ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೋಡಗದಾಲ ಕೆರೆ ಅಭಿವೃದ್ಧಿ ‘ ಕಾಮಗಾರಿ ’ ಹೆಸರಲ್ಲಿ ಗೋಲ್ ಮಾಲ್ ? | ಹಳೆ ಕಾಮಗಾರಿಯ ಜಾಗದಲ್ಲೇ ಹೊಸ ಕಾಮಗಾರಿ ಎಂಬ ಆರೋಪ | ತನಿಖೆಗೆ ಗ್ರಾಮಸ್ಥರ ಆಗ್ರಹ.

20 ಲಕ್ಷದ ಕಾಮಗಾರಿಯು ಒಂದು ದಿನದಲ್ಲಿ ಮುಕ್ತಾಯ.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಸರ್ಕಾರದ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿ, ಗುಣಮಟ್ಟದ ಕಾಮಗಾರಿ ನಡೆಸಬೇಕಾದ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಮೇಲಿದೆ. ಆದರೆ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋಡಗದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಗದಾಲ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಯೊಂದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸುಮಾರು ₹20 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಒಂದು ದಿನದ ಕಾಮಗಾರಿ ಕೇವಲ 10 ನಿಮಿಷದಲ್ಲಿ ಆರಂಭವಾಗಿ ಮುಕ್ತಾಯವಾಗಿದೆ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಳೆ ಕಾಮಗಾರಿ ನಡೆದ ಜಾಗದಲ್ಲೇ ಮತ್ತೆ ಕಾಮಗಾರಿ?
ಕೋಡಗದಾಲ ಕೆರೆಯಲ್ಲಿ ಈ ಹಿಂದೆ ಕಾಮಗಾರಿ ನಡೆದಿತ್ತು ಎನ್ನಲಾಗುತ್ತಿದೆ. ಇದೀಗ ಅದೇ ಸ್ಥಳದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಡಿ ಮತ್ತೊಂದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದರ ಜತೆಗೆ ಕಾಮಗಾರಿ ಸ್ಥಳದಲ್ಲಿರುವ ಬೋರ್ಡ್‌ನಲ್ಲೇ ಹೊಸ ಕಾಮಗಾರಿಗೆ ಸಂಬಂಧಿಸಿದ ವಿವರ ಹಾಗೂ ಸುಮಾರು ₹20 ಲಕ್ಷ ಅನುದಾನದ ಮಾಹಿತಿ ನಮೂದಿಸಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಅನುಮಾನ ಮೂಡಿಸಿದೆ.
“ಈ ಹಿಂದೆ ಕೆಲಸ ನಡೆದಿದ್ದ ಜಾಗದಲ್ಲೇ ಮತ್ತೆ ಕಾಮಗಾರಿ ಏಕೆ? ಹಿಂದಿನ ಕಾಮಗಾರಿಯ ಸ್ಥಿತಿ ಏನು? ಹೊಸ ಕಾಮಗಾರಿಗೆ ಎಷ್ಟು ಹಣ ಮಂಜೂರಾಗಿದೆ? ನಿಜವಾಗಿ ಎಷ್ಟು ಹಣ ಖರ್ಚಾಗಿದೆ ? ” ಎಂಬ ಪ್ರಶ್ನೆಗಳನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ.
ಕ್ಯಾಮೆರಾದಲ್ಲಿ ಸೆರೆಯಾದ ‘10 ನಿಮಿಷದ ಕಾಮಗಾರಿ’!
ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಕೆಲಸ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಕೆಲಸ ಮುಕ್ತಾಯಗೊಳಿಸಿರುವ ದೃಶ್ಯಗಳು ಜಿಪಿಎಸ್‌ ಆಧಾರಿತ ವಿಡಿಯೋದಲ್ಲಿ ಸೆರೆಯಾಗಿವೆ ಎನ್ನಲಾಗುತ್ತಿದೆ.
