ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಸಾಧಕ, 20 ವಿಶ್ವದಾಖಲೆಗಳ ಮೂಲಕ ಚಿನ್ನದ ಜಿಲ್ಲೆ ಕೋಲಾರದ ಕೀರ್ತಿಯನ್ನು ಪ್ರಂಪಚದ ಉದ್ದಗಲಕ್ಕೂ ಪಸರಿಸಿರುವ ಬಾಲಕ, ಮಾಲೂರು ತಾಲ್ಲೂಕು ಲಕ್ಕೂರು ಗ್ರಾಮದ ಯುವಕವಿ ಲಕ್ಕೂರು ಎಂ.ನಾಗರಾಜ್ ಹಾಗೂ ಭರತನಾಟ್ಯ ಗುರುಗಳಾದ ಶ್ರೀಮತಿ ಶ್ವೇತ ನಾಗರಾಜ್ ರವರ ಕೇವಲ 8 ವರ್ಷದ ಪುತ್ರ ತಾನೀಶ್.ಎನ್ ಬರೆದಿರುವ “ಮಿನುಗು ತಾರೆ” ಎಂಬ ಚುಟುಕು ಕವನ ಸಂಕಲನವು ಇದೇ ತಿಂಗಳ ಆಗಸ್ಟ್-30 ರ ಭಾನುವಾರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಲೋಕಾರ್ಪಣೆಯಾಗಲು ಸಜ್ಜಾಗಿ ನಿಂತಿದೆ.
ತಾನೀಶ್.ಎನ್ “ಮಿನುಗು ತಾರೆ” ಚುಟುಕು ಕವನ ಸಂಕಲನದಲ್ಲಿ ನೂರು ಪ್ರಕಾರದಲ್ಲಿನ ವಿವಿಧ ಶೀರ್ಷಿಕೆಗಳ ಚುಟುಕುಗಳು ಅಡಗಿದೆ. ಮಿನುಗು ತಾರೆಯ ಕಣಜದಲ್ಲಿರುವ ಅಮ್ಮ, ಪ್ರಕೃತಿ, ಶಾಲೆ, ಗ್ರಂಥಾಲಯ, ಗಿಡ, ಮರ, ನಾಡು, ಭೀಮ, ಬೆಳಕು, ಸಾವಿರ ಕನಸು, ಅಪ್ಪ, ಆನೆ ಈ ರೀತಿಯ ಚುಟುಕುಗಳನ್ನು ಬರೆಯಲಾಗಿದೆ.
ತಾನೀಶ್. ಎನ್ ಬರೆದಿರುವ ಮಿನುಗು ತಾರೆ ಪುಸ್ತಕಕ್ಕೆ ಹಾಸ್ಯ ಕವಿಗಳಾದ ಎಂ. ಎಸ್. ನರಸಿಂಹ ಮೂರ್ತಿ ರವರು “ಮುನ್ನುಡಿ” ಬರೆದು ಶುಭ ಹಾರೈಸಿದ್ದಾರೆ. ಬೆನ್ನುಡಿಯನ್ನು ಜ್ಞಾನ ಗಂಗಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದ ಮಣ್ಣೆ ಮೋಹನ್ ರವರು ಬರೆದು ಪ್ರಶಂಸಿಸಿದ್ದಾರೆ.
ಮಿನುಗು ತಾರೆ ಚುಟುಕು ಕವನ ಸಂಕಲನಕ್ಕೆ ಪಬ್ಲಿಕ್ ಟಿವಿ ಅರುಣ್ ಬಡಿಗೇರ್, ರಾಷ್ಟ್ರಕವಿ ಕುವೆಂಪು ರವರ ಅಳಿಯ, ನಿವೃತ್ತ ಕುಲಪತಿಗಳಾದ ಡಾ|| ಚಿದಾನಂದ ಗೌಡ, ನಿವೃತ್ತ ಜಿಲ್ಲಾಧಿಕಾರಿಗಳಾದ ಡಾ|| ಡಿ. ಎಸ್. ವಿಶ್ವನಾಥ್, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಕರವೇ ರಾಜ್ಯ ಅಧ್ಯಕ್ಷರಾದ ಹೆಚ್.ಶಿವರಾಮೇಗೌಡ, ವಿಕಾಸ ರಂಗದ ವ.ಚ ಚನ್ನೇಗೌಡ, ಕ್ರೈಸ್ಟ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ವಿಕಾಸ್,
ಕೋಲಾರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಜೆ.ಜಿ ನಾಗರಾಜ್, ಮಾಲೂರಿನ ಜ.ಮು ಚಂದ್ರ, ಡಾ.ನಾ.ಮುನಿರಾಜ್, ಸಂಜೆ ಎಕ್ಸ್ ಪ್ರೆಸ್ ದಿನಪತ್ರಿಕೆಯ ಸಂಪಾದಕರಾದ ಚಂದ್ರಶೇಖರ್ ಗೌಡ, ಮಾರ್ಕೊಂಡಪ್ಪ, ಬಂಗಾರಪೇಟೆ ಲಕ್ಷ್ಮಯ್ಯ, ಕೋಲಾರ ಶಂಕರ್ ಹಾಗೂ ಕ್ರೈಸ್ಟ್ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕರು ಶುಭನುಡಿ ಬರೆದು ಶುಭ ಹಾರೈಸಿದ್ದಾರೆ.
