
ಬಳ್ಳಾರಿ / ಕಂಪ್ಲಿ : ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದ್ದು ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ಮಾಡಬೇಕು ಎಂದು ತಾಲೂಕು ದೈಹಿಕ ಪರಿವೀಕ್ಷಕಿ ಪದ್ಮಾರೆಡ್ಡಿ ಹೇಳಿದರು.
ಪಟ್ಟಣದ ಷಾಮಿಯಾಚಂದ್ ಸರಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎರಡು ದಿನದ 2026ರ ಕಂಪ್ಲಿ ವಲಯ 2ರ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದ ಕ್ರೀಡಾಜ್ಯೋತಿ ಬೆಳಗಿಸಿದ ನಂತರ ಮಾತನಾಡಿ, ಕ್ರೀಡೆ ಮೆರೆಯಲು ಕಾರಣೀಭೂತರಾಗಿದ್ದಾರೆ.
ಕಂಪ್ಲಿ ತಾಲೂಕು ಮಟ್ಟದಲ್ಲಿ ಅತ್ಯಂತ ಬಲಿಷ್ಠ ಕ್ರೀಡೆ ಮಕ್ಕಳಲ್ಲಿ ಕಾಣಬಹುದು. ದೈಹಿಕ ಶಿಕ್ಷಕರ ನ್ಯಾಯಯುತ ತೀರ್ಪುಗಳಿಗೆ ಮಕ್ಕಳು ಬದ್ಧರಾಗಿರಬೇಕು. ಮಕ್ಕಳು ಸೋಲು-ಗೆಲುವು ಎನ್ನದೇ ಕ್ರೀಡೆಯಲ್ಲಿ ಭಾಗವಹಿಸಿ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹಾಗೂ ವಲಯ 2ರ ಕ್ರೀಡಾಕೂಟದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ವಿದ್ಯಾರ್ಥಿಗಳ ದ್ಯಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಶಿಸ್ತು ಆತ್ಮವಿಶ್ವಾಸ ಹಾಗೂ ಕ್ರೀಡಾಸ್ಪೂರ್ತಿಯನ್ನು ಬೆಳಸಿಕೊಳ್ಳಬೇಕು ಎಂದರು.
ನಂತರದ ಕಬಡ್ಡಿ, ಖೋ ಖೋ, ಥ್ರೋಬಾಲ್, ರನ್ನಿಂಗ್ ಸೇರಿದಂತೆ ಇನ್ನಿತರ ಕ್ರೀಡೆಗಳು ನಡೆದವು. ಇಲ್ಲಿನ ಕ್ರೀಡೆಯಲ್ಲಿ ದೇವಸಮುದ್ರ, ಮೆಟ್ರಿ, ಸುಗ್ಗೇನಹಳ್ಳಿ ಕ್ಲಸ್ಟರ್‌ನ 34 ಶಾಲೆ ಮಕ್ಕಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಷಾಮಿಯಾಚಂದ್ ಸರಕಾರಿ ಪ್ರೌಢಶಾಲಾ ಉಪ ಪ್ರಾಚಾರ್ಯ ಸುಜಾತ, ಇಸಿಒ ರೇವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹೆಚ್.ಜಡೆಪ್ಪ, ಖಜಾಂಚಿ ಐ.ಗಂಗಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ದೊಡ್ಡಬಸಪ್ಪ, ಜಿಪಿಟಿ ಸಂಘದ ಅಧ್ಯಕ್ಷ ಮಂಜುನಾಥ, ಸಿಆರ್‌ಪಿಗಳಾದ ಎ.ಎಸ್.ಭೂಮೇಶ್ವರ, ಗಾದಿಲಿಂಗಪ್ಪ, ಕರುಣಾಕರ, ಕ್ರೀಡಾಕೂಟದ ಕಾರ್ಯದರ್ಶಿ ನಿಂಗರಾಜ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಭೀರಲಿಂಗಪ್ಪ, ಕಾರ್ಯದರ್ಶಿ ಅಬ್ದುಲ್ ಅಜೀಜ್, ಬಡ್ತಿ ಮುಖ್ಯಗುರು ಇಮಾಮ್ ಸಾಬ್, ಅಂಗವಿಕರ ಸಂಘದ ಅಧ್ಯಕ್ಷ ರುದ್ರಪ್ಪ ಸೇರಿದಂತೆ ಶಾಲಾ ಮುಖ್ಯಗುರುಗಳು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















