ಇಂಡಿ : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ದೇಶದಲ್ಲಿ ದಕ್ಷ ಆಡಳಿತವನ್ನು ನೀಡುತ್ತಿದೆ ವೈಯಕ್ತಿಕ ಹಿತಾಸಕ್ತಿಯನ್ನು ಮರೆತು ನಾಡಿನ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿ ಎಂದು ಇಂಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಮನವಿ ಮಾಡಿಕೊಂಡರು. ನಗರ ಶಿವಾಜಿ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಭವ್ಯ ಮೆರವಣಿಗೆಯಲ್ಲಿ ತೆರಳಿ ನಾಮಪತ್ರವನ್ನು ಸಲ್ಲಿಸಿದ ನಂತರ ಮಾದ್ಯಮದವರೊಂದಿಗೆ ಮಾತನಾಡುತ್ತಾ ರೈತರ ಪರವಾಗಿ ಹೋರಾಟ ಮಾಡುತ್ತಾ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ, ನನ್ನನ್ನು ಗುರುತಿಸಿ ಪಕ್ಷವು ಟಿಕೆಟ್ ನೀಡಿದೆ, ಕ್ಷೇತ್ರದ ಎಲ್ಲ ಸಮುದಾಯದ ಜನರು ನನ್ನನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು. ದಯಾಸಾಗರ ಪಾಟೀಲ ಮಾತನಾಡಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವ ಪಕ್ಷದ ತತ್ವ ಸಿದ್ದಾಂತಗಳ ಅಡಿ ಸುಮಾರು 10 ವರ್ಷಗಳವರೆಗೆ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನೆಲ್ಲಾ ಬೆಂಬಲಿಗರು ಪಕ್ಷದ ಅಭ್ಯರ್ಥಿ ಕಾಸುಗೌಡ ಬಿರಾದಾರ ಅವರನ್ನು ಬೆಂಬಲಿಸಿ ಗೆಲ್ಲಿಸಿ ತರಬೇಕು ಎಂದು ಹೇಳಿದರು.
ಈ ಮೆರವಣಿಗೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ಶಂಕರಗೌಡ ಪಾಟೀಲ ಡಮನಾಳ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಅನಿಲ ಜಮಾದಾರ, ಶೀಲವಂತ ಉಮರಾಣಿ, ಶ್ರೀಶೈಲಗೌಡ ಬಿರಾದಾರ, ಅದೃಶ್ಯಪ್ಪ ವಾಲಿ ಇತರ ಮುಖಂಡರು ಉಪಸ್ಥಿತರಿದ್ದರು.
ವರದಿ : ವಿಜಯಕುಮಾರ ಜಂಬಗಿ (ಇಂಡಿ)