ತಾನೀಶ್.ಎನ್ ಕೇವಲ 8 ನೇ ವಯಸ್ಸಿನಲ್ಲಿ ಈ ರೀತಿಯ “ಮಿನುಗು ತಾರೆ” ಚುಟುಕು ಪುಸ್ತಕ ಬರೆದಿರುವುದು ಕರ್ನಾಟಕ ರಾಜ್ಯದಲ್ಲಿಯೇ ಅತಿ ಕಿರಿಯ ವಯಸ್ಸಿನ ಬಾಲಕ ಎಂದು ಬಾಲಕವಿಯಾಗಿ ಇತಿಹಾಸದ ಪುಟದಲ್ಲಿ ದಾಖಲಾಗುತ್ತಿದ್ದಾನೆ.
“ಮಿನುಗು ತಾರೆ” ಚುಟುಕು ಸಂಕಲನವನ್ನು ಆಗಸ್ಟ್-30 ರ ಭಾನುವಾರ ಬೆಳಿಗ್ಗೆ 7.30 ಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಸಭಾಂಗಣದಲ್ಲಿ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬಿಡುಗಡೆ ಆಗಲಿದೆ.
ಈ ಬಗ್ಗೆ ಮಾತನಾಡಿರುವ “ಮಿನುಗು ತಾರೆ” ಚುಟುಕು ಕವನ ಸಂಕಲನದ ಬಾಲಕವಿ ತಾನಿಶ್ .ಎನ್. ” ನಾನು ಇಲ್ಲಿಯವರೆಗೂ ವಿವಿಧ ಕ್ಷೇತ್ರಗಳಲ್ಲಿನ ವಿಶ್ವದಾಖಲೆಗಳಲ್ಲಿ ಮಾಡಿರುವ 20 ವಿಶ್ವದಾಖಲೆಗಳು ಸಂತಸ ತಂದರೆ, ಇದು ನನಗೆ ಹೆಚ್ಚು ಹೆಚ್ಚು ಸಂತಸ ತಂದಿದೆ. “ಮಿನುಗು ತಾರೆ” ಯಲ್ಲಿ ನಾನು ಬರೆದಿರುವ ಚುಟುಕುಗಳು ಸಮಾಜದ ಎಲ್ಲಾ ಜನರ ಕೈಗೆ, ಮಕ್ಕಳ ತಲುಪಿ ಓದಿದಂತಾಗಲಿ, ಮಕ್ಕಳ ಬರಹಕ್ಕೆ ಪ್ರೋತ್ಸಾಹ ನೀಡಿ ಬೆಳೆಸಿಲಿ. ನನ್ನ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಚುಟುಕುಗಳನ್ನು ಬರೆಯುವಂತೆ ಸ್ಫೂರ್ತಿ ತುಂಬಿದ ಅಪ್ಪ-ಅಮ್ಮನಿಗೆ ಹೃದಯದ ಪೂರ್ವಕ ಅಭಿನಂದನೆ”ಎಂದರು.
ಅಪ್ಪ – ಅಮ್ಮನ ಪ್ರೀತಿಯ ಮಾತುಗಳನ್ನು ಮಾತನಾಡುತ್ತಾ “ತಾನೀಶ್.ಎನ್ ಪ್ರಪ್ರಥಮ ಚುಟುಕು ಕವನ ಸಂಕಲನ “ಮಿನುಗು ತಾರೆ” ಒಂದು ಪ್ರಮುಖ ಐತಿಹಾಸಿಕ ದಾಖಲೆ ಆಗುತ್ತಿದೆ. ಅತಿ ಚಿಕ್ಕ ವಯಸ್ಸಿನಲ್ಲಿ ಪುಸ್ತಕ ಬರೆದಿರುವ ಕರ್ನಾಟಕ ರಾಜ್ಯದ ಮೊದಲನೆಯ ಬಾಲಕ ಎಂಬುದು ಬಹಳ ಹೆಮ್ಮೆ ಎಂಬುವುದಾದರೆ, ಮತ್ತೊಂದು ಕಡೆ ಸಾಹಿತ್ಯ ಕ್ಷೇತ್ರಕ್ಕೆ ಬಾಲಕವಿಯಾಗಿ ಹೆಜ್ಜೆ ಹಾಕುತ್ತಿರುವುದು ಸಹ ನಮಗೆ ಸಂತಸ “ಎಂದರು.
- ಕರುನಾಡ ಕಂದ ಸುದ್ದಿ




