ಇದರಿಂದ ₹20 ಲಕ್ಷದ ಕಾಮಗಾರಿಯೊಂದು ಕೇವಲ 10 ನಿಮಿಷದಲ್ಲೇ ಪೂರ್ಣಗೊಂಡಿತೇ? ಎಂಬ ಪ್ರಶ್ನೆ ಉದ್ಭವಿಸಿದೆ.
ಕಾಮಗಾರಿ ನಿಗದಿತ ಪ್ರಮಾಣದಲ್ಲಿ ನಡೆದಿದೆಯೇ, ಕಾರ್ಮಿಕರ ಹಾಜರಾತಿ ಎಷ್ಟು, ಕೆಲಸಕ್ಕೆ ಬಳಸಿದ ಸಾಮಗ್ರಿಗಳ ಪ್ರಮಾಣ ಎಷ್ಟು, ಕಾಮಗಾರಿ ಅಳತೆ ಹಾಗೂ ಬಿಲ್‌ ಪಾವತಿ ಹೇಗೆ ನಡೆದಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪಿಡಿಒಗೆ ಪ್ರಶ್ನೆ… ಉತ್ತರ ಮಾತ್ರ ಏನು?

ಈ ಕುರಿತು ಕೋಡಗದಾಲ ಗ್ರಾಮ ಪಂಚಾಯಿತಿ ಪಿಡಿಒ ಸೌಮ್ಯವತಿ ಅವರನ್ನು ಪ್ರಶ್ನಿಸಿದಾಗ, ಗುರುತಿನ ಚೀಟಿ ನೀಡುವಂತೆ ಹಾಗೂ ಚಾನೆಲ್ ಮುಖ್ಯಸ್ಥರ ಸಂಪರ್ಕ ಸಂಖ್ಯೆ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.
” 10 ನಿಮಿಷದಲ್ಲಿ ಒಂದು ದಿನದ ಕಾಮಗಾರಿ ಮುಗಿದಿದೆಯೇ? ” ಎಂಬ ಪ್ರಶ್ನೆಗೆ, “ಅವರು ಸಮಯಕ್ಕೆ ಕೆಲಸ ಮಾಡಿದ್ದಾರೆ” ಎಂದು ಉತ್ತರಿಸಿದ್ದು, ಕಾಮಗಾರಿಗೆ ಸಂಬಂಧಿಸಿದಂತೆ ಆಡಿಟ್ ನಡೆಯುತ್ತಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ಕಾಮಗಾರಿಯ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಅನುದಾನದ ಮೊತ್ತ, ಕಾಮಗಾರಿಯ ಅಂದಾಜು, ಕಾಮಗಾರಿಯ ಅವಧಿ, ಅಳತೆ ಹಾಗೂ ಹಣ ಪಾವತಿ ಸೇರಿದಂತೆ ಎಲ್ಲಾ ವಿವರಗಳು ಪಾರದರ್ಶಕವಾಗಿರಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಸಾರ್ವಜನಿಕರ ಪ್ರಶ್ನೆಗಳು
▪ ₹20 ಲಕ್ಷದ ಕಾಮಗಾರಿ ಕೇವಲ 10 ನಿಮಿಷದಲ್ಲಿ ಮುಕ್ತಾಯವಾಗಲು ಸಾಧ್ಯವೇ?
▪ ಇದೇ ಸ್ಥಳದಲ್ಲಿ ಈ ಹಿಂದೆ ಕಾಮಗಾರಿ ನಡೆದಿದ್ದರೆ, ಮತ್ತೆ ಹೊಸ ಕಾಮಗಾರಿ ಕೈಗೆತ್ತಿಕೊಂಡಿದ್ದು ಏಕೆ?
▪ ಕಾಮಗಾರಿಯ ಸಂಪೂರ್ಣ ಅಂದಾಜು ಹಾಗೂ ತಾಂತ್ರಿಕ ಅನುಮೋದನೆ ಏನು?
