ಉತ್ತರ ಕನ್ನಡ/ಅಂಕೋಲಾ : ತಾಲೂಕಿನ ಭಾವಿಕೇರಿಯಲ್ಲಿ ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಬಡಿದು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಶೋಭಾ ಗೋಪಾಲ ನಾಯಕ ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ.
ಈಕೆ ತನ್ನ ಮನೆ ಮುಂದಿನ ಡಾಂಬರು ರಸ್ತೆ ಪಕ್ಕದ ಕಚ್ಚಾ ಮಣ್ಣಿನ ರಸ್ತೆಯಲ್ಲಿ ತನ್ನ ಗಂಡ ವೈಭವ ನಾಯಕನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈಕೆ ಸುಮಾರು 3-4 ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.
ಜವರಾಯನಂತೆ ಬಂದ ರಿಕ್ಷಾ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷದಿಂದ ತನ್ನ ವಾಹನವನ್ನು ಚಲಾಯಿಸಿ, ಮಹಿಳೆಗೆ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ, ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ. ಪಟ್ಟಣದ ಲಕ್ಷೇಶ್ವರ – ಕುಂಬಾರಕೇರಿ ವ್ಯಾಪ್ತಿಯ ಚಾಲಕ ಗರ್ಭಿಣಿ ಮಹಿಳೆಗೆ ಅಪಘಾತಪಡಿಸಿ ತಾನು ಚಲಾಯಿಸುತ್ತಿದ್ದ ರಿಕ್ಷಾ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ
ವರದಿ :ಬಸವರಾಜ್ ಬಿ ಎಸ್