ಬೆಳಗಾವಿ : ಸ್ವಚ್ಛತಾ ಹೀ ಸೇವಾ – 2026 ಅಭಿಯಾನದ ಸಫಾಯಿ ಮಿತ್ರ ಸೇವಾ ಮತ್ತು ಸಮ್ಮಾನ ಶಿಬಿರದ ಭಾಗವಾಗಿ ಹಾಗೂ ದಿನಾಂಕ 23-09-2026ರಂದು ಜರುಗಲಿರುವ ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಬೈಲಹೊಂಗಲ ನಗರಸಭೆ ವತಿಯಿಂದ ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ನೀರು ಸರಬರಾಜು ಸಿಬ್ಬಂದಿಗಳಿಗಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಯಿತು.
ನಗರಸಭೆ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕ್ರೀಡಾಕೂಟಕ್ಕೆ ಮಾನ್ಯ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಆರ್. ಹುಗ್ಗಿ ರವರು ಚಾಲನೆ ನೀಡಿದರು. ಕ್ರೀಡಾ ಕೂಟದಲ್ಲಿ ಕ್ರಿಕೆಟ್, ಕಬಡ್ಡಿ, ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್, ಲೆಮನ್ ಸ್ಪೂನ್ ಸೇರಿದಂತೆ ವಿವಿಧ ಮನರಂಜನಾ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಅಧಿಕಾರಿ–ಸಿಬ್ಬಂದಿಗಳು, ಪೌರಕಾರ್ಮಿಕರು ಹಾಗೂ ನೀರು ಸರಬರಾಜು ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.
ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳ ಸೇವೆಯನ್ನು ಗೌರವಿಸುವುದು, ಅವರಲ್ಲಿ ಆತ್ಮವಿಶ್ವಾಸ ಮತ್ತು ತಂಡದ ಮನೋಭಾವವನ್ನು ಹೆಚ್ಚಿಸುವುದು ಹಾಗೂ ಕೆಲಸದ ಒತ್ತಡದ ನಡುವೆ ಸ್ನೇಹಪೂರ್ಣ ವಾತಾವರಣ ನಿರ್ಮಿಸುವುದು ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿತ್ತು.
ಈ ವೇಳೆ ಮಾತನಾಡಿದ ಮಾನ್ಯ ಪೌರಾಯುಕ್ತರು “ಸ್ವಚ್ಛ ನಗರ – ಆರೋಗ್ಯಕರ ಸಮಾಜ” ನಿರ್ಮಾಣದಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪೌರಕಾರ್ಮಿಕರ ದಿನಾಚರಣೆಯಂದು ಪ್ರಶಸ್ತಿ ಮತ್ತು ಪಾರಿತೋಷಕ ವಿತರಿಸಲಾಗುವುದು ಎಂದು ತಿಳಿಸಿದರು.
ವರದಿ ಮಂಜು ಎಂ. ಚಿಕ್ಕಣ್ಣವರ




















