ಕೊಪ್ಪಳ / ಗಂಗಾವತಿ : ಕರ್ನಾಟಕ ಗೃಹರಕ್ಷಕ ದಳದ ಕೊಪ್ಪಳ ಜಿಲ್ಲೆಯ ಗಂಗಾವತಿ ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಆಗಿ ಅತ್ಯುತ್ತಮ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀ ಮೀರಾ ಸಾಬ್ ಮಹಬೂಬ ಸಾಬ್ ಮುಲ್ಲಾ ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ‘ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಈ ಮಹತ್ವದ ಸಾಧನೆಗೆ ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಹಾಗೂ ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾಸಮಾದೇಷ್ಟರಾದ ಪ್ರಶಾಂತ್ ಕುಮಾರ್ ಠಾಕೂರ್ (ಐ.ಪಿ.ಎಸ್) ಅವರು ಅಧಿಕೃತ ಅಭಿನಂದನಾ ಪತ್ರ ನೀಡಿ ಶ್ಲಾಘಿಸಿದ್ದಾರೆ.
ಶಾಸಕರಿಂದ ಗೌರವ ಸನ್ಮಾನ :
ಗಂಗಾವತಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಗಂಗಾವತಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರು ಹಾಗೂ ತಹಸೀಲ್ದಾರ್ ಅವರು ಶ್ರೀ ಮೀರಾ ಸಾಬ್ ಮುಲ್ಲಾ ಅವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ಮಾತನಾಡಿ, “ಸಮಾಜದ ಶಾಂತಿ, ಸುವ್ಯವಸ್ಥೆ ಹಾಗೂ ತುರ್ತು ಸಂದರ್ಭಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಪಾತ್ರ ಅತ್ಯಂತ ಮಹತ್ವದ್ದು. ಗಂಗಾವತಿಯ ಶ್ರೀ ಮೀರಾ ಸಾಬ್ ಮುಲ್ಲಾ ಅವರ ಸುದೀರ್ಘ ಹಾಗೂ ಶ್ಲಾಘನೀಯ ಸೇವೆಯನ್ನು ಗುರುತಿಸಿ ರಾಷ್ಟ್ರಪತಿಗಳ ಪದಕ ದೊರೆತಿರುವುದು ನಮ್ಮ ಗಂಗಾವತಿ ಕ್ಷೇತ್ರಕ್ಕೆ ಮತ್ತು ಕೊಪ್ಪಳ ಜಿಲ್ಲೆಗೆ ಸಂದ ಹೆಮ್ಮೆ” ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ಹಲವು ಗಣ್ಯರಿಂದ ಹರ್ಷ ಮತ್ತು ಅಭಿನಂದನೆ:
ಶ್ರೀ ಮೀರಾ ಸಾಬ್ ಅವರಿಗೆ ರಾಷ್ಟ್ರಪತಿಗಳ ಸೇವಾ ಪದಕ ದೊರೆತಿರುವುದಕ್ಕೆ ಪ್ರಮುಖರಾದ ತಿಮ್ಮಣ್ಣ ನಾಯಕ್, ಗೋಪಾಲ್ ಶಾಸ್ತ್ರಿ, ಸಂಗಪ್ಪ ಹಿರೇಮನಿ, ಗೃಹರಕ್ಷಕ ದಳದ ಅಧಿಕಾರಿಗಳು, ಸಹ ಸಿಬ್ಬಂದಿಗಳು ಹಾಗೂ ಆತ್ಮೀಯ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