▪ ಕಾರ್ಮಿಕರ ಹಾಜರಾತಿ ಮತ್ತು ಕೆಲಸದ ದಿನಗಳ ದಾಖಲೆ ಇದೆಯೇ?
▪ ಕಾಮಗಾರಿ ಅಳತೆ ಪುಸ್ತಕದಂತೆ ಕೆಲಸ ನಡೆದಿದೆಯೇ?
▪ ₹20 ಲಕ್ಷದ ಅನುದಾನದಲ್ಲಿ ನಿಜವಾಗಿ ಎಷ್ಟು ಹಣ ಖರ್ಚಾಗಿದೆ?
▪ ಕಾಮಗಾರಿಯ ಗುಣಮಟ್ಟವನ್ನು ಯಾರು ಪರಿಶೀಲಿಸಿದ್ದಾರೆ?
▪ ಕಾಮಗಾರಿ ಪೂರ್ಣಗೊಂಡಿದ್ದರೆ ಅದರ ಬಿಲ್ ಯಾರಿಗೆ ಮತ್ತು ಯಾವ ಆಧಾರದ ಮೇಲೆ ಪಾವತಿಯಾಗಿದೆ?
“ಸರ್ಕಾರದ ಹಣ… ಸಾರ್ವಜನಿಕರ ಹಣ”
“ಸರ್ಕಾರದ ಅನುದಾನ ಎಂದರೆ ಅದು ಸಾರ್ವಜನಿಕರ ಹಣ. ಕಾಮಗಾರಿ ನಿಜವಾಗಿ ನಡೆದಿದ್ದರೆ ಅದರ ಸಂಪೂರ್ಣ ದಾಖಲೆಗಳನ್ನು ಅಧಿಕಾರಿಗಳು ಬಹಿರಂಗಪಡಿಸಲಿ. ತಪ್ಪೇನೂ ಇಲ್ಲದಿದ್ದರೆ ತನಿಖೆಗೆ ಹೆದರಬೇಕಾದ ಅಗತ್ಯವಿಲ್ಲ. ಆದರೆ ಅನುಮಾನಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು” ಎಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮಗಾರಿ ಹೆಸರಿನಲ್ಲಿ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ, ತಾಂತ್ರಿಕ ಅಳತೆ, ಬಿಲ್‌ ಪರಿಶೀಲನೆ, ಕಾಮಗಾರಿ ದಾಖಲೆ ಹಾಗೂ ಅನುದಾನದ ಬಳಕೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತನಿಖೆಯಿಂದಷ್ಟೇ ಸತ್ಯ ಹೊರಬರಬೇಕು
ಕೋಡಗದಾಲ ಕೆರೆಯ ಕಾಮಗಾರಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಆರೋಪಗಳು ಸತ್ಯವೇ ಅಥವಾ ಆರೋಪಗಳಷ್ಟೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ. ₹20 ಲಕ್ಷದ ಅನುದಾನದಲ್ಲಿ ಕಾಮಗಾರಿ ನಿಯಮಾನುಸಾರ ನಡೆದಿದೆಯೇ? 10 ನಿಮಿಷದಲ್ಲಿ ಕಾಮಗಾರಿ ಮುಗಿದಿದೆ ಎಂಬ ಆರೋಪದಲ್ಲಿ ಸತ್ಯಾಂಶವಿದೆಯೇ? ಹಳೆಯ ಕಾಮಗಾರಿ ನಡೆದಿದ್ದ ಸ್ಥಳದಲ್ಲೇ ಮತ್ತೆ ಕಾಮಗಾರಿ ನಡೆದಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆ ಉತ್ತರ ನೀಡಬೇಕಿದೆ.
ಸಾರ್ವಜನಿಕರ ಹಣ ಪೋಲಾಗದಂತೆ ಸಂಬಂಧಪಟ್ಟ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಂಶವನ್ನು ಸಾರ್ವಜನಿಕರ ಮುಂದೆ ಇಡಬೇಕಿದೆ.

ವರದಿ. ಪ್ರಸನ್ನ ಕುಮಾರ್ . ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!