
ಬಳ್ಳಾರಿ / ಕಂಪ್ಲಿ : ತುಂಗಭದ್ರೆಯ ಒಡಲು ಒಣಗಿ, ಮುಂಗಾರು ಕೈಕೊಟ್ಟಾಗಲೂ ಹಠ ಬಿಡದ ಕಂಪ್ಲಿ ತಾಲ್ಲೂಕಿನ ರೈತರು ಹನಿ ಹನಿ ನೀರನ್ನು ತಂದು ಭತ್ತದ ಸಸಿಗಳನ್ನು ಪ್ರೀತಿಯಿಂದ ಸಾಕಿ ಬೆಳೆಸಿದ್ದರು. ಈ ಬಾರಿ ಮಾರುಕಟ್ಟೆಯಲ್ಲಿ ಭತ್ತಕ್ಕೆ ಚಿನ್ನದಂತಹ ಬೆಲೆ ಸಿಗುತ್ತಿರುವುದನ್ನು ಕಂಡು, “ಇನ್ನೇನು ನಮ್ಮ ಸಾಲ ತೀರಿತು , ನಮ್ಮ ಬದುಕು ಹಸನಾಗಲಿದೆ” ಎಂದು ಮುಖದಲ್ಲಿ ಮಂದಹಾಸ ಬೀರಿದ್ದರು. ಆದರೆ, ವಿಧಿಯ ಆಟ ಬೇರೆಯೇ ಇತ್ತು.
ಶುಕ್ರವಾರ ಮಧ್ಯಾಹ್ನ ಅನಿರೀಕ್ಷಿತವಾಗಿ ಸುರಿದ ಆ ಭೀಕರ ‘ಚಿತ್ತ’ ಮಳೆ, ಕೇವಲ ನೀರಾಗಿ ಬರಲಿಲ್ಲ; ರೈತರ ಬದುಕಿನ ಆಶಾಕಿರಣವನ್ನೇ ಹೊಸಕಿ ಹಾಕಿತು. ಕಟಾವಿಗೆ ಬಂದು ನಗುತ್ತಿದ್ದ ಭತ್ತದ ತೆನೆಗಳು ಭಾರೀ ಗಾಳಿಗೆ ಸಿಲುಕಿ ಅನಾಥವಾಗಿ ನೆಲಕ್ಕೊರಗಿವೆ. ಇನ್ನು ತಡರಾತ್ರಿಯವರೆಗೂ ಬೆವರು ಸುರಿಸಿ ಕಷ್ಟಪಟ್ಟು ಬಯಲಿನಲ್ಲಿ ರಾಶಿ ಹಾಕಿದ್ದ ಭತ್ತದ ರಾಶಿಗಳು ಧಾರಾಕಾರ ಮಳೆಗೆ ತೋಯ್ದು ತೊಪ್ಪೆಯಾಗಿ ಕೆಸರು ಪಾಲಾಗಿವೆ.
ತಮ್ಮ ಕಣ್ಣೆದುರೇ ಒದ್ದೆಯಾಗಿ ಬಣ್ಣಗೆಡುತ್ತಿರುವ ಭತ್ತದ ರಾಶಿಯನ್ನು ನೋಡಿ ಅನ್ನದಾತರ ಕಣ್ಣಲ್ಲಿ ರಕ್ತದ ಕಣ್ಣೀರು ಹರಿಯುತ್ತಿದೆ. ಒದ್ದೆಯಾದ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ, ಇಷ್ಟು ದಿನ ಪಟ್ಟ ಕಷ್ಟವೆಲ್ಲಾ ಮಣ್ಣು ಪಾಲಾಯಿತು ಎನ್ನುವ ರೈತರ ಒಡಲಾಳದ ಆಕ್ರಂದನ ಕಂಪ್ಲಿಯ ಮುಗಿಲು ಮುಟ್ಟಿದೆ. ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಈ ಮಳೆ ತಂಪೆರೆದಿದ್ದರೂ, ಬೆಳೆ ಕಳೆದುಕೊಂಡ ಕೃಷಿಕನಿಗೆ ಮಾತ್ರ ಇದು ಜೀವಂತ ನರಕವನ್ನು ಸೃಷ್ಟಿಸಿದೆ.
ಪ್ರಕೃತಿ ಮುನಿದಾಗ ಸರ್ಕಾರವೇ ರೈತನಿಗೆ ಬೆನ್ನೆಲುಬಾಗಿ ನಿಲ್ಲಬೇಕಾದದ್ದು ಧರ್ಮ.
ಕಂಪ್ಲಿ ತಾಲ್ಲೂಕಿನ ಈ ಭೀಕರ ಪರಿಸ್ಥಿತಿಯನ್ನು ಕಂಡು ಕರಗಬೇಕಾದ ಆಡಳಿತ ವ್ಯವಸ್ಥೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಸರ್ಕಾರ ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಜಂಟಿ ಸಮೀಕ್ಷೆ ನಡೆಸಬೇಕು. ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಅನ್ನದಾತನಿಗೆ ಸೂಕ್ತ ವೈಜ್ಞಾನಿಕ ಪರಿಹಾರವನ್ನು ವಿಳಂಬವಿಲ್ಲದೆ ತಲುಪಿಸಬೇಕು. ಹಾಗೆಯೇ, ಒದ್ದೆಯಾದ ಭತ್ತವನ್ನು ವಿಶೇಷ ರಿಯಾಯಿತಿಯೊಂದಿಗೆ ಸರ್ಕಾರವೇ ನೇರವಾಗಿ ಖರೀದಿಸಲು ತುರ್ತು ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ, ದೇಶಕ್ಕೆ ಅನ್ನ ನೀಡುವ ಜೀವಗಳು ಸಾಲದ ಸುಳಿಗೆ ಸಿಲುಕಿ ಬೀದಿಗೆ ಬೀಳುವುದು ಗ್ಯಾರಂಟಿ.
ವರದಿ : ಜಿಲಾನಸಾಬ್ ಬಡಿಗೇರ್




















