರ್ಘ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದರು. ಇದೇ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿಯ ವಿರುದ್ಧ ದೇಶಾದ್ಯಂತ ಜನಾಂದೋಲನ ರೂಪಿಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅತ್ಯಂತ ನಿರ್ಣಾಯಕ ಪಾತ್ರ ವಹಿಸಿತ್ತು . ಆರ್‌ಎಸ್‌ಎಸ್‌ನ ಸಾವಿರಾರು ನಿಷ್ಠಾವಂತ ಕಾರ್ಯಕರ್ತರು ಭೂಗತರಾಗಿ (Underground) ಕಾರ್ಯ ನಿರ್ವಹಿಸುತ್ತಾ, ಕರಾಳ ಆಡಳಿತದ ಸತ್ಯ ಸಂಗತಿಗಳನ್ನು ಜನರಿಗೆ ತಲುಪಿಸಲು ಪತ್ರಿಕೆಗಳನ್ನು ಮುದ್ರಿಸಿ ಹಂಚಿದರು ಮತ್ತು ದೇಶದ ಸ್ವಾತಂತ್ರ್ಯ ಮರು ಸ್ಥಾಪನೆಗಾಗಿ ಬೃಹತ್ ಸತ್ಯಾಗ್ರಹಗಳನ್ನು ಸಂಘಟಿಸಿದರು. ದೆಹಲಿಯಿಂದ ಹಿಡಿದು ಹಳ್ಳಿಹಳ್ಳಿಗಳವರೆಗೆ ಅನೇಕ ಸ್ವಯಂಸೇವಕರು ತಮ್ಮ ಮನೆ ಮಠಗಳನ್ನು ತ್ಯಜಿಸಿ, ಪ್ರಾಣದ ಹಂಗು ತೊರೆದು ಲೂಟಿಗೊಳಗಾದ ನಾಗರಿಕರ ಹಕ್ಕುಗಳಿಗಾಗಿ ಹೋರಾಡಿದರು .”

“ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಲು ಆರ್‌ಎಸ್‌ಎಸ್ ಮತ್ತು ದೇಶಭಕ್ತ ನಾಯಕರ ಮೇಲೆ ಅತ್ಯಂತ ಕ್ರೂರ ಹಾಗೂ ಅಮಾನವೀಯ ದೌರ್ಜನ್ಯಗಳನ್ನು ಎಸಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಾನೂನುಬಾಹಿರವಾಗಿ ನಿಷೇಧಿಸಿ, ಪ್ರಮುಖ ಧುರೀಣರನ್ನು ಕಠಿಣವಾದ ‘ಮಿಸಾ’ (MISA) ಕಾಯ್ದೆಯಡಿ ಯಾವುದೇ ವಿಚಾರಣೆಯಿಲ್ಲದೆ ಕತ್ತಲೆ ಕೋಣೆಗಳಿಗೆ ತಳ್ಳಲಾಯಿತು. ಸೆರೆಮನೆಗಳಲ್ಲಿ ನಾಯಕರಿಗೆ ಹಾಗೂ ಸ್ವಯಂಸೇವಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ನೀಡದೆ, ಅಸಹನೀಯ ದೈಹಿಕ ಮತ್ತು ಮಾನಸಿಕ ಕಿರುಕುಳಗಳನ್ನು ನೀಡುವ ಮೂಲಕ ಸರ್ಕಾರಿ ಪ್ರಾಯೋಜಿತ ದೌರ್ಜನ್ಯವನ್ನು ನಡೆಸಲಾಯಿತು. ಪೊಲೀಸರ ಅಮಾನವೀಯ ಲಾಠಿ ಪ್ರಹಾರ ಹಾಗೂ ಜೈಲಿನ ಅತಿಯಾದ ಹಿಂಸೆಗಳಿಗೆ ಬಲಿಯಾಗಿ ದೇಶದಾದ್ಯಂತ ನೂರಾರು ದೇಶಭಕ್ತರು ಜೈಲುಗಳ ಒಳಗೇ ವೀರಮರಣವನ್ನಪ್ಪಿ ಬಲಿದಾನವಾದರು. ಕಾಂಗ್ರೆಸ್ ನಡೆಸಿದ ಈ ಸರ್ವಾಧಿಕಾರಿ ದಬ್ಬಾಳಿಕೆಯು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಎಂದಿಗೂ ಅಳಿಸಲಾಗದ ಕಪ್ಪು ಚುಕೆಯಾಗಿದೆ. ಆ ಸುದೀರ್ಘ ಹೋರಾಟದ ಫಲವಾಗಿ ಅನಿವಾರ್ಯವಾಗಿ ಮಾರ್ಚ್ 21, 1977 ರಂದು ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಬೇಕಾಯಿತು .”

“ಅಂದು ಸಂವಿಧಾನವನ್ನೇ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಕಾಂಗ್ರೆಸ್‌ನ ಸರ್ವಾಧಿಕಾರಿ ಪ್ರವೃತ್ತಿಯ ಮನೋಭಾವ 51 ವರ್ಷಗಳ ನಂತರವೂ ಹಾಗೆಯೇ ಉಳಿದಿದೆ, ಕೇವಲ ಅದರ ವಿಧಾನಗಳು ಬದಲಾಗಿವೆಯಷ್ಟೇ. ತಮ್ಮ ಅಧಿಕಾರಕ್ಕೆ ಧಕ್ಕೆ ಬಂದಾಗಲೆಲ್ಲಾ ಸಂವಿಧಾನದ ಮೌಲ್ಯಗಳನ್ನು ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ಗಾಳಿಗೆ ತೂರುವುದು ಕಾಂಗ್ರೆಸ್‌ಗೆ ರಕ್ತಗತವಾಗಿ ಬಂದ ಗುಣವಾಗಿದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದ ದುಷ್ಟ ಶಕ್ತಿಗಳನ್ನು ಮಣಿಸಿದ ಅಂದಿನ ಹಿರಿಯರ ಹೋರಾಟದ ವೀರಗಾಥೆ ಇಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿದೆ . ಪ್ರಜಾಪ್ರಭುತ್ವವನ್ನು ಉಳಿಸಲು ಅಂದು ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಹೋರಾಡಿದ ಪ್ರತಿಯೊಬ್ಬ ದೇಶಭಕ್ತರನ್ನು ಹಾಗೂ ಸಂಘದ ವೀರ ಸ್ವಯಂಸೇವಕರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ,” ಎಂದು ಶಾಸಕರು ತಿಳಿಸಿದ್ದಾರೆ.

” ಇತಿಹಾಸದ ಕರಾಳ ಪುಟಗಳನ್ನು ಸಾರ್ವಜನಿಕವಾಗಿ ನೆನಪಿಸುವ ಮೂಲಕ, ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್‌ನ ಅಸಲಿ ಮುಖವನ್ನು ಸಾರ್ವಜನಿಕರ ಮುಂದೆ ಅನಾವರಣಗೊಳಿಸುವುದು ಇಂದಿನ ಅಗತ್ಯವಾಗಿದೆ. ಕಾಂಗ್ರೆಸ್‌ನ ಇಂತಹ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ,” ಎಂದು ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